ರಸ್ತೆ ದುರವಸ್ಥೆ: ಗ್ರಾಮಸ್ಥರಿಂದಲೇ ದುರಸ್ತಿ!

KannadaprabhaNewsNetwork |  
Published : Nov 07, 2023, 01:30 AM IST

ಸಾರಾಂಶ

ರಸ್ತೆ ಅಭಿವೃದ್ದಿಗಾಗಿ ಗ್ರಾಮ ಪಂಚಾಯಿತಿ ಬಾಗಿಲು ಬಡಿದರೆ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ. ಆದರೂ ಈ ಕೇರಿಯ ಜನರು ಕೈಕಟ್ಟಿ ಕೂತಿಲ್ಲ. ಇಡೀ ಆಡಳಿತ ವ್ಯವಸ್ಥೆಯೇ ನಾಚಿಸುವಂತೆ ತಾವೇ ಸ್ವತಃ ಹಣ ಹೊಂದಿಸಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಶ್ರೀಕಾಂತ ಹೆಮ್ಮಾಡಿ

ಕನ್ನಡಪ್ರಭ ವಾರ್ತೆ ಕುಂದಾಪುರತಮ್ಮ ಕೇರಿಗೊಂದು ರಸ್ತೆ ಬೇಕು ಎನ್ನುವ ಕನಸು ಹೊತ್ತುಕೊಂಡು ಇರುವ ಅಷ್ಟಿಷ್ಟು ಜಾಗವನ್ನು ರಸ್ತೆಗಾಗಿ ಬಿಟ್ಟುಕೊಟ್ಟ ಇಲ್ಲಿನ ನಿವಾಸಿಗಳ ಕನಸಿಗೆ ಸ್ಥಳೀಯಾಡಳಿತ ತಣ್ಣೀರೆರೆಚಿದೆ. ಸ್ವಂತ ಹಣದಿಂದಲೇ ರಸ್ತೆ ನಿರ್ಮಿಸಿಕೊಂಡು ರಸ್ತೆ ಅಭಿವೃದ್ದಿಗಾಗಿ ಗ್ರಾಮ ಪಂಚಾಯಿತಿ ಬಾಗಿಲು ಬಡಿದರೆ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ. ಆದರೂ ಈ ಕೇರಿಯ ಜನರು ಕೈಕಟ್ಟಿ ಕೂತಿಲ್ಲ. ಇಡೀ ಆಡಳಿತ ವ್ಯವಸ್ಥೆಯೇ ನಾಚಿಸುವಂತೆ ತಾವೇ ಸ್ವತಃ ಹಣ ಹೊಂದಿಸಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.ಕುಂದಾಪುರ ವಿಧಾನಸಭಾ ಕ್ಷೇತ್ರದ ಕೊರ್ಗಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೆಸ್ಕುತ್ತೂರು ಬಸ್ ನಿಲ್ದಾಣದಿಂದ ಹಾರ್ಯಾಡಿ ಬ್ರಹ್ಮಸ್ಥಳ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಒಂದುವರೆ ಕಿ.ಮೀ. ಉದ್ದದ ರಸ್ತೆ ಕಾಮಗಾರಿಗೆ ಒಂದು ನಯಾಪೈಸೆಯೂ ಅನುದಾನ ಇಟ್ಟಿಲ್ಲ. ದುಃಸ್ಥಿತಿಗೆ ತಲುಪಿದ ರಸ್ತೆಯನ್ನು ಕಳೆದ 15 ವರ್ಷಗಳಿಂದ ದುರಸ್ತಿ ಮಾಡಿ ಕೊಡಿ ಎಂದು ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಕೊಟ್ಟರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹೆಸ್ಕುತ್ತೂರು ಬ್ರಹ್ಮಸ್ಥಾನ ದೇವಸ್ಥಾನದ ಆಸುಪಾಸು ಸುಮಾರು 30ಕ್ಕೂ ಮಿಕ್ಕಿ ಮನೆಗಳಿವೆ. 150 ಕ್ಕೂ ಹೆಚ್ಚು ಮಂದಿ ಜನರು ಇದೇ ರಸ್ತೆಯನ್ನೇ ಅವಲಂಬಿಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜುಗಳಿಗೆ ತೆರಳಲು ಮತ್ತು ಪಡಿತರ, ದಿನಸಿ ಇನ್ನಿತರ ಸಾಮಾಗ್ರಿಗಳನ್ನು ತರಲು ಇದೇ ರಸ್ತೆಯನ್ನೇ ಅವಲಂಬಿಸಿದ್ದಾರೆ.

