ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದ 216 ತಾಲೂಕುಗಳು ಬರಪೀಡಿತವಾಗಿದೆ. ಆದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ದೂರುವುದರಲ್ಲಿ ಮಗ್ನವಾಗಿದೆ. ಸಿಎಂ ಮತ್ತು ಡಿಸಿಎಂ ಆಂತರಿಕ ಜಗಳದಿಂದಾಗಿ, ಡಿನ್ನರ್ ಪಾರ್ಟಿ ಮಾಡುವುದರಲ್ಲೇ ಮಗ್ನವಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದ್ದಾರೆ.ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಬಾರಿ ಬರದಿಂದ ರಾಜ್ಯದಲ್ಲಿ 33 ಸಾವಿರ ಕೋಟಿ ರು. ನಷ್ಟ ಆಗಿದೆ. ಸರ್ಕಾರ ತಕ್ಷಣ 5 ಸಾವಿರ ಕೋಟಿ ರು. ಪರಿಹಾರ ಬಿಡುಗಡೆ ಮಾಡಿ, ಜಿಲ್ಲಾಧಿಕಾರಿ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ಗೊಬ್ಬರ, ಬಿತ್ತನೆ ಬೀಜ ವಿತರಿಸುವ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಸರ್ಕಾರ ತನ್ನ ಮಾನ ಉಳಿಸಿಕೊಳ್ಳಲು ಕೇಂದ್ರವನ್ನು ದೂರುತ್ತಿದೆ, ಸುಳ್ಳು ಹೇಳಿ ಸರ್ಕಾರ ನಡೆಸಲು ಸಾಧ್ಯವೆಂದು ಸಿದ್ದರಾಮಯ್ಯ ಭಾವಿಸಿದ್ದಾರೆ. ಕಾಂಗ್ರೆಸ್‌ಗೆ ಸರ್ಕಾರ ನಡೆಸಲು ಸಾಧ್ಯ ಆಗದಿದ್ದರೆ ಅಧಿಕಾರ ಬಿಡಿ, ಬಿಜೆಪಿಯ 17 ತಂಡ ರಾಜ್ಯದ ಬರ ಅಧ್ಯಯನ ನಡೆಸಲಿದೆ ಎಂದರು.ಗೃಹಲಕ್ಷ್ಮೀ ಯೋಜನೆಯ 2ನೇ ತಿಂಗಳು ಹಣ ಯಾರಿಗೂ ಹಾಕಿಲ್ಲ, ಅಕ್ಕಿಗೆ ಬರೀ 170 ರು. ಹಾಕಿದ್ದಾರೆ. ಯುವನಿಧಿಗಾಗಿ ಇದುವರೆಗೆ ಒಂದು ರು. ಬಿಡಗಡೆ ಮಾಡಿಲ್ಲ, ಸಿಎಂ, ಡಿಸಿಎಂ ಕೇಂದ್ರವನ್ನು ದೂರುವುದರಲ್ಲಿ ಮಾತ್ರ ಸಮನ್ವಯ ಸಾಧಿಸುತ್ತಿದ್ದಾರೆ. ಇವರಿಬ್ಬರ ಒಳಜಗಳದಿಂದಾಗಿ ಆಡಳಿತ ವೈಫಲ್ಯ ಕಾಣುತ್ತಿದೆ ಎಂದರು.
* ಸಮಾಜವಾದಿ ಹೀಗಿರ್ತಾರಾ?ಸಿಎಂ ಸಿದ್ದರಾಮಯ್ಯ ಕಚೇರಿಯ ಪೀಠೋಪಕರಣಕ್ಕೆ 3 ಕೋಟಿ ರು. ಖರ್ಚಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಮಾಜವಾದಿ ಮುಖಂಡರು ಹೀಗೂ ಮಾಡ್ತಾರಾ ಅಂತ ಜನ ಆಡಿಕೊಳ್ಳುತ್ತಿದ್ದಾರೆ ಎಂದರು.
* ದಲಿತರು ಸಿಎಂ ಆದ್ರೆ ಖುಷಿರಾಜ್ಯದಲ್ಲಿ ದಲಿತ ಸಿಎಂ ಚರ್ಚೆ ವಿಚಾರ ಸತೀಶ್ ಜಾರಕಿಹೊಳಿ ಹೆಸರು ಮುನ್ನೆಲೆಗೆ ಬಂದಿದ್ದು, ಇನ್ನು ಎಷ್ಟು ಹೆಸರು ಬರುತ್ತದೋ ಗೊತ್ತಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇದೆ, ದಲಿತ ಸಿಎಂ ಮಾಡಿದರೆ ಖುಷಿಪಡೋಣ ಎಂದರು.
* ನಡ್ಡಾ ಸಭೆಯಲ್ಲಿ ಭಾಗಿಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹಸಚಿವ ಅಮಿತ್ ಶಾ, ಸಾರಿಗೆ ಸಚಿವ ನಿತಿನ್ ಗಡ್ಕರಿ, ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಬಿ.ಎಲ್. ಸಂತೋಷ್, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಡಿಸಿಎಂ ದೇವೆಂದ್ರ ಫಡ್ನವಿಸ್ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ನಾನು ಭಾಗಿಯಾಗಿದ್ದೇನೆ. ಹಿಂದುಳಿದ ವರ್ಗದ ಸಂಘಟನಾತ್ಮಕ ವಿಚಾರ ಮೀಸಲಾತಿ ವಿಚಾರ ಚರ್ಚಿಸಲಾಗಿದೆ ಎಂದರು.