ಕೇಂದ್ರದ ಕಡೆ ಕೈ ತೋರಿಸುವ ರಾಜ್ಯ ಸರ್ಕಾರದ ಕೆಲಸವೇನು ?

KannadaprabhaNewsNetwork | Published : Nov 7, 2023 1:30 AM

ಸಾರಾಂಶ

ಬರ ನಿರ್ವಹಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲ । ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ನವೀನ್‌ ಕಿಡಿ

ಕನ್ನಡಪ್ರಭ ವಾರ್ತೆ ಚಿತ್ರದುರ್ಗರಾಜ್ಯದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ಕಡೆ ಬೊಟ್ಟು ತೋರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಇಲ್ಲೇನು ಕತ್ತೆ ಕಾಯುತ್ತಿದೆಯಾ.? ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಕಿಡಿಕಾರಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಭೀಕರ ಬರಗಾಲ ತಾಂಡವಾಡುತ್ತಿದೆ. ಇದರ ಬಗ್ಗೆ ಪ್ರವಾಸ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವುದನ್ನು ಬಿಟ್ಟು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರ ನಮಗೆ ಸ್ಪಂದಿಸುತ್ತಿಲ್ಲ, ಹಣ ನೀಡುತ್ತಿಲ್ಲ ಎಂದು ಆರೋಪಿಸುವ ಕೆಲಸ ಮಾಡುವುದಾದರೆ, ೬.೫ ಕೋಟಿ ಜನರಿಂದ ಆಯ್ಕೆಯಾಗಿ ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್‌ನವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ರಾಜ್ಯದ ೩೧ ಜಿಲ್ಲೆಗಳಲ್ಲಿ ಭೀಕರ ಬರ ಪರಿಸ್ಥಿತಿ ಆವರಿಸಿದ್ದು, ಇದನ್ನು ಸಮರ್ಕಪಕವಾಗಿ ನಿಭಾಯಿಸುವಲ್ಲಿ ಸಂಪೂರ್ಣ ಹಳಿ ತಪ್ಪಿರುವ ಕಾಂಗ್ರೆಸ್ ಸರ್ಕಾರ, ರೈತರ ಸಮಸ್ಯೆಗಳನ್ನು ಆಲಿಸದೆ ಅಧಿಕಾರಕ್ಕಾಗಿ ದಿನನಿತ್ಯ ಬಡಿದಾಟ ಮಾಡುತ್ತಿದೆ. ಸಚಿವರು ಕೇವಲ ಅಧಿಕಾರ ಹಂಚಿಕೆಯ ಚಿಂತನೆಯಲ್ಲೇ ತೊಡಗಿದ್ದಾರೆ. ಇದರಿಂದ ಅವರನ್ನು ಬಡಿದೆಬ್ಬಿಸುವ ಕೆಲಸ ಮಾಡಲು ಭಾರತೀಯ ಜನತಾ ಪಕ್ಷದಿಂದ ೭ ತಂಡಗಳನ್ನು ಮಾಡಿಕೊಂಡು, ಪ್ರತಿ ತಾಲೂಕಿಗೆ ಭೇಟಿ ನೀಡಿ ಅಲ್ಲಿನ ರೈತರು, ಕೂಲಿ ಕಾರ್ಮಿಕರ, ಜನ ಸಾಮಾನ್ಯರ ಕಷ್ಟಗಳನ್ನು ಆಲಿಸಿ ಅವುಗಳನ್ನು ಶೀಘ್ರವೇ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ತಂಡ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಇಂದಿನಿಂದ ಪ್ರವಾಸ ಮಾಡಲಿದ್ದು, ತಂಡದಲ್ಲಿ ಶಾಸಕ ಎಂ.ಚಂದ್ರಪ್ಪ, ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಬಿ.ಪಿ.ಹರೀಶ್, ರಾಮಚಂದ್ರ ಸೇರಿದಂತೆ ಇತರರು ಇದ್ದು, ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಿಂದ ಪ್ರವಾಸ ಕೈಗೊಳ್ಳಲಿದ್ದೆವೆ. ಹೊನ್ನಾಳಿ, ಚನ್ಮಗಿರಿ, ಮಾಯಕೊಂಡ ಪ್ರಾವಾಸ ನಡೆಸಿ ನಾಳೆ ಚಿತ್ರದುರ್ಗದಲ್ಲಿ ಪ್ರವಾಸ ಮಾಡುತ್ತೇವೆ. ಚಳ್ಳೆಕೆರೆಯಲ್ಲಿ ದೇವರ ಎತ್ತುಗಳಿಗೆ ಮೇವಿನ ಕೊರತೆ, ಅಲ್ಲಿನ ಸಣ್ಣ ಕೈಗಾರಿಕೆಗಳ ವಿದ್ಯುತ್ ಸಮಸ್ಯೆ ಕುರಿತು ಮಾಲೀಕರು, ರೈತರೊಂದಿಗೆ ಚರ್ಚಿಸಲಾಗುವುದು ಎಂದರು.

