ಗದಗ: ತನ್ನ ವಾಣಿಜ್ಯ ಮಳಿಗೆ ಹಂಚಿಕೆಯಲ್ಲಿ ಆಗಿರುವ ಭಾರೀ ಹಗರಣದ ತನಿಖೆ ನಡೆಸುವ ಉದ್ದೇಶದಿಂದ, ಮೊದಲ ಹಂತವಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಿನಲ್ ಮೊಕದ್ದಮೆ ದಾಖಲಿಸಲು ಗದಗ-ಬೆಟಗೇರಿ ನಗರಸಭೆ ನಿರ್ಧರಿಸಿದೆ.
ಕ್ಲಾಥ್ ಮಾರ್ಕೆಟ್ ಹಾಗೂ ಗ್ರೇನ್, ಗ್ರೋಸರಿ ಮಾರುಕಟ್ಟೆಯಲ್ಲಿನ ಮಳಿಗೆಗಳಿಗೆ ನಗರಸಭೆಯ ಗಮನಕ್ಕೆ ತರದೇ 5 ವರ್ಷದ ಬಾಡಿಗೆ ಮುಂಗಡವಾಗಿ ಭರಿಸಿರುವುದು ಗಂಭೀರ ಲೋಪವಾಗಿದೆ, ತಕ್ಷಣವೇ ಹಣ ಭರಿಸಿದ ಎಲ್ಲರಿಗೂ ಮರಳಿಸಿ ಹಾಗೂ ಅಕ್ರಮದಲ್ಲಿ ಭಾಗಿಯಾದ ಎಲ್ಲರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ನಗರಸಭೆ ಸದಸ್ಯರು ಒತ್ತಾಯಿಸಿದರು.
ದೊಡ್ಡ ಹಗರಣ: ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ, ಅಧ್ಯಕ್ಷೆ ಉಷಾ ದಾಸರ ಅವರ ಅವಧಿಯಲ್ಲಿ ಯಾವುದೇ ಮಹತ್ತರ ಅಭಿವೃದ್ಧಿ ಕಂಡಿಲ್ಲ. ಬದಲಾಗಿ ಅವಳಿ ನಗರದ ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿ ಭಾರೀ ಹಗರಣವಾಗಿದೆ ಎಮದು ಆರೋಪಿಸಿ, ಮಳಿಗೆಗಳ ಇತಿಹಾಸ, ಯಾವ ಕಾರಣಕ್ಕಾಗಿ ಅವುಗಳನ್ನು ಅಂದಿನ ಹಿರಿಯರು ಲೀಜ್ ನೀಡಿದ್ದರು. ಸಧ್ಯದ ಅದರ ಸ್ಥಿತಿ ಏನಾಗಿದೆ. ನ್ಯಾಯಾಲಯದಲ್ಲಿನ ಪ್ರಕರಣ ಯಾವ ಹಂತದಲ್ಲಿದೆ, ನಗರಸಭೆಯ ಆಸ್ತಿ ಉಳುವಿಗಾಗಿ ನಗರಸಭೆಯ ಆಡಳಿತ ಮಂಡಳಿ ಯಾವ ಕ್ರಮ ತೆಗೆದುಕೊಂಡಿದೆ ಎನ್ನುವುದರ ಕುರಿತು ಸುಧೀರ್ಘವಾಗಿ ಮಾತನಾಡಿದರು.ವಾಣಿಜ್ಯ ಮಳಿಗೆಗಳ ಮುಂಗಡ ಬಾಡಿಗೆ ಹಣ ₹25 ಲಕ್ಷ ಚಲನ್ ಮೂಲಕ ಸರ್ಕಾರಕ್ಕೆ ಜಮೆಯಾಗಿದೆ, ಅದನ್ನು ಅವರಿಗೆ ಮರಳಿಸುತ್ತೀರಿ, ಆದರೆ ಈ ಪ್ರಕರಣದಲ್ಲಿ ಪ್ರಭಾವಿಗಳಿದ್ದು ಅವರು ಕ್ಲಾಥ್ ಮಾರುಕಟ್ಟೆಗೆ ₹ 50 ಲಕ್ಷ, ಗ್ರೇನ್ ಗ್ರೋಸರಿ ಮಾರುಕಟ್ಟೆಗೆ ₹50 ಲಕ್ಷ ಸೇರಿದಂತೆ ಒಂದು ಕೋಟಿಗೂ ಅಧಿಕ ಲಂಚ ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸದ್ಯ ಬಾಡಿಗೆ ತುಂಬಿದ ಜನರಲ್ಲಿ ಶೇ. 40 ರಷ್ಟು ಜನ ಸಾವನ್ನಪ್ಪಿದ್ದು, ಸತ್ತವರ ಹೆಸರಿನಲ್ಲಿ ಬಾಡಿಗೆ ತುಂಬಿದ್ದಾರೆ. ಈ ಕುರಿತು ಕೂಡಲೇ ತನಿಖೆಯಾಗಬೇಕು ಎಂದು ಎಲ್.ಡಿ. ಚಂದಾವರಿ ಗಂಭೀರ ಆರೋಪ ಮಾಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯ ಕೃಷ್ಣಾ ಪರಾಪೂರ, ಜಿ.ಎಂ. ನಮಾಜಿ ಧ್ವನಿಗೂಡಿಸಿದರು.
ಬಾಡಿಗೆ ತುಂಬಿದ್ದು ಅಪರಾಧ:
ಸದಸ್ಯರ ಒಕ್ಕೊರಲಿನಂತೆ ನಗರಸಭಾಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಪ್ರಭಾರ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಇಡೀ ಪ್ರಕರಣದ ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಘೋಷಿಸಿದರು. ಅಧ್ಯಕ್ಷೆ ಉಷಾ ದಾಸರ ಅವರ ಅವಧಿ ಇದೇ 24ಕ್ಕೆ ಕೊನೆಯಾಗಲಿದ್ದು, ಇಂದು ನಡೆದ ಸಾಮಾನ್ಯ ಸಭೆ ಕೊನೆಯದು. ಹೊಸ ಅಧ್ಯಕ್ಷರ ಆಯ್ಕೆ ಬಳಿಕ ಹೊಸ ಅಧ್ಯಾಯ ಶುರು.