ತುಮಕೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಜನತೆಯನ್ನು ಕತ್ತಲೆಗೆ ದೂಡಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಆರೋಪಿಸಿದ್ದಾರೆ.ಬಿಜೆಪಿ ಪಕ್ಷದ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬರ ಅಧ್ಯಯನ ಪ್ರವಾಸದ ವೇಳೆ ಬೆಳ್ಳಾವಿ ಗ್ರಾಮದಲ್ಲಿ ಮಾತನಾಡಿದ ಅವರು, ವಿದ್ಯುತ್ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಒಂದು ಕಡೆ ಬರಗಾಲ ಜನರನ್ನು ಕಿತ್ತು ತಿನ್ನುತಿದ್ದರೆ, ಸರಕಾರದ ನೀತಿಗಳಿಂದ ವಿದ್ಯುತ್ ಉತ್ಪಾದನೆ ಕುಸಿತ ಕಂಡ ಪರಿಣಾಮ ಮನೆ ಬಳಕೆ ಹಾಗೂ ರೈತರ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹಾಕಿದ ರಾಗಿ ಬೆಳೆ ತೆನೆಕಟ್ಟುವ ಮೊದಲೇ ಬತ್ತಿ ಹೋಗಿದೆ. ನಮಗೆ ಕುಡಿಯುವ ನೀರೇ ಇಲ್ಲದ ವೇಳೆ, ತಮಿಳುನಾಡಿಗೆ ರಾತ್ರೋರಾತ್ರಿ ನೀರು ಹರಿಸುವ ಮೂಲಕ ರಾಜ್ಯದ ಜನರ ಹಿತವನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.ತುಮಕೂರು ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಕೊಳವೆ ಬಾವಿಗಳಿದ್ದು,ಇವರಿಗೆ ಬಿಜೆಪಿ ಸರಕಾರವಿದ್ದಾಗ ನಿರಂತರವಾಗಿ ೭ಗಂಟೆ ತ್ರಿಪೇಸ್ ವಿದ್ಯುತ್ ನೀಡುತಿದ್ದು, ಈಗ ಕೇವಲ 3-4 ಗಂಟೆ ಮಾಡಲಾಗುತ್ತಿದೆ. ಅದು ಸರಿಯಾದ ಸಮಯ ನಿಗಧಿಯಾಗಿಲ್ಲ. ರಾತ್ರಿ ವೇಳೆ ತ್ರಿಪೇಸ್ ವಿದ್ಯುತ್ ನೀಡುವುದರಿಂದ ರೈತರು ಕತ್ತಲಿನಲ್ಲಿ ಹೊಲ, ಗದ್ದೆಗಳಿಗೆ ಹೋಗಿ ನೀರು ಹಾಯಿಸಲು ಚಿರತೆ, ಕರಡಿಗಳ ಕಾಟವಿದೆ. ಹಾಗಾಗಿ ಹಗಲಿನಲ್ಲಿಯೇ 7 ಗಂಟೆ ನಿರಂತರವಾಗಿ ವಿದ್ಯುತ್ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.ಅಕ್ರಮ ಸಕ್ರಮದಲ್ಲಿ ತುಮಕೂರು ಗ್ರಾಮಾಂತರದಲ್ಲಿ ಸುಮಾರು 4-5 ಸಾವಿರ ಜನರು ಟಿ.ಸಿ.ಗಾಗಿ ಹಣ ಕಟ್ಟಿ ಐದಾರು ವರ್ಷವಾದರೂ ಟಿ.ಸಿ. ನೀಡಿಲ್ಲ. ಅಲ್ಲದೆ ಈ ಹಿಂದಿನ ಸರಕಾರದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ೫೦ ಕೋಟಿ ರು. ಅನುದಾನವನ್ನು ಕಡಿತ ಮಾಡಿ, ಟ್ರಾನ್ಸ್ಫಾರ್ಮರ್ ಅಳವಡಿಸುವುದಕ್ಕೂ ಕಲ್ಲು ಹಾಕಿದೆ. ಅಲ್ಲದೆ ಟಿ.ಸಿ.ಗಾಗಿ ಅರ್ಜಿ ಸಲಿಸಿರುವ ಫಲಾನುಭವಿಗಳಿಗೆ ಕೇಂದ್ರ ಸರಕಾರದ ಸೋಲಾರ್ ಸಬ್ಸಿಡಿಯಲ್ಲಿ ಸೋಲಾರ್ ಅಳವಡಿಸಿಕೊಳ್ಳುವಂತೆ ಒತ್ತಡ ಹಾಕುತ್ತಿದೆ. ಅಲ್ಲದೆ ನೀರಿನ ಕೊರತೆಯಿಂದ ಕೆರೆ ತುಂಬಿಸುವ ಯೋಜನೆಗಳು ವಿಫಲವಾಗಿವೆ. ಬೆಳ್ಳಾವಿ ಸೇರಿದಂತೆ ಆರು ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯೂ ಸಹ ನೆನೆಗುದಿಗೆ ಬಿದ್ದಿದೆ. ಶಾಲಾ ಕಾಲೇಜು ಮಕ್ಕಳಿಗೆ ಯೂನಿಫಾರ್ಮ ಇಲ್ಲ, ಸೈಕಲ್ ಇಲ್ಲ. ಪಠ್ಯ ಪುಸ್ತಕ ಇಲ್ಲ. ವಾರ್ಷಿಕ ಎರಡು ಕೋಟಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಲ್ಲಿ ಐವತ್ತು ಲಕ್ಷ ರು. ಮಾತ್ರ ಬಿಡುಗಡೆ ಮಾಡಿದೆ. ಇಷ್ಟು ಸಣ್ಣ ಹಣದಿಂದ ಕ್ಷೇತ್ರದ ಅಭಿವೃದ್ದಿ ಸಾಧ್ಯವೇ ಎಂದು ಶಾಸಕ ಬಿ.ಸುರೇಶಗೌಡ ಪ್ರಶ್ನಿಸಿದರು.