ವಿಶೇಷ ವರದಿಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಪದವೀಧರೆ, ವೈವಾಹಿಕ ಜೀವನಕ್ಕೆ ಕಾಲಿರಿಸಿ ಸುಂದರ ಬದುಕು ನಡೆಸುತ್ತಿದ್ದ ಗೃಹಿಣಿಯ ಬದುಕು ವಿಧಿ ಲೀಲೆಗೆ ಸಿಲುಕಿ ನಾನಾ ಸಂಕಷ್ಟಗಳು ಸರಣಿಗಳಂತೆ ಕಾಡಿದವು. ಬದುಕೇ ದುಸ್ತರ ಎಂದಂತಾಗಿ ಕಂಗೆಟ್ಟ ಸಮಯದಲ್ಲಿ ದೇವರಿಟ್ಟ ಸ್ಥಿತಿಯಲ್ಲಿ ಏನಾದರೂ ಸಾಧಿಸಬೇಕೆಂದು ಛಲತೊಟ್ಟು ಸಾಮಾಜಿಕ ಜಾಲತಾಣಗಳ ಮುಖೇನ ತನ್ನ ಕಲಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸುತ್ತಾ ಬದುಕು ನಡೆಸುತ್ತಿರುವ ಕಡಬ ತಾಲೂಕು ಕುಂತೂರು ಗ್ರಾಮದ ಪೂರ್ಣಿಮಾ ಭಟ್ ಯಶೋಗಾಥೆ ಇದು.ಬಿ.ಕಾಂ. ಪದವೀಧರೆಯಾಗಿರುವ ಪೂರ್ಣೀಮಾ ಭಟ್ 2016 ರ ಅಕ್ಟೋಬರ್ ತಿಂಗಳಿನಲ್ಲಿ ನಡೆದ ಅಪಘಾತದಿಂದ ಸೊಂಟದ ಕೆಳಗಿನ ಸ್ವಾಧೀನ ಕಳೆದುಕೊಂಡರು. ಬಳಿಕ ಸಂಕಷ್ಟಗಳ ಸರಮಾಲೆಯೇ ಎದುರಾದವು. ಅಪಘಾತದಿಂದ ದೈಹಿಕ ನೋವು ಒಂದೆಡೆಯಾದರೆ, ಕೌಟುಂಬಿಕ ಜೀವನದಲ್ಲಿ ಉಂಟಾದ ಸಮಸ್ಯೆಗಳು ಬದುಕನ್ನು ಇನ್ನಿಲ್ಲದಂತೆ ಕಾಡಲಾರಂಭಿಸಿತು.
ಈ ಮಧ್ಯೆ ಮಾನಸಿಕವಾಗಿ ಕುಗ್ಗಿ ಹೋದ ಈಕೆ, ತನ್ನ ಈ ಸ್ಥಿತಿಯಿಂದ ಹೊರ ಬರಬೇಕು, ಬದುಕನ್ನು ಬಂದ ರೀತಿಯಲ್ಲಿ ಅನುಭವಿಸಬೇಕೆಂದು ಸ್ವಯಂ ನಿರ್ಧಾರ ತಳೆದರು. ಗಾಲಿ ಖುರ್ಚಿಯಲ್ಲೇ ಕುಳಿತು ಏನಾದರೂ ಮಾಡಬೇಕೆಂದು ಸಂಕಲ್ಪಿಸಿದರು. ಈ ವೇಳೆ ಅವರಿಗೆ ನೆನೆಪಾದದ್ದು ತಾನು ದ.ಕ ಜಿಲ್ಲೆಯ ವಿಟ್ಲದ ಮೂರ್ಕಜೆ ಎಂಬಲ್ಲಿರುವ ಮೈತ್ರೇಯಿ ಗುರುಕುಲದಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಕಲಿತ ಕರ ಕುಶಲ ಕಲೆ.