ಹೊಸ ವಿದ್ಯುತ್ ಸಂಪರ್ಕಕ್ಕೆ ರೈತರು ತಾವೇ ಹಣ ಪಾವತಿಸಬೇಕು ಎಂಬ ಸರ್ಕಾರದ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ರೈತರು ಐಸಿಯುನಲ್ಲಿ ಮಲಗಿದ್ದು, ಅವರಿಗೆ ನೀಡುತ್ತಿರುವ ಆಕ್ಸಿಜನ್ ಕಟ್ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದೊಂದು ಮಾನಗೆಟ್ಟ ಸರ್ಕಾರ ನೀತಿಯಾಗಿದೆ ಎಂದು ದೂರಿದರು.

ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಯಡಿಯೂರಪ್ಪನವರ ಬಿಜೆಪಿ ಸರ್ಕಾರದಲ್ಲಿ ರಾಜ್ಯದಲ್ಲಿ ಬರ ಘೋಷಣೆ ಆಗುತ್ತಿದ್ದಂತೆಯೇ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡುತ್ತಿತ್ತು. ಆದರೆ ಸಿದ್ದರಾಮಯ್ಯ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಎಲ್ಲವನ್ನು ಕೇಂದ್ರಕ್ಕೆ ಕೇಳಿ ಎಂದರೆ ರಾಜ್ಯದ ಜನ ಮತ ಹಾಕಿರುವುದು ಏಕೆ? ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಸಂಪುಟದಲ್ಲಿ ಖಾತೆಗಳಿಗೆ ಸಂಬಂದ ಪಡದ ವ್ಯಕ್ತಿಗಳನ್ನು ಸಚಿವರನ್ನು ಮಾಡಿದ್ದಾರೆ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ರೈತರರ ಸಮಸ್ಯೆ ಏನು ಎಂಬುದೆ ಅರಿತಿಲ್ಲ. ಬೆಂಗಳೂರಲ್ಲಿ ಸಾವಿರಾರು ಕೋಟಿ ಆಸ್ತಿ ಹೊಂದಿರುವ ವ್ಯಕ್ತಿಯನ್ನು ಮಂತ್ರಿ ಮಾಡಿದ್ದಾರೆ. ಅಂತಹ ಮಂತ್ರಿ ಆ ಸ್ಥಾನಕ್ಕೆ ಸೂಕ್ತ ಅಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರದ ಕಡೆ ಕೈ ತೋರಿಸುವುದು ಎಷ್ಟು ಸರಿ. ಕೇಂದ್ರದ ಹಣ ಬಂದಾಗ ನೀಡಲಿದೆ. ಅದಕ್ಕೂ ಮೊದಲು ತಮ್ಮ ಪಾಲಿನ ಹಣವನ್ನು ನೀಡಲಿ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಮುರುಳಿ, ವೆಂಕಟೇಶ್ ಯಾದವ್, ನರೇಂದ್ರ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ ಉಪಸ್ಥಿತರಿದ್ದರು.

Share this article