ವ್ಯಾಪಾರೀಕರಣಕ್ಕೆ ಒಳಗಾದ ಜ್ಯೋತಿಷ್ಯಶಾಸ್ತ್ರ

KannadaprabhaNewsNetwork | Published : Nov 7, 2023 1:30 AM

ಸಾರಾಂಶ

ಮಹಿಳೆಯರಿಗೆ ನಮ್ಮ ದೇಶದಲ್ಲಿ ಮಾತೃಸ್ಥಾನ ಕಲ್ಪಿಸಲಾಗಿದ್ದು, ಭೂಮಿ-ಪ್ರಕೃತಿಗಳನ್ನು ದೈವ ಸ್ವರೂಪವೆಂದು ಭಾವಿಸಲಾಗುತ್ತದೆ

ಯಲ್ಲಾಪುರ:

ಜ್ಯೋತಿಷ್ಯವೆಂಬ ಪ್ರಾಚೀನ ಶಾಸ್ತ್ರ ಇಂದು ವ್ಯಾಪಾರೀಕರಣಕ್ಕೆ ಒಳಗಾಗಿ ವಿಕೃತಿಗೊಳ್ಳುತ್ತಿರುವುದು ಅತ್ಯಂತ ವಿಷಾದನೀಯ ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಹೇಳಿದರು.

ಅವರು ಭಾನುವಾರ ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಸಭಾಭವನದಲ್ಲಿ ಹುಬ್ಬಳ್ಳಿಯ ಜ್ಯೋತಿರ್ವಿಜ್ಞಾನ ಸಂಸ್ಥೆ ಹಾಗೂ ಸಂಜೀವಿನಿ ಟ್ರಸ್ಟ್‌ಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜ್ಯೋತಿಷ್ಯ, ವಾಸ್ತು, ಆಯುರ್ವೇದ, ಕೃಷಿ ಹಾಗೂ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಜ್ಯೋತಿಷ್ಯ, ವಾಸ್ತು, ನಾಟಿ ಮತ್ತು ಆಯುರ್ವೇದ ವೈದ್ಯಕೀಯ ಸೇರಿದಂತೆ ದೇಶದ ವಿವಿಧ ಪಾರಂಪರಿಕ ಶಾಸ್ತ್ರಗಳೇ ನಮ್ಮ ದೇಶದ ಶ್ರೇಷ್ಠತೆ ಮತ್ತು ಔನ್ನತ್ಯಗಳಿಗೆ ಕಾರಣವಾಗಿದೆ. ಇವುಗಳ ಪಾವಿತ್ರ್ಯ ಯಾವ ಕಾರಣಕ್ಕೂ ಕೆಡದಂತೆ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದ ಅವರು, ಮಹಿಳೆಯರಿಗೆ ನಮ್ಮ ದೇಶದಲ್ಲಿ ಮಾತೃಸ್ಥಾನ ಕಲ್ಪಿಸಲಾಗಿದ್ದು, ಭೂಮಿ-ಪ್ರಕೃತಿಗಳನ್ನು ದೈವ ಸ್ವರೂಪವೆಂದು ಭಾವಿಸಲಾಗುತ್ತದೆ ಎಂದರು.

ಕಾಡುಪ್ರಾಣಿಗಳ ಮಿತಿಮೀರಿದ ಹಾವಳಿ ಜಮೀನುಗಳ ನಡುವೆ ಸಂಚರಿಸುವ ದಾರಿ ಮತ್ತು ಅತಿಕ್ರಮಣ ಸಮಸ್ಯೆ ಕುರಿತಂತೆ ಸಾರ್ವಜನಿಕರು ಪರಿಹಾರಕ್ಕಾಗಿ ನೀಡಿದ ಮನವಿಗೆ ಉತ್ತರಿಸಿದ ಶಾಸಕರು, ಮಾನವೀಯ ನೆಲೆಯಲ್ಲಿ ನೀತಿ-ಮಿತಿಯೊಳಗೆ ಸ್ಪಂದಿಸಿ ಪ್ರಯತ್ನಿಸುವ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ಮಾತನಾಡಿ, ಜ್ಯೋತಿಷ್ಯ ಪ್ರಸಕ್ತ ದಿನಮಾನದ ಗುರುತ್ವಾಕರ್ಷಣೆ ಹೊಂದಿದ ಅನಿವಾರ್ಯ ಶಾಸ್ತ್ರವಾಗಿದ್ದರೂ, ಇತ್ತೀಚೆಗೆ ಕೆಲವರ ನಕಾರಾತ್ಮಕ ಧೋರಣೆಯಿಂದ ಮೂಲ ಸ್ವರೂಪವನ್ನು ಕೆಡಿಸಿಕೊಳ್ಳುತ್ತಿದೆ ಏನು ಎಂದು ಭಾಸವಾಗುತ್ತಿದೆ ಎಂದರು.

