ಬೆಂಗಳೂರು : ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚಿ ಬಂದ ಖದೀಮನೊಬ್ಬನನ್ನು ಸಶ್ಮಾನದಲ್ಲಿ ಹಿಡಿದು ಯುವಕರ ಗ್ಯಾಂಗ್ ಚಿನ್ನಾಭರಣ ದೋಚಿದರೆ, ಅದೇ ಸಿಟ್ಟಿನಲ್ಲಿ ಮತ್ತೆ ಹೋಗಿ ಎರಡು ಮನೆಗಳಿಗೆ ಆ ಖದೀಮ ಕನ್ನ ಹಾಕಿದ...!
ಈಗ ಮನೆಗಳ್ಳ ಹಾಗೂ ಆತನಿಂದ ಚಿನ್ನಾಭರಣ ದೋಚಿದ್ದ ಕಿಡಿಗೇಡಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.
ಅಮೃತಹಳ್ಳಿಯ ವರದರಾಜು ಲೇಔಟ್‌ನ ಇಸಾಯಿ ರಾಜ ಅಲಿಯಾಸ್ ಕುಂಟ, ಮಂಡೂರು ಗ್ರಾಮದ ಮೌನೇಶ್ ರಾವ್, ಎಂ. ದರ್ಶನ್ ಅಲಿಯಾಸ್ ಅಪ್ಪು, ಚಂದನ್ ಹಾಗೂ ಸುನೀಲ್ ಬಂಧಿತರಾಗಿದ್ದು, ಆರೋಪಿಗಳಿಂದ 447 ಗ್ರಾಂ ಚಿನ್ನಾಭರಣ, 28 ಸಾವಿರ ರು. ನಗದು ಹಾಗೂ ಬೈಕ್ ಸೇರಿದಂತೆ 76 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮಂಡೂರು ಗ್ರಾಮದಲ್ಲಿ ಮನೆಗಳ್ಳತನ ಕೃತ್ಯ ಎಸಗಿ ಇಸಾಯಿ ರಾಜ ಮರಳುವಾಗ ಆತನನ್ನು ಹಿಡಿದು ಮೌನೇಶ್ ಹಾಗೂ ಆತನ ಸ್ನೇಹಿತರು ದರೋಡೆ ಮಾಡಿದ್ದರು. ಈ ಕೃತ್ಯದ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ರಾಮಕೃಷ್ಣ ನೇತೃತ್ವದ ತಂಡವು, ಕೊನೆಗೆ ಕೃತ್ಯಕ್ಕೆ ಬಳಸಿದ್ದ ಬೈಕ್ ನೊಂದಣಿ ಸಂಖ್ಯೆ ಆಧರಿಸಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಇಸಾಯಿ ರಾಜ ವೃತ್ತಿಪರ ಕಳ್ಳನಾಗಿದ್ದು, ಆತನ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬೀಗ ಹಾಕಿದ ಮನೆಗಳಲ್ಲಿ ಕಳ್ಳತನಕ್ಕೆ ರಾಜ ಕುಖ್ಯಾತನಾಗಿದ್ದ. ಅಂತೆಯೇ ನ.22 ರಂದು ಮಂಡೂರು ಗ್ರಾಮದಲ್ಲಿ ಮನೆಗಳ್ಳತನಕ್ಕೆ ಬಂದಿದ್ದ ರಾಜ, ಅಲ್ಲಿನ ಸ್ಮಶಾನದಲ್ಲಿ ತನ್ನ ಬೈಕ್ ನಿಲ್ಲಿಸಿ ಹೋಗಿದ್ದ. ಮನೆ ಕಳವು ಮಾಡಿ ಚಿನ್ನಾಭರಣ ತುಂಬಿಕೊಂಡು ಆತ ಮರಳಿದ್ದಾನೆ. ಅದೇ ವೇಳೆ ಸ್ಮಶಾನದಲ್ಲಿ ಮದ್ಯ ಸೇವಿಸುತ್ತಿದ್ದ ಮೌನೇಶ್ ಗ್ಯಾಂಗ್ ಕಣ್ಣಿಗೆ ರಾಜ ಬಿದ್ದಿದ್ದಾನೆ. ಬೈಕ್ ನಿಲ್ಲಿಸಿದ್ದರಿಂದ ಶಂಕೆಗೊಂಡು ರಾಜನನ್ನು ಹಿಡಿದು ಆರೋಪಿಗಳು ವಿಚಾರಿಸಿದ್ದಾರೆ.