ಕುಳಿತಲ್ಲೇ ಅಂತಹ ಕರಕುಶಲ ಕಲಾ ವಸ್ತುಗಳನ್ನು ರೂಪಿಸಬಹುದು ಎಂದು ನಿಶ್ಚಯಿಸಿದ ಬಿಕಾಂ ಪಧವಿಧರೆಯಾದ ಅವರು, ಯೂಟ್ಯೂಬ್ ಮೂಲಕ ಅದರ ಬಗ್ಗೆ ಹೆಚ್ಚಿನ ಕೌಶಲ್ಯ ಹೊಂದಿಸಿಕೊಂಡರು. ತನ್ನ ದುಃಸ್ಥಿತಿಯ ಸ್ಥಿತಿಯಲ್ಲಿ ‘ಕ್ರೋಶೆಟ್ ಆನ್ ವ್ಹೀಲ್ಸ್’ ಎಂಬ ಸಂಸ್ಥೆ ಪ್ರಾರಂಭಿಸಿದರು. ನವಜಾತ ಶಿಶುಗಳಿಂದ ತೊಡಗಿ ಆರು ವರ್ಷದ ಮಕ್ಕಳಿಗೆ ಕ್ರೋಶೆಟ್ ಟುಟು ಡ್ರೆಸ್, ಸ್ವೆಟರ್, ರೋಂಪರ್, ಫೋಂಚೋ, ಟೋಪಿ, ಬೊಟೀಸ್, ಮಿಟ್ಟೆಸ್ ಗಳನ್ನು ತಯಾರಿಸಿದರು. ಕ್ರೋಶೆಟ್ ಆನ್ ವ್ಹೀಲ್ಸ್ ಎನ್ನುವ ಫೇಸ್ಬುಕ್ ಮತ್ತು ಇನ್ಸ್ಟಗ್ರಾಂ ಪೇಜ್ ಆರಂಭಿಸಿದರು. ಅದರ ಮೂಲಕ ಮಾರಾಟ ಮಾಡುತ್ತ ಬದುಕಿನಲ್ಲಿ ಹೊಸ ಅಧ್ಯಾಯದ ಪುಟಗಳನ್ನು ತೆರೆದುಕೊಂಡರು.
ಇಂದು ಅವರ ಉತ್ಪನ್ನಗಳು ಸಾಕಷ್ಟು ಬೇಡಿಕೆ ಪಡೆದುಕೊಂಡು ಮನೆ ಮನೆಗಳಿಗೆ ತಲುಪುತ್ತಿವೆ. ಆರ್ಥಿಕ ಭದ್ರತೆಯನ್ನೂ ಕಲ್ಪಿಸಿದೆ. ಬದುಕಿನಲ್ಲಿ ಭರವಸೆ ಪಡೆದುಕೊಂಡಿದ್ದಾರೆ. ಎದುರಾದ ಸಂಕಷ್ಟಗಳಿಗೆ ಎದೆಗುಂದದೆ, ಸಾಧಿಸಲು ಹಲವಾರು ಅವಕಾಶಗಳನ್ನು ತಾನೇ ಸೃಷ್ಟಿಸಿಕೊಂಡಿದ್ದಾರೆ. ಸಾಧನೆಯಿಂದ ಗಮನ ಸೆಳೆದ ಪೂರ್ಣಿಮಾ ಭಟ್ ಬದುಕು ಸಮಾಜಕ್ಕೊಂದು ಪ್ರೇರಣೆ ಒದಗಿಸಿದೆ. ಈಕೆಯ ಕುರಿತ ಬರಹ ಫೇಸ್ಬುಕ್ಕಿನಲ್ಲಿ ಸಾಕಷ್ಟು ವೈರಲ್ ಆಗಿದೆ.ಓದುಗರೂ ಕೂಡಾ ಅವರ ಸಾಮಾಜಿಕ ಜಾಲತಾಣಕ್ಕೆ ಭೇಟಿ ನೀಡಿ ಉತ್ಪನ್ನಗಳನ್ನು ವೀಕ್ಷಿಸಿ ಖರೀದಿಸಬಹುದು. ತನ್ಮೂಲಕ ಪ್ರೋತ್ಸಾಹ ನೀಡಬಹುದು.
ಪೋಟೋ ಪೈಲ್ ನೇಮ್ : ಯುಪಿಪಿ_ನವೆ೬_೧