ಹುಬ್ಬಳ್ಳಿ: ವಾಣಿಜ್ಯ ನಗರಿಯಾಗಿ ಹೊರಹೊಮ್ಮಿರುವ ಹುಬ್ಬಳ್ಳಿ ಮುಂದಿನ ದಿನಗಳಲ್ಲಿ ಮೆಡಿಕಲ್ ಹಬ್ ಆಗುವತ್ತ ದಾಫುಗಾಲಿಡುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರವು ವೈದ್ಯಕೀಯ ಕ್ಷೇತ್ರದಲ್ಲಿ ಮುಂದೆ ಸಾಗುತ್ತಿದೆ. ಹಿಂದೆ ಗುಣಮಟ್ಟದ ಚಿಕಿತ್ಸೆ ಪಡೆದುಕೊಳ್ಳಲು ಬೆಂಗಳೂರು, ದೆಹಲಿಯಂತಹ ಮಹಾನಗರವನ್ನು ಅವಲಂಬಿಸಲಾಗಿತ್ತು. ಆದರೆ, ಗುಣಮಟ್ಟದ ಚಿಕಿತ್ಸೆ ನೀಡುವ ಎಲ್ಲ ಸೌಲಭ್ಯಗಳನ್ನು ಹುಬ್ಬಳ್ಳಿ ಹೊಂದಿರುವುದು ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.
"ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ " ಸಹಯೋಗದೊಂದಿಗೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಆಯೋಜಿಸಿರುವುದು ಅಭಿನಂದನಾರ್ಹ. ಒಂದೇ ಸ್ಥಳದಲ್ಲಿ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯ ಕೈಗೊಂಡಿರುವುದು ಉತ್ತಮ ಕಾರ್ಯ ಎಂದರು.ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಜೀವನದ ಶೈಲಿಯಿಂದಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ. ಇದನ್ನರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಒಂದೇ ಸೂರಿನಡಿ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಸ್ವರ್ಣಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಈ ಭಾಗದ ಜನತೆಯ ಆರೋಗ್ಯ ಕಾಳಜಿಯಿಂದಾಗಿ ಹುಬ್ಬಳ್ಳಿಯಲ್ಲಿ ಬೃಹತ್ ಆರೋಗ್ಯ ಶಿಬಿರ ಆಯೋಜಿಸಿರುವುದು ಅಭಿನಂದನಾರ್ಹ. ಮುಂದಿನ ದಿನಗಳಲ್ಲೂ ಇಂತಹ ಶಿಬಿರಗಳನ್ನು ಸಂಸ್ಥೆಯ ಮೂಲಕ ಹಮ್ಮಿಕೊಳ್ಳುವಂತಾಗಲಿ. ಜತೆಗೆ ಇದೇ ಮಾದರಿಯಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಸುವರ್ಣ ಆರೋಗ್ಯ ಶಿಬಿರ ನಡೆಯುವಂತಾಗಲಿ ಎಂದು ಸಲಹೆ ನೀಡಿದರು.ಅತಿಥಿಗಳಾಗಿ ಆಗಮಿಸಿದ್ದ ಯಲುಬು ಮತ್ತು ಕೀಲು ತಜ್ಞ ಡಾ. ವಿವೇಕ ಪಾಟೀಲ ಮಾತನಾಡಿ, ಈ ಹಿಂದೆ ಶಸ್ತ್ರಚಿಕಿತ್ಸೆ, ಗುಣಮಟ್ಟದ ಚಿಕಿತ್ಸೆಗೆ ಬೆಂಗಳೂರಿನಂತಹ ದೊಡ್ಡ ನಗರಗಳ ಮೇಲೆ ಅವಲಂಬಿತರಾಗಿದ್ದರು. ಆದರೆ, ಇಂದು ಬದಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹುಬ್ಬಳ್ಳಿ ನಗರವು ಇತರೇ ಮಹಾನಗರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಜತೆಗೆ ಇಲ್ಲಿನ ಹಲವು ಆಸ್ಪತ್ರೆಗಳು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಮಾದರಿ ಕಾರ್ಯ ಕೈಗೊಳ್ಳುತ್ತಿದ್ದಾರೆ. ಜತೆಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಮೂಲಕ ಬಡವರ ಆರೋಗ್ಯ ಕಾಳಜಿಗೆ ಕೈಜೋಡಿಸುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಸಂಪಾದಕ ಅಜಿತ್ ಹನುಮಕ್ಕನವರ ಮಾತನಾಡಿ, ಪತ್ರಿಕೋದ್ಯಮ ಹಾಗೂ ವೈದ್ಯಕೀಯ ಕ್ಷೇತ್ರಗಳು ಎರಡೂ ಸಮಾಜಕ್ಕೆ ಚಿಕಿತ್ಸಕರಿದ್ದಂತೆ. ಪತ್ರಿಕೋದ್ಯಮವು ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದರೆ, ವೈದ್ಯಕೀಯ ಕ್ಷೇತ್ರವು ಜನರಲ್ಲಿ ಆರೋಗ್ಯ ಸಮಸ್ಯೆ ಸರಿಪಡಿಸುವ ಕಾರ್ಯ ಮಾಡುವುದರೊಂದಿಗೆ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಉತ್ತರ ಕರ್ನಾಟಕ ಭಾಗದ ಜನತೆಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಯಶಸ್ಸಿನ ಆಧಾರದ ಮೇಲೆ ಪ್ರತಿ ಜಿಲ್ಲೆಗಳಲ್ಲೂ ಇಂತಹ ಆರೋಗ್ಯ ಶಿಬಿರ ಆಯೋಜಿಸುವ ಯೋಚನೆಯಿದೆ ಎಂದರು.ಉಪನ್ಯಾಸ: ಉದ್ಘಾಟನೆಯ ಬಳಿಕ ಹೃದ್ರೋಗ ತಜ್ಞ ವಿಜಯಕೃಷ್ಣ ಕೊಳೂರ ಅವರಿಂದ ಹೃದಯ ಕಾಯಿಲೆಗಳ ಬಗ್ಗೆ ಉಪನ್ಯಾಸ ನೀಡಿ, ಸಂವಾದ ನಡೆಸಿದರು. ನಂತರ ಮಕ್ಕಳಲ್ಲಿನ ಸ್ಥೂಲಕಾಯತೆಗೆ ಅಪಾಯಕಾರಿ ಅಂಶಗಳು ವಿಷಯ ಕುರಿತು ಡಾ. ಶ್ರೀಹರ್ಷ ಬಡಿಗೇರ, ಆಯುರ್ವೇದ, ಪಂಚಕರ್ಮ ಚಿಕಿತ್ಸೆ ಕುರಿತು ಡಾ. ಶ್ರೀನಿವಾಸ ಬನ್ನಿಗೋಳ, ಎಂ.ಎಂ. ಜೋಶಿ ನೇತ್ರ ಸಂಸ್ಥೆಯ ಡಾ. ಕೃಷ್ಣ ಪ್ರಸಾದ ಅವರಿಂದ ಚಿಕ್ಕಮಕ್ಕಳಲ್ಲಿ ಉಂಟಾಗುವ ಕಣ್ಣಿನ ಸಮಸ್ಯೆ ಕುರಿತು ಉಪನ್ಯಾಸ ನಡೆಯಿತು.