ಪಬ್, ಹೋಟೆಲ್‌ ಸುರಕ್ಷತೆ ಪರಿಶೀಲನೆಗೆ ಆಯುಕ್ತರ ಸೂಚನೆ

KannadaprabhaNewsNetwork |  
Published : Dec 11, 2025, 04:30 AM ISTUpdated : Dec 11, 2025, 10:00 AM IST
Bengaluru City Police commissioner Seemanth Kumar

ಸಾರಾಂಶ

ಗೋವಾ ಪಬ್ ದುರಂತ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿ ಪಬ್ ಹಾಗೂ ಹೋಟೆಲ್‌ಗಳ ಸುರಕ್ಷತೆ ಕುರಿತು ಪರಿಶೋಧನೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

  ಬೆಂಗಳೂರು :  ಗೋವಾ ಪಬ್ ದುರಂತ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿ ಪಬ್ ಹಾಗೂ ಹೋಟೆಲ್‌ಗಳ ಸುರಕ್ಷತೆ ಕುರಿತು ಪರಿಶೋಧನೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಗೋವಾ ಪಬ್‌ ಅಗ್ನಿ ಅವಘಡ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಾಗರಿಕರ ಸುರಕ್ಷತೆಗೆ ಮುಂಜಾಗ್ರತೆ ತೆಗೆದುಕೊಳ್ಳಲಾಗಿದೆ ಎಂದರು.

ಹೊಸ ವರ್ಷದ ಭದ್ರತೆ ಕುರಿತು ವಿಭಾಗ ಮಟ್ಟದಲ್ಲಿ ಅಧಿಕಾರಿಗಳು ಸಮಾಲೋಚಿಸಿ ಪೂರ್ವ ಸಿದ್ಧತೆ ನಡೆಸಿದ್ದಾರೆ. ಇದೇ ವಿಷಯವಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಅಗ್ನಿಶಾಮಕ ದಳ ಹಾಗೂ ಬೆಸ್ಕಾಂ ಸೇರಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಗೋವಾ ಅಗ್ನಿ ದುರಂತ ಬೆನ್ನಲ್ಲೇ ನಗರ ವ್ಯಾಪ್ತಿ ಪಬ್‌, ಹೋಟೆಲ್‌, ಬಾರ್ ಅಂಡ್ ರೆಸ್ಟೋರೆಂಟ್‌ ಗಳಲ್ಲಿ ಸುರಕ್ಷತಾ ವ್ಯವಸ್ಥೆ ಬಗ್ಗೆ ಆಡಿಟ್ (ಪರಿಶೋಧನೆ) ನಡೆಸುವಂತೆ ಅಗ್ನಿಶಾಮಕ ದಳ ಇಲಾಖೆಗೆ ಪತ್ರ ಬರೆಯಲಾಗಿದೆ. ಅಲ್ಲದೆ ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಪೊಲೀಸರು ಕೂಡ ಸುರಕ್ಷತೆ ಬಗ್ಗೆ ಪರಿಶೀಲಿಸಿದ್ದಾರೆ ಎಂದು ಆಯುಕ್ತರು ತಿಳಿಸಿದರು.

ಹೊಸ ಉಪ ವಿಭಾಗ ರಚನೆ?

ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಠಾಣೆಗಳು ಸೇರ್ಪಡೆ ಹಿನ್ನೆಲೆಯಲ್ಲಿ ಹೊಸದಾಗಿ ಉಪ ವಿಭಾಗ ರಚನೆಗೆ ರಾಜ್ಯ ಸರ್ಕಾರಕ್ಕೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರಸ್ತಾವನೆ ಕಳುಹಿಸಿದ್ದಾರೆ.

ಚಿಕ್ಕಬಾಣವಾರ ಎಸಿಪಿ ಮಟ್ಟದ ಉಪ ವಿಭಾಗ ರಚಿಸಿ ಅದರಲ್ಲಿ ರಾಜಾನುಕುಂಟೆ, ಚಿಕ್ಕಬಾಣವಾರ ಹಾಗೂ ಸೋಲದೇವನಹಳ್ಳಿ ಠಾಣೆಗಳ ಸೇರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಜಂಟಿ ಆಯುಕ್ತರ ಸಭೆ: 

ಗೋವಾ ಅಗ್ನಿ ದುರಂತ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆಗಳು ಸಂಭವಿಸದಂತೆ ಸ್ಥಳೀಯ ಮಟ್ಟದಲ್ಲಿ ಸುರಕ್ಷತಾ ವ್ಯವಸ್ಥೆ ಪರಿಶೀಲನಾ ಕಾರ್ಯವನ್ನು ಜಂಟಿ ಆಯುಕ್ತ ವಂಶಿಕೃಷ್ಣ ಆರಂಭಿಸಿದ್ದಾರೆ.

ಎಂ.ಜಿ.ರಸ್ತೆ, ಚರ್ಚ್‌ ಸ್ಟ್ರೀಟ್‌, ರೆಸಿಡೆನ್ಸಿ ರಸ್ತೆ ಹಾಗೂ ಬ್ರಿಗೇಡ್ ರೋಡ್ ವ್ಯಾಪ್ತಿಯ ಪಬ್‌ ಹಾಗೂ ಹೋಟೆಲ್‌ ಮಾಲಿಕರ ಜತೆ ಎರಡು ಬಾರಿ ಜಂಟಿ ಆಯುಕ್ತರು ಸಭೆ ನಡೆಸಿದ್ದಾರೆ. ಈ ವೇಳೆ ಅಗ್ನಿ ಸುರಕ್ಷತಾ ವ್ಯವಸ್ಥೆ ಕಲ್ಪಿಸಬೇಕು. ದುರ್ಘಟನೆ ಸಂಭವಿಸಿದರೆ ನೀವು ಹೊಣೆ ಹೊರಬೇಕಾಗುತ್ತದೆ ಎಂದು ವಂಶಿಕೃಷ್ಣ ಮಾಲೀಕರಿಗೆ ತಾಕೀತು ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ವಕೀಲರ ದಿನಾಚರಣೆ ಕ್ರೀಡಾಕೂಟ: ವಿಜೇತರಿಗೆ ಬಹುಮಾನ ವಿತರಣೆ
ಉಡುಪಿ: ನಾಳೆ ಆಳ್ವಾಸ್ ಸಾಂಸ್ಕೃತಿಕ ವೈಭವ