ಗದಗ: ಮಾರ್ಕೆಟ್ ಫೆಸ್ಟ್ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಕಲಿಕಾ ಚಟುವಟಿಕೆಯಾಗಿದೆ ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶರಣಬಸಪ್ಪ ಗುಡಿಮನೆ ತಿಳಿಸಿದರು.ನಗರದ ಆದರ್ಶ ಶಿಕ್ಷಣ ಸಮಿತಿಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಐಕ್ಯುಎಸಿ ಅಡಿಯಲ್ಲಿ ವಾಣಿಜ್ಯ ವಿಭಾಗದಿಂದ ನಡೆದ ಮಾರ್ಕೆಟ್ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾರ್ಕೆಟ್ ಫೆಸ್ಟ್ ಆಯೋಜನೆ ಮಾಡುವುದು ಅಷ್ಟೇ ಅಲ್ಲ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಒಂದು ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿರುವ ಆತ್ಮವಿಶ್ವಾಸ, ನೈಜ ಜೀವನದ ಅನುಭವ, ಉದ್ದಿಮೆಶೀಲ ಚಿಂತನೆ ಇವುಗಳನ್ನು ಪರಿಶೀಲಿಸಿ ಉತ್ತಮ ಸ್ಟಾಲ್‌ಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸುವುದರೊಂದಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ತುಂಬಾ ಸಂತಸ ತಂದಿದೆ ಎಂದರು.ಸಂಸ್ಥೆಯ ಚೇರ್ಮನ್ ಆನಂದ್ ಪೋತ್ನಿಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾರುಕಟ್ಟೆಯ ಅಭ್ಯಾಸ ಮಾಡಿಸುವುದು ಅಂದರೆ ಅವರಿಗೆ ವಾಸ್ತವ ಜೀವನದ ಖರೀದಿ- ಮಾರಾಟ, ಬೆಲೆ ನಿಗದಿ, ಮಾತುಕತೆ ಮತ್ತು ಹಣಕಾಸು ನಿರ್ವಹಣೆ ಬಗ್ಗೆ ಅನುಭವ ನೀಡುವ ಕಾರ್ಯಕ್ರಮ ಇದಾಗಿದ್ದು, ಮಹಾವಿದ್ಯಾಲಯದ ಆವರಣದಲ್ಲಿ ಸಣ್ಣ ಮಾರುಕಟ್ಟೆಯಂತೆ ಸಜ್ಜುಗೊಳಿಸಿ ವಿದ್ಯಾರ್ಥಿಗಳನ್ನು ಮಾರಾಟಗಾರರು ಮತ್ತು ಗ್ರಾಹಕರು ಎಂದು ವಿಭಜಿಸಿ ಹಣ ಬಳಸಿ ವ್ಯವಹಾರ ನಡೆಸುವಂತೆ ಮಾಡಿ ಒಬ್ಬರು ಅಂಗಡಿ ಮಾಲೀಕರು, ಮತ್ತೊಬ್ಬರು ಗ್ರಾಹಕರು, ಬೆಲೆ ಮಾತುಕತೆ, ರಿಯಾಯಿತಿ, ಗುಣಮಟ್ಟದ ಬಗ್ಗೆ ಚರ್ಚೆ ಮಾಡಿಸುವುದು ತೂಕಮಾಪನ, ಬೇಡಿಕೆ- ಪೂರೈಕೆ ಬಗ್ಗೆ ಖರ್ಚು, ಲಾಭ, ನಷ್ಟ ಲೆಕ್ಕ ಹಾಕಿ ಗುಂಪುಗಳಲ್ಲಿ ಯಾವ ವಸ್ತು ಹೆಚ್ಚು ಮಾರಾಟವಾಗುತ್ತದೆ.
ಮಾರುಕಟ್ಟೆಯಲ್ಲಿ ಎದುರಾದ ಸಮಸ್ಯೆಗಳು ಯಾವುವು? ಹಣಕಾಸಿನ ಜ್ಞಾನ ಸಂವಹನ ಕೌಶಲ್ಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಉದ್ಯಮಶೀಲತೆ ಹೀಗೆ ಅನೇಕ ವಿಚಾರಗಳು ಈ ಒಂದು ಕಾರ್ಯಕ್ರಮದ ಮೂಲಕ ತಿಳಿದುಕೊಂಡು ಮುಂಬರುವ ದಿನಮಾನಗಳಲ್ಲಿ ಒಳ್ಳೆಯ ಉದ್ಯಮಿಗಳಾಗಿ ಎಂದರು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಕೆ.ವಿ. ಕುಷ್ಟಗಿ, ಉಪಾಧ್ಯಕ್ಷ ಪಿ.ಆರ್. ಅಡವಿ, ಕಾರ್ಯದರ್ಶಿ ಎ.ಡಿ. ಗೋಡಕಿಂಡಿ, ಸಂಕಣ್ಣವರ, ಜಯದೇವ ಮೆಣಸಗಿ, ಪ್ರಾ. ಡಾ. ವಿ.ಟಿ. ನಾಯ್ಕರ್, ಡಾ. ಎಸ್.ಡಿ. ಬಂಡಾರ್ಕರ್, ಪ್ರೊ. ಸಲ್ಮಾ ಬೆಳಗಾಂ ಸೇರಿದಂತೆ ಇತರರು ಇದ್ದರು.