ಸರ್ಕಾರವು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಪ್ರವಾಸಿ ತಾಣವನ್ನಾಗಿ ಪುನಶ್ಚೇತನಗೊಳಿಸುವ ಸಲುವಾಗಿ ಶಬರಿಮತಿ ಆಶ್ರಮ ಅಭಿವೃದ್ಧಿಪಡಿಸಲು 45 ಕೋಟಿ ಹಣ ಬಿಡುಗಡೆಗೊಳಿಸಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಎರಡು ಬಾರಿ ಭೇಟಿ ನೀಡಿರುವ ಐತಿಹಾಸಿಕ ಸ್ಥಳವಾದ ನಂಜನಗೂಡು ತಾಲೂಕಿನ ಬದವನಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಕುರಿತು ಚರ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಅರುಂಧತಿ ಚಂದ್ರಶೇಖರ್ ಅವರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಸರ್ಕಾರವು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಪ್ರವಾಸಿ ತಾಣವನ್ನಾಗಿ ಪುನಶ್ಚೇತನಗೊಳಿಸುವ ಸಲುವಾಗಿ ಶಬರಿಮತಿ ಆಶ್ರಮ ಅಭಿವೃದ್ಧಿಪಡಿಸಲು 45 ಕೋಟಿ ಹಣ ಬಿಡುಗಡೆಗೊಳಿಸಿದೆ. ಈ ಹಿನ್ನೆಲೆ ಇದರ ರೂಪುರೇಷೆಗಳನ್ನು ಪರಿಶೀಲಿಸಲು ಭೇಟಿ ನೀಡಿದ್ದ ಆಯುಕ್ತರು, ಇದರ ನೀಲಿನಕ್ಷೆಯನ್ನು ಪರಿಶೀಲಿಸಿದರು.ಕೆ.ಆರ್.ಐ.ಡಿ.ಎಲ್ ನ ಎಇಇ ಅವರಿಂದ ಆಶ್ರಮ ನಿರ್ಮಾಣದ ಕ್ರಿಯಾ ಯೋಜನೆ, ಅನುದಾನ ಬಳಕೆ ಬಗ್ಗೆ ಕೂಲಂಕಷವಾಗಿ ಮಾಹಿತಿ ಪಡೆದು, ಪ್ರಗತಿ ಹಂತದ ಕಾಮಗಾರಿಯ ಸ್ಥಿತಿಗತಿಗಳನ್ನು ವೀಕ್ಷಿಸಿದರು.ಬಳಿಕ, ಕೈಮಗ್ಗ ಯಂತ್ರಗಾರಕ್ಕೆ ಭೇಟಿ ನೀಡಿ ಕಾರ್ಯನಿರತ ಚರಕ ಕಾರ್ಮಿಕರೊಂದಿಗೆ ಚರ್ಚಿಸಿದ್ದು, ಕಾರ್ಮಿಕರು ವೇತನ ಹೆಚ್ಚಳಿಸುವ ಮನವಿಯಿಟ್ಟರು. ಈ ಬಗ್ಗೆ ಚರ್ಚಿಸುತ್ತೇವೆ ಎಂದ ಅವರು ಖಾದಿ ಕೇಂದ್ರವನ್ನು ಪುನರುಜ್ಜೀವನಗೊಳಿಸುವ ಮೂಲಕ ಗ್ರಾಮೀಣ ಗುಡಿ ಕೈಗಾರಿಕೆ ಮಹತ್ವ ಹೆಚ್ಚಾಗಲಿದೆ ಎಂದರು.ಇನ್ನೂ ಗ್ರಾಮದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಮಾಹಿತಿ ಕಲೆ ಹಾಕಿದರು.ಈ ವೇಳೆ ಆರ್.ಡಿ.ಪಿ.ಆರ್ ಇಲಾಖೆಯ ಸಮಾಲೋಚಕಿ ವಸುಂದರಾದೇವಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಎಸ್.ಐ.ಆರ್.ಡಿ ಜಂಟಿ ನಿರ್ದೇಶಕಿ ಕವಿತಾ, ತಾಪಂ, ಗ್ರಾಪಂ ಅಧಿಕಾರಿಗಳು ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.