ಮಳೆಗಾದಲ್ಲಿ ತೊರೆಯಂತಾಗುವ ರಸ್ತೆ!:ಬೇಸಿಗೆಯಲ್ಲಿ ಹರ ಸಾಹಸಪಟ್ಟು ಬೈಕ್ ಹಾಗೂ ಆಟೋರಿಕ್ಷಾಗಳು ಮಾತ್ರ ಈ ರಸ್ತೆಯಲ್ಲಿ ಸಂಚರಿಸಿದರೆ ಮಳೆಗಾಲದ ಮೂರು ತಿಂಗಳು ಸಂಚಾರಕ್ಕೆ ನಿಷೇಧ. ಅಷ್ಟಿಷ್ಟು ವಾಹನ ಸಂಚಾರಕ್ಕೆ ಮುಕ್ತವಾಗಿರುವ ಈ ರಸ್ತೆ ಮಳೆಗಾಲದಲ್ಲಿ ತೊರೆಯಾಗಿ ಮಾರ್ಪಡುತ್ತದೆ. ಹೆಸ್ಕುತ್ತೂರು ಪೇಟೆ ಭಾಗದ ನೀರು ಇದೇ ರಸ್ತೆಗೆ ನುಗ್ಗುವುದರಿಂದ ಇಲ್ಲಿನ ಗ್ರಾಮಸ್ಥರ ಮಳೆಗಾಲದ ಸಂಚಾರ ಹೇಳತೀರದು.ಪ್ರತೀ ವರ್ಷ ಗ್ರಾಮಸ್ಥರಿಂದಲೇ ದುರಸ್ತಿ:ಒಂದೂವರೆ ಕಿ.ಮೀ. ಉದ್ದ ರಸ್ತೆಗೆ ಗ್ರಾಮಸ್ಥರೇ ತಮ್ಮ ಪಟ್ಟಾ ಸ್ಥಳ ಬಿಟ್ಟುಕೊಟ್ಟು ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಕಳೆದ 15 ವರ್ಷಗಳಿಂದಲೂ ಹಲವು ಸರ್ಕಾರಗಳು ಬದಲಾದರೂ ಬ್ರಹ್ಮಸ್ಥಾನ ದೇವಸ್ಥಾನ ಸಮೀಪದ ನಿವಾಸಿಗಳ ಕೂಗು ಆಡಳಿತ ವರ್ಗಕ್ಕೆ ಕೇಳಿಸಿದಂತಿಲ್ಲ. ವರ್ಷಂಪ್ರತಿ ಅಷ್ಟಿಷ್ಟೋ ಹಣವನ್ನು ಸಂಗ್ರಹಿಸಿಕೊಂಡು ಅಲ್ಪಸ್ವಲ್ಪ ದುರಸ್ತಿ ಕಾರ್ಯಕ್ಕೆ ಮುಂದಾಗುತ್ತಿರುವ ಗ್ರಾಮಸ್ಥರು ಈ ಬಾರಿ ಲಕ್ಷಕ್ಕೂ ಅಧಿಕ ಹಣ ವ್ಯಯಿಸಿ ರಸ್ತೆ ದುರಸ್ತಿಗೆ ಪಣ ತೊಟ್ಟಿದ್ದಾರೆ. ಈಗಾಗಲೇ ಜೆಸಿಬಿಯಿಂದ ರಸ್ತೆ ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದ್ದು, ಸಮೀಪದ ಗಿಡಗಂಟಿಗಳನ್ನು ಶ್ರಮದಾನದ ಮೂಲಕವೇ ತೆರವು ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಚುನಾವಣೆಗೆ ಮಾತ್ರ ಆಶ್ವಾಸನೆ!:ಪ್ರತೀ ಬಾರಿ ಚುನಾವಣಾ ಸಮಯದಲ್ಲಿ ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಮುಖಂಡರು ರಸ್ತೆ ಅಭಿವೃದ್ದಿಗೆ ಆಶ್ವಾಸನೆ ಕೊಟ್ಟು ಹೋಗುತ್ತಾರೆ ವಿನಃ ಚುನಾವಣೆಯಲ್ಲಿ ಗೆದ್ದ ಬಳಿಕ ಇತ್ತ ಕಡೆ ಮುಖ ಹಾಕಿ ನೋಡುತ್ತಿಲ್ಲ. ಆಶ್ವಾಸನೆ ಕೇಳಿ ಕೇಳಿ ನಮಗೂ ಸಾಕಾಗಿದೆ. ಹೀಗಾಗಿ ಈ ಬಾರಿ ಹೆಚ್ಚು ಹಣ ವ್ಯಯಿಸಿ ರಸ್ತೆ ಸಮತಟ್ಟು ಮಾಡಿ, ಚರಂಡಿ ನಿರ್ಮಿಸಿ ರಸ್ತೆಗೆ ಕ್ರಶರ್ ಹಾಕುವ ಯೋಚನೆಯಲ್ಲಿದ್ದೇವೆ ಎಂದು ಗ್ರಾಮಸ್ಥರು ‘ಕನ್ನಡಪ್ರಭ’ದೊಂದಿಗೆ ಅಳಲು ತೋಡಿಕೊಂಡಿದ್ದಾರೆ.ಕಳೆದ 15 ವರ್ಷಗಳಿಂದ ಮನವಿ ಕೊಡುತ್ತಲೇ ಬಂದಿದ್ದೇವೆ. ಕಾಂಕ್ರೀಟಿಕರಣಕ್ಕಾಗಿ ಮನವಿ ಕೊಟ್ಟಿದ್ದೇವೆ. ಗ್ರಾ.ಪಂ. ಆಡಳಿತ ದೊಡ್ಡ ಅನುದಾನ ನಮ್ಮಲ್ಲಿಲ್ಲ ಎನ್ನುವ ಸಬೂಬು ಹೇಳುತ್ತಲೇ ಬಂದಿದೆ. ಕೊನೆಯ ಪಕ್ಷ ಇರುವ ರಸ್ತೆಯನ್ನಾದರೂ ದುರಸ್ತಿ ಮಾಡಿ ಕೊಡಿ ಎಂದರೆ ಅದಕ್ಕೂ ಸ್ಪಂದನೆ ಇಲ್ಲ. ಉದ್ಯೋಗ ಖಾತರಿ ಯೋಜನೆಯಡಿಯಲ್ಲಾದರೂ ರಸ್ತೆ ದುರಸ್ತಿಗೆ ಮುಂದಾಗಬಹುದಿತ್ತು.

