ಕನ್ನಡಪ್ರಭ ವಾರ್ತೆ ಕಲಘಟಗಿ
ಬರ ಪೀಡಿತ ತಾಲೂಕು ಎಂದು ಘೋಷಣೆಯಾದ ಕಲಘಟಗಿ ಮತಕ್ಷೇತ್ರದ ಕಣವಿಹೊನ್ನಾಪುರ ಗ್ರಾಮದಲ್ಲಿನ ಹೊಲವೊಂದಕ್ಕೆ ಭಾನುವಾರ ಮಾಜಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರ ತಂಡ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು.ಕಣವಿಹೊನ್ನಾಪುರ ಗ್ರಾಮದಲ್ಲಿನ ಭತ್ತದ ಗದ್ದಗೆ ಭೇಟಿ ನೀಡಿ ಬರದ ಬಗ್ಗೆ ರೈತರಿಂದ ಮಾಹಿತಿ ಕಲೆ ಹಾಕಿದರು. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಈಗಾಗಲೇ ತಾಲೂಕಿನಾದ್ಯಂತ ಸಮರ್ಪಕ ಮಳೆಯಾಗದೇ ಬೆಳೆಯಲ್ಲ ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ರಾಜ್ಯ ಸರ್ಕಾರ ಕೊಳವೆ ಬಾವಿ, ಕೆರೆ ಕಟ್ಟೆಗಳ ಮೂಲಕ ಬೆಳೆ ಬೆಳೆಯುವ ರೈತರಿಗೆ ನಿರಂತರ 7 ತಾಸು ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ಒಂದು ಎಕರೆ ಕೃಷಿ ಚಟುವಟಿಕೆಗೆ ರೈತರು ಸುಮಾರು ₹35 ರಿಂದ ₹40 ಸಾವಿರ ಖರ್ಚು ಮಾಡಿ ಬೆಳೆ ಬೆಳೆದಿದ್ದು, ಸಮಯಕ್ಕೆ ಸರಿಯಾಗಿ ಮಳೆಯಾಗದೆ ಹಾಗೂ ವಿದ್ಯುತ್ ಪೂರೈಕೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದರಿಂದ ಬೆಳೆಯಲ್ಲ ನಾಶವಾಗಿದೆ. ಸರ್ಕಾರ ಕೂಡಲೇ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಮೇವು ಬ್ಯಾಂಕ್, ಗೋಶಾಲೆ, ಕುಡಿಯುವ ನೀರು, ಗುಳೆ ಹೋಗುವಂತ ಕೃಷಿಕಾರ್ಮಿಕರನ್ನು ತಡೆದು ಅವರದ್ದೆ ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿಸಬೇಕು. ಬರ ಘೋಷಣೆಯಾದ 234 ತಾಲೂಕಿಗೆ ಪ್ರತ್ಯೇಕ ₹10 ಕೋಟಿಯಂತೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಶಾಸಕ ಅರವಿಂದ ಬೆಲ್ಲದ, ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಶಾಸಕ ಎಂ.ಆರ್. ಪಾಟೀಲ್, ಮಾಜಿ ಶಾಸಕ ಅಮೃತ ದೇಸಾಯಿ, ಲಿಂಗರಾಜ ಪಾಟೀಲ್, ಷಣ್ಮುಖ ಗುರಿಕಾರ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲೂಕು ಅಧ್ಯಕ್ಷ ಬಸವರಾಜ ಶೆರೇವಾಡ, ಎಸ್.ಎನ್. ಬಿದರಳ್ಳಿ, ನಿಂಗಪ್ಪ ಸುತಗಟ್ಟಿ, ಶಂಕ್ರಣ್ಣ ರಾಯನಾಳ, ಚಂದ್ರಗೌಡ ಪಾಟೀಲ್, ಅಣ್ಣಪ್ಪ ಒಲೇಕಾರ್, ಗುರುನಾಥ್ ದಾನವೇನವರ, ವಜ್ರಕುಮಾರ ಮಾಧನಭಾವಿ, ಆನಂದಗೌಡ ಪಾಟೀಲ್, ಸಿದ್ರಾಮಪ್ಪ ಇಂಚಲ್, ಮಂಜುನಾಥ ಪಾಚಾಪೂರ, ಶಂಕರಗೌಡ ಪಾಟೀಲ್, ಬಸಣ್ಣ ಸುಳ್ಳದ, ಮಲ್ಲಿಕಾರ್ಜುನ ಇಂಚಲ್, ಬಸವರಾಜ ಅಂಗಡಿ, ದಾವಲ್‌ಸಾಬ ನದಾಫ್, ಸಂತೋಷ್ ಮಾಧನಭಾವಿ, ಮಂಜುನಾಥ ಅಂಗಡಿ ಇದ್ದರು.