ಅತಿಥಿಗಳಾಗಿದ್ದ ಪಶು ಸಂಗೋಪನ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಗೋವಿಂದ ಭಟ್ಟ ಮಾತನಾಡಿ, ಹೈನುಗಾರಿಕೆಯ ಭವಿಷ್ಯ ಆಯುರ್ವೇದ ಮತ್ತು ಜ್ಯೋತಿಷ್ಯಗಳ ತಳಹದಿಯ ಮೇಲೆ ನಿಂತಿದ್ದು, ಇಂದು ಸರ್ಕಾರ ಹೈನುಗಾರಿಕೆಗಾಗಿ ಸಾಕಷ್ಟು ವ್ಯವಸ್ಥೆ ಕಲ್ಪಿಸುತ್ತಿದ್ದರೂ, ಆಸಕ್ತ ಪಶುಪಾಲಕರ ಕೊರತೆಯಾಗಿದೆ. ಈ ಉದ್ಯಮದ ಅಭಿವೃದ್ಧಿಗೆ ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ತಾಂತ್ರಿಕತೆಯ ಬಳಕೆ ಅತ್ಯಗತ್ಯ ಎಂದರು.

ರಾಜರಾಜೇಶ್ವರಿ ಪ್ರೌಢಶಾಲೆಯ ಅಧ್ಯಕ್ಷ ಸೂರ್ಯನಾರಾಯಣ ಭಟ್ಟ ಮಾಳಕೊಪ್ಪ, ರಾಜರಾಜೇಶ್ವರಿ ಯಕ್ಷಗಾನ ಸಂಸ್ಥೆಯ ಅಧ್ಯಕ್ಷ ಜಿ.ಟಿ. ಭಟ್ಟ ಬೊಮ್ನಳ್ಳಿ ಮಾತನಾಡಿದರು.

ರಾಜರಾಜೇಶ್ವರಿ ಪ್ರೌಢಶಾಲೆ ವಿದ್ಯಾರ್ಥಿನಿಯರ ರೈತಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗೋಪಾಲ ಹೆಗಡೆ ಸ್ವಾಗತಿಸಿದರು. ಉಪನ್ಯಾಸಕ ಶ್ರೀಪಾದ ಹೆಗಡೆ ಚಿಕ್ಕೋತಿ ಕಾರ್ಯಕ್ರಮ ನಿರ್ವಹಿಸಿದರು. ಸ್ಪರ್ಧಾ ನಿರ್ಣಯಕರಾಗಿದ್ದ ಸುಪ್ರಿಯಾ ಹೆಗಡೆ ಮತ್ತು ವಿಘ್ನೇಶ್ವರ ಹೆಗಡೆ ಗಾಯನ ಪ್ರಸ್ತುತಪಡಿಸಿದ್ದರು.

ಸಂಘಟಕ ಗಣೇಶ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಎಂ. ಶ್ರೀನಿವಾಸ ವಂದಿಸಿದರು. ಟ್ರಸ್ಟ್ ಕಾರ್ಯದರ್ಶಿ ಮೋಹನ ಜೋಷಿ, ಭಾಸ್ಕರ ಹೆಗಡೆ ಕಂಪ್ಲಿ, ಟಿ.ವಿ. ಹೆಗಡೆ ಬೆದೆಹಕ್ಕಲು, ಪುರಂದರ ಉಪಸ್ಥಿತರಿದ್ದರು.

Share this article