-ಮಹೇಶ್, ಗ್ರಾಮಸ್ಥರು

---------ಸದ್ಯಕ್ಕೆ ಓಡಾಡುವ ಹಾಗೆ ನಮ್ಮ ಸ್ವಂತ ಖರ್ಚಿನಿಂದ ರಸ್ತೆ ದುರಸ್ತಿ ಮಾಡುತ್ತಿದ್ದೇವೆ. ಮಳೆಗಾಲದಲ್ಲಿ ನಮ್ಮ ಕಷ್ಟ ಹೇಳತೀರದು. ಹೈನುಗಾರಿಕೆಯನ್ನು ನಂಬಿ ಬದುಕು ಕಟ್ಟಿಕೊಳ್ಳುವವರು ನಾವು. ಮಳೆಗಾಲದಲ್ಲಿ ಜಾನುವಾರುಗಳಿಗೆ ಆಹಾರ ತರಲು ಸಾಧ್ಯವಾಗುತ್ತಿಲ್ಲ. ಚೀಲವನ್ನು ಹೊತ್ತುಕೊಂಡೆ ಬರಬೇಕಾದ ಸ್ಥಿತಿ ನಮ್ಮದು.

-ಸುಭಾಸ್ ಶೆಟ್ಟಿ, ಗ್ರಾಮಸ್ಥರು.

----------------ಹೆಸ್ಕುತ್ತೂರು-ಹಾರ್ಯಾಡಿ ಸಂಪರ್ಕ ರಸ್ತೆ ಜಾಗದ ಕುರಿತು ಖಾಸಗಿಯವರ ತಕರಾರುಗಳಿದ್ದರೂ ಪಂಚಾಯತ್ ಹಣ ವಿನಿಯೋಗಿಸಿ ಅಲ್ಪ-ಸ್ವಲ್ಪ ದುರಸ್ತಿ ಕಾರ್ಯ ನಡೆಸಿದೆ. ಈ ಬಗ್ಗೆ ದಾಖಲೆಯೂ ಇದೆ. ಸಂಬಂಧಿತ ಜಾಗವು ಖಾಸಗಿಯವರದ್ದಾಗಿದ್ದು, ಕಾನೂನಾತ್ಮಕವಾಗಿ ಪಂಚಾಯತ್‍ಗೆ ಹಸ್ತಾಂತರ ಮಾಡಿದರೆ ಮುಂದಿನ ದಿನಗಳಲ್ಲಿ ಲಭ್ಯವಿರುವ ಅನುದಾನವಿಟ್ಟು ರಸ್ತೆಗೆ ಕಾಯಕಲ್ಪ ಒದಗಿಸಲಾಗುವುದು.

-ಸುಧಾಕರ ಶೆಟ್ಟಿ, ಪಿಡಿಒ ಗ್ರಾ.ಪಂ ಕೊರ್ಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನ್ನ ಮರ ಕಡಿದಿದ್ದಕ್ಕೆ ವಿಧಾನಸೌಧ ಬಳಿ ಸರ್ಕಾರಿ ಶ್ರೀಗಂಧ ಮರ ಕತ್ತರಿಸಿದ ರೈತ!
ಸಿದ್ದರಾಮಯ್ಯ , ನಾನು ಕದ್ದು ಮುಚ್ಚಿ ಮಾತಾಡಿಲ್ಲ, ನಮ್ಮಲ್ಲಿ ಗೊಂದಲವೂ ಇಲ್ಲ : ಡಿಸಿಎಂ