ಜೀವನ ಪ್ರೀತಿಯ ಕವಿ ಸತೀಶ ಕುಲಕರ್ಣಿ

KannadaprabhaNewsNetwork | Published : Nov 7, 2023 1:30 AM

ಸಾರಾಂಶ

ಜನಸಮುದಾಯದಲ್ಲಿ ಮಾನವೀಯತೆ, ಸಾಮರಸ್ಯ ಮತ್ತು ಕರುಣೆ ಬಯಸುವ ಜೀವನ ಪ್ರೀತಿಯ ಕವಿ ಸತೀಶ ಕುಲಕರ್ಣಿ ಎಂದು ಧಾರವಾಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹಾವೇರಿ

ಜನಸಮುದಾಯದಲ್ಲಿ ಮಾನವೀಯತೆ, ಸಾಮರಸ್ಯ ಮತ್ತು ಕರುಣೆ ಬಯಸುವ ಜೀವನ ಪ್ರೀತಿಯ ಕವಿ ಸತೀಶ ಕುಲಕರ್ಣಿ ಎಂದು ಧಾರವಾಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.

ನಗರದ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಸಾಹಿತಿ ಕಲಾವಿದರ ಬಳಗ ಹಾಗೂ ಗೆಳೆಯರ ಬಳಗದ ಜಂಟಿ ಆಶ್ರಯದಲ್ಲಿ ಜರುಗಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಅವರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮನಸ್ಸುಗಳನ್ನು ಒಡೆಯುವ ಬದಲಿಗೆ ಕಟ್ಟುವ ಕೆಲಸಕ್ಕೆ ಪ್ರಾಮುಖ್ಯತೆ ನೀಡಿದ ಕವಿ ಸತೀಶ ಕುಲಕರ್ಣಿ ಜನಪರ ಕಾಳಜಿಯುಳ್ಳವರು. ಸಾಮಾಜಿಕ ಹೊಣೆಗಾರಿಕೆ, ಜೀವನ ಪ್ರೀತಿ, ಸೈದ್ಧಾಂತಿಕ ಬದ್ಧತೆ ಮತ್ತು ತ್ಯಾಗದ ಫಲವಾಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಹೆಮ್ಮೆಯ ಸಂಗತಿ ಎಂದರು.

ಕವಿಪ್ರ ನೌಕರರ ಸಂಘದ ನಿಕಟಪೂರ್ವ ಕಾರ್ಯಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಸತೀಶ ಕುಲಕರ್ಣಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ನೌಕರನಾಗಿ ವೃತ್ತಿ ಗೌರವ ಉಳಿಸಿಕೊಂಡು ಸಮಾಜದ ಸೂಕ್ಷ್ಮತೆ ಅವಲೋಕಿಸಿದವರು. ವಿಶೇಷವಾಗಿ ಬೀದಿ ನಾಟಕಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದವರು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವಂತೆ ಮಾಡುತ್ತಿದ್ದ ಅವರ ಚಿಂತನೆಗಳು ಮತ್ತು ಸಂಘಟನಾ ಚಾತುರ್ಯ ನಮಗೆಲ್ಲ ಸ್ಪೂರ್ತಿ ಎಂದರು.

ಶೇಷಗಿರಿ ಕಲಾ ತಂಡದ ರಂಗ ನಿರ್ದೇಶಕ ಸಂತೋಷ ಎಸ್.ಎಲ್. ಮಾತನಾಡಿ, ಕಲೆ ರಂಜನೆಗೆ ಸೀಮಿತವಾಗದೇ ಸಮಾಜದ ಓರೆಕೋರೆಗಳನ್ನು ತಿದ್ದುವಂತಾಗಬೇಕು ಎಂದು ನಂಬಿದವರು ಸತೀಶ ಕುಲಕರ್ಣಿ ಎಂದರು.

ಮೈಸೂರಿನ ಯುವರಾಜ ಕಾಲೇಜಿನ ಡಾ. ಪುಟ್ಟರಾಜು ಟಿ.ಎಸ್. ಮತ್ತು ಸಾಹಿತಿ ಕಲಾವಿದರ ಬಳಗದ ಎಸ್.ಆರ್. ಹಿರೇಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಅವರನ್ನು ಸಾಹಿತಿ ಕಲಾವಿದರ ಬಳಗ ಮತ್ತು ಗೆಳೆಯರ ಬಳಗ ಹಾಗೂ ನಗರದ ಪ್ರಮುಖ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿ, ಗೌರವಿಸಿದರು.

ವಿ.ಎಂ. ಪತ್ರಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಶಿಗ್ಗಾಂವ ಹಾಗೂ ಸಂಗಡಿಗರು ಕ್ರಾಂತಿಗೀತೆ ಹಾಡಿದರು. ಮಹಾಂತೇಶ ಕರ್ಜಗಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿ ವಂದಿಸಿದರು.

ಕರಿಯಪ್ಪ ಹಂಚಿನಮನಿ, ಕಾಂಚನಾ ಕುಲಕರ್ಣಿ, ಸಂಕಮ್ಮ ಸಂಕಣ್ಣನವರ, ಪರಿಮಳಾ ಜೈನ್, ಚಂದ್ರಶೇಖರ ಮಾಳಗಿ, ಈರಣ್ಣ ಬೆಳವಡಿ, ಶಂಕರ ಬಡಿಗೇರ, ಕೆ.ಆರ್. ಹಿರೇಮಠ, ಮಹಾಂತೇಶ ಮರಿಗೂಳಪ್ಪನವರ, ಮುತ್ತುರಾಜ ಹಿರೇಮಠ, ಹನುಮಂತಸಿಂಗ್ ರಜಪೂತ್, ನಾಗರಾಜ ಹುಡೇದ, ಶಂಕರ ತುಮ್ಮಣ್ಣವರ ಉಪಸ್ಥಿತರಿದ್ದರು.

Share this article