ಆಗ ಏನೇನೋ ಹೇಳಿ ತಪ್ಪಿಸಿಕೊಳ್ಳಲು ರಾಜ ಯತ್ನಿಸಿದ್ದಾನೆ. ಆದರೆ ಬಿಡದೆ ಆತನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಮೌನೇಶ್ ತಂಡ ಪರಾರಿಯಾಗಿತ್ತು. ಈ ಘಟನೆಯಿಂದ ಕೆರಳಿದ ರಾಜ, ಮತ್ತೆ ಮಂಡೂರು ಗ್ರಾಮಕ್ಕೆ ಮರಳಿ ಬೀಗ ಹಾಕಿದ ಮತ್ತೆರಡು ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನೆಗಳ್ಳತನ ಪ್ರಕರಣದ ತನಿಖೆಗಿಳಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಆಗ ಮಂಡೂರು ಸ್ಮಶಾನದ ಬಳಿ ಕೆಟ್ಟು ನಿಂತಿದ್ದ ಬೈಕ್‌ವೊಂದನ್ನು ಸರಕು ಸಾಗಾಣಿಕೆ ತುಂಬಿಕೊಂಡು ಹೋಗುವ ದೃಶ್ಯಾವಳಿ ಪತ್ತೆಯಾಗಿದೆ. ಈ ಸುಳಿವು ಆಧರಿಸಿ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು, ಬೈಕ್ ರಿಪೇರಿಗೆ ಬಿಟ್ಟಿದ್ದ ಗ್ಯಾರೇಜ್‌ನಲ್ಲಿ ರಾಜನ ಮೊಬೈಲ್ ನಂಬರ್ ಸಿಕ್ಕಿದೆ. ಇದೇ ರಾಜನನ್ನು ಈ ಹಿಂದೆ ಅವಲಹಳ್ಳಿ ಠಾಣೆ ಪಿಐ ರಾಮಕೃಷ್ಣಾರೆಡ್ಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಹೀಗಾಗಿ ರಾಜನ ವಿಚಾರ ತಿಳಿದ ಕೂಡಲೇ ಚುರುಕಾದ ಪೊಲೀಸರು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಸೆರೆ ಹಿಡಿದಿದೆ. ನಂತರ ಠಾಣೆಗೆ ಕರೆ ತಂದು ವಿಚಾರಣೆಗೊಳಪಡಿಸಿದಾಗ ಮೌನೇಶ್ ತಂಡ ದರೋಡೆ ಕೃತ್ಯದ ಬಗ್ಗೆ ಆತ ಬಾಯ್ಪಿಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ.
ಕದ್ದ ಹಣದಲ್ಲಿ ನಿವೇಶನ ಖರೀದಿ!
ಮನೆಗಳ್ಳತನದಿಂದ ಸಂಪಾದಿಸಿದ ಹಣದಲ್ಲಿ ಬಾಗಲೂರು ಸಮೀಪ 30 ಲಕ್ಷ ರು. ಮೌಲ್ಯದ ನಿವೇಶವನ್ನು ರಾಜ ಖರೀದಿಸಿದ್ದ. ಈಗ ಬಂಧಿಸದ ಹೋಗಿದ್ದರೆ ಇದೇ ಆಭರಣ ಮಾರಾಟ ಮಾಡಿ 40-50 ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಆತ ಯೋಜಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
3 ದಿನ ಮನೆಯಲ್ಲಿ ಕೂಡಿ ಹಾಕಿದ್ದ ತಾಯಿ
ತನ್ನ ತಾಯಿ ಹಾಗೂ ಅಣ್ಣನ ಜತೆ ರಾಜ ನೆಲೆಸಿದ್ದ. ತನ್ನ ಪುತ್ರನ ಮನೆಗಳ್ಳತನ ಬಗ್ಗೆ ತಿಳಿದು ರಾಜನ ತಾಯಿ ನೊಂದಿದ್ದರು. ಹೀಗಾಗಿ ಮಂಡೂರಿನಲ್ಲಿ ಕಳ್ಳತನಕ್ಕೂ ಮುನ್ನ ಮನೆಯಲ್ಲಿ ಮೂರು ದಿನಗಳು ಆತನನ್ನು ತಾಯಿ ಕೂಡಿ ಹಾಕಿದ್ದರು. ಆದರೆ ತಾಯಿ ಕಣ್ತಪ್ಪಿಸಿ ಮನೆಯಿಂದ ಹೊರಬಂದಿದ್ದ ಆತ, ಈಗ ಮನೆಗಳ್ಳತನ ಕೃತ್ಯ ಎಸಗಿ ಮತ್ತೆ ಜೈಲು ಸೇರಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
‘ಅತ್ತೆ’ ಮೂಲಕ ವಿಲೇವಾರಿ
ತನಗಿಂತ ಹಿರಿಯ ವಯಸ್ಸಿನ ಮಹಿಳೆ ಜತೆ ರಾಜನಿಗೆ ಸ್ನೇಹವಿತ್ತು. ಆಕೆಯನ್ನು ಅತ್ತೆ ಎಂದು ಕರೆಯುತ್ತಿದ್ದ ರಾಜ, ಅತ್ತೆ ಮೂಲಕ ಕಳವು ಚಿನ್ನಾಭರಣಗಳನ್ನು ವಿಲೇವಾರಿ ಮಾಡಿಸಿ ಹಣ ಸಂಪಾದಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸ್ಮಶಾನದಲ್ಲಿ ಗಾರೆ ಕೆಲಸಗಾರರ ದರೋಡೆ
ರಾಜನಿಂದ ದರೋಡೆ ಮಾಡಿದ್ದ ಮೌನೇಶ್ ಮತ್ತು ಸುನೀಲ್ ಗಾರೆ ಕೆಲಸ ಮಾಡಿಕೊಂಡಿದ್ದರೆ, ಇನ್ನುಳಿದ ದರ್ಶನ್ ಹಾಗೂ ಚಂದನ್ ಡಿಲವರಿ ಬಾಯ್‌ಗಳಾಗಿ ಜೀವನ ಸಾಗಿಸುತ್ತಿದ್ದರು. ಕುಡಿದ ಮತ್ತಿನಲ್ಲಿ ಸ್ಮಶಾನದಲ್ಲಿ ಒಂಟಿಯಾಗಿ ಸಿಕ್ಕಿದ್ದ ರಾಜನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಈಗ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.