ಬಳ್ಳಾರಿ ಮೇಯರ್ ತ್ರಿವೇಣಿ ರಾಜೀನಾಮೆ

KannadaprabhaNewsNetwork | Published : Nov 7, 2023 1:30 AM

ಸಾರಾಂಶ

ಕಳೆದ ಮಾ. 29ರಂದು ಮೇಯರ್ ಆಗಿ ತ್ರಿವೇಣಿ ಅಧಿಕಾರ ವಹಿಸಿಕೊಂಡಿದ್ದರು. ಏಳು ತಿಂಗಳ ಅವಧಿಯಲ್ಲೇ ಬೆನ್ನಲ್ಲೇ ರಾಜಿನಾಮೆ ನೀಡಿರುವುದು ಅಚ್ಚರಿ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ರಾಜ್ಯದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎಂಬ ಖ್ಯಾತಿ ಹೊಂದಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಡಿ. ತ್ರಿವೇಣಿ ಅವರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಕಳೆದ ಮಾ. 29ರಂದು ಮೇಯರ್ ಆಗಿ ತ್ರಿವೇಣಿ ಅಧಿಕಾರ ವಹಿಸಿಕೊಂಡಿದ್ದರು. ಏಳು ತಿಂಗಳ ಅವಧಿಯಲ್ಲೇ ಬೆನ್ನಲ್ಲೇ ರಾಜಿನಾಮೆ ನೀಡಿರುವುದು ಅಚ್ಚರಿ ಮೂಡಿಸಿದೆ.

ಕಾಂಗ್ರೆಸ್‌ನ ಒಳಒಪ್ಪಂದದಂತೆ ಬೇರೆಯವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನ. 4ರಂದು ಆಯುಕ್ತರಿಗೆ ನೀಡಿರುವ ರಾಜಿನಾಮೆ ಪತ್ರದಲ್ಲಿ ವೈಯಕ್ತಿಕ ಕಾರಣಗಳಿಂದ ಮೇಯರ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿರುವುದಾಗಿ ತ್ರಿವೇಣಿ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರ ನಡುವಿನ ಒಳ ಒಪ್ಪಂದದಂತೆ ಮೇಯರ್ ಅವರನ್ನು ಬದಲಾಯಿಸಲಾಗುತ್ತಿದ್ದು, ಡಿ. ತ್ರಿವೇಣಿ ಶೀಘ್ರದಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದವು. ಆದರೆ, ಮೇಯರ್ ಎಲ್ಲ ಸಮಾರಂಭಗಳಲ್ಲಿ ಹಾಜರಾಗುವ ಮೂಲಕ ಸಕ್ರಿಯವಾಗಿದ್ದರಿಂದ ರಾಜೀನಾಮೆ ವಿಚಾರ ಹೆಚ್ಚು ಮುನ್ನೆಲೆಗೆ ಬಂದಿರಲಿಲ್ಲ. ಕಳೆದ ಎರಡು ದಿನಗಳ ಹಿಂದೆಯೇ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.

ತ್ರಿವೇಣಿ ರಾಜೀನಾಮೆ ಸಲ್ಲಿಸುತ್ತಿದ್ದಂತೆಯೇ ಮೇಯರ್ ಗದ್ದುಗೆ ಏರಲು ಪೈಪೋಟಿ ತೆರೆಮರೆಯಲ್ಲಿ ಶುರುಗೊಂಡಿದೆ. ಮುಂದಿನ ಮೇಯರ್ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿದೆ.

Share this article