;Resize=(412,232))
ಬೆಂಗಳೂರು : ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ನೆಪದಲ್ಲಿ ಸಾಫ್ಟ್‌ವೇರ್ ಉದ್ಯೋಗಿಗೆ 41 ಲಕ್ಷ ರು. ವಂಚನೆ ಕೃತ್ಯ ಬೆನ್ನಲ್ಲೇ ನಗರ ವ್ಯಾಪ್ತಿ ರಸ್ತೆಬದಿಯ ಅನಧಿಕೃತ ನಾಟಿ ವೈದ್ಯ ಚಿಕಿತ್ಸಾ ಟೆಂಟ್‌ಗಳನ್ನು ತೆರವುಗೊಳಿಸುವಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಸರ್ಕಾರದ ಪರವಾನಿಗೆ ಇಲ್ಲದೆ ವೈದ್ಯಕೀಯ ಚಿಕಿತ್ಸೆ ನೀಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಜ್ಞಾನಭಾರತಿ ಟೆಕ್ಕಿ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗಾಗಲೇ ರಸ್ತೆ ಬದಿ ಅನಧಿಕೃತವಾಗಿ ತೆರೆದಿರುವ ಆಯುರ್ವೇದಿಕ್ ಚಿಕಿತ್ಸಾ ಘಟಕಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಾಟಿ ವೈದ್ಯ ನೆಪದಲ್ಲಿ ಜನರು ಮೋಸ ಹೋಗಿದ್ದರು. ಸ್ಥಳೀಯ ಠಾಣೆಗೆ ದೂರು ನೀಡಿದರೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು.
ಆರೋಗ್ಯ ಸಮಸ್ಯೆ ಕುರಿತು ತಜ್ಞ ವೈದ್ಯರ ಬಳಿ ನಾಗರಿಕರು ಚಿಕಿತ್ಸೆ ಪಡೆಯಬೇಕು. ಅನಧಿಕೃತ ವ್ಯಕ್ತಿಗಳಿಂದ ವೈದ್ಯಕೀಯ ಸಲಹೆ ಪಡೆಯಬಾರದು. ಇನ್ನು ಆಯುರ್ವೇದಿಕ್ ಹಾಗೂ ನಾಟಿ ವೈದ್ಯ ಹೆಸರಿನಲ್ಲಿ ಜನರಿಗೆ ವಂಚಿಸುವ ವ್ಯಕ್ತಿಗಳ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಟೆಕ್ಕಿಗೆ 41 ಲಕ್ಷ ವಂಚನೆ: ಮತ್ತೊಬ್ಬ ಸೆರೆ
ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ನೆಪದಲ್ಲಿ ಸಾಫ್ಟ್‌ವೇರ್ ಉದ್ಯೋಗಿಗೆ 41 ಲಕ್ಷ ರು. ವಂಚನೆ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಮೂಲದ ಮನೋಜ್ ಸಿಂಗ್ ಚಿಟ್ಟೋದಿಯಾ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ನಕಲಿ ಗುರೂಜಿ ವಿಜಯ್ ಪ್ರಧಾನ ಚಿಟ್ಟೋದಿಯಾ ಅಲಿಯಾಸ್ ವಿಜಯ್ ಗುರೂಜಿನನ್ನು ಪೊಲೀಸರು ಬಂಧಿಸಿದ್ದರು. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರೋಪಿಗಳಿಂದ 19.5 ಲಕ್ಷ ರು. ಹಣ ಹಾಗೂ 17ಕ್ಕೂ ಬಗೆಯ ನಕಲಿ ಆಯುರ್ವೇದಿಕ್ ಔಷಧಿಗಳನ್ನು ಜಪ್ತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಆರೋಪಿಗಳು ಮೂಲತಃ ಗುಜರಾತ್ ರಾಜ್ಯದವರಾಗಿದ್ದು, ಪ್ರಸ್ತುತ ಮಹಾರಾಷ್ಟ್ರದ ಮೀರಜ್ ಜಿಲ್ಲೆಯಲ್ಲಿ ನೆಲೆಸಿದ್ದರು. ಆಯುರ್ವೇದದ ಚಿಕಿತ್ಸೆ ನೆಪದಲ್ಲಿ ಜನರಿಗೆ ವಂಚಿಸಿ ಹಣ ಸಂಪಾದಿಸುವುದು ಈ ಗ್ಯಾಂಗ್‌ನ ಕೃತ್ಯವಾಗಿತ್ತು. ಅಂತೆಯೇ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಪ್ರಮುಖ ನಗರಗಳಲ್ಲಿ ರಸ್ತೆ ಬದಿ ಟೆಂಟ್ ಹಾಕಿಕೊಂಡು ಲೈಂಗಿಕ ಸಮಸ್ಯೆ ಪರಿಹರಿಸುತ್ತೇವೆ ಎಂದು ಪ್ರಚಾರ ಮಾಡುತ್ತಿದ್ದರು. ತಮ್ಮ ಮಾತು ನಂಬಿ ಚಿಕಿತ್ಸೆಗೆ ಬರುವ ಜನರಿಗೆ ಮಂಕೂಬೂದಿ ಎರಚಿ ಹಣ ದೋಚುತ್ತಿದ್ದರು. ಮೂರ್ನಾಲ್ಕು ತಿಂಗಳು ತಾತ್ಕಾಲಿಕ ಟೆಂಟ್ ಹಾಕಿ ಬೀಡು ಬಿಡುತ್ತಿದ್ದ ಆರೋಪಿಗಳು, ವಂಚನೆಯಿಂದ ಲಕ್ಷ ಲಕ್ಷ ಹಣ ಸಂಪಾದಿಸಿ ಟೆಂಟ್ ಕಿತ್ತು ಪರಾರಿಯಾಗುತ್ತಿದ್ದರು. ಹೀಗಾಗಿ ಈ ವಂಚನೆ ಬಗ್ಗೆ ಕೆಲವರು ಮರ್ಯಾದೆಗೆ ಅಂಜಿ ಸಂತ್ರಸ್ತರು ಪೊಲೀಸರಿಗೆ ದೂರು ಕೊಡುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಳನೇ ತರಗತಿ ಓದಿದ್ದ ವಿಜಯ್, ತಾನು ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಪರಿಣಿತ ಎಂದು ಬಿಂಬಿಸಿಕೊಂಡಿದ್ದ. ಅಲ್ಲದೆ 2019 ರಲ್ಲಿ ಅಖಿಲ ಕರ್ನಾಟಕ ಅನುವಂಶೀಯ ವೈದ್ಯರ ಪರಿಷತ್‌ನಲ್ಲಿ ನೋಂದಣಿ ಮಾಡಿಸಿ ಆತ ಪ್ರಮಾಣಪತ್ರ ಪಡೆದಿದ್ದ. ತನ್ನ ಬಳಿ ಚಿಕಿತ್ಸೆ ಬರುವವರಿಗೆ ಆ ಪ್ರಮಾಣ ಪತ್ರ ತೋರಿಸಿ ನಂಬಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಲೈಂಗಿಕ ಸಮಸ್ಯೆ ಹಿನ್ನೆಲೆಯಲ್ಲಿ ಕೆಂಗೇರಿ ಸಮೀಪ ಚಿಕಿತ್ಸೆ ಪಡೆಯುತ್ತಿದ್ದ ಸಾಫ್ಟ್‌ವೇರ್ ಉದ್ಯೋಗಿ, ಆ ಆಸ್ಪತ್ರೆಗೆ ಹೋಗುವ ದಾರಿಯಲ್ಲಿದ್ದ ವಿಜಯ್ ಗುರೂಜಿ ಬಳಿ ಚಿಕಿತ್ಸೆಗೆ ಹೋಗಿ ವಂಚನೆಗೊಳಗಾಗಿದ್ದರು. ಈ ವಂಚನೆ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಹೊರ ರಾಜ್ಯದಲ್ಲಿ ನೈಋತ್ಯ ವಿಭಾಗದ ಡಿಸಿಸಿ ಅನಿತಾ ಬಿ ಹದ್ದಣ್ಣವರ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಎಂ.ಎಸ್. ರವಿ ಹಾಗೂ ಪಿಎಸ್‌ಐ ಭಗವಂತರಾಯ್ ಮಾಲೀ ಪಾಟೀಲ್ ನೇತೃತ್ವದ ತಂಡವು ಬಂಧಿಸಿ ಕರೆತಂದಿದೆ.
ಯಶವಂತಪುರದ ವಿಜಯಲಕ್ಷ್ಮೀ ಆಯುರ್ವೇದ ಔಷಧ ಮಳಿಗೆಯಲ್ಲಿ ತಾವು ತಯಾರಿಸಿದ್ದ ಔಷಧಿಗಳನ್ನು ಮಾರಾಟಕ್ಕೆ ಕೊಡುತ್ತಿದ್ದರು. ಆ ಮಳಿಗೆಯಲ್ಲೇ ಔಷಧ ಖರೀದಿಸುವಂತೆ ತಮ್ಮ ಬಳಿ ಚಿಕಿತ್ಸೆಗೆ ಬರುವ ಜನರಿಗೆ ವಿಜಯ್ ಗುರೂಜಿ ಹೇಳುತ್ತಿದ್ದ. ಈ ಔಷಧ ಮಾರಾಟಕ್ಕೆ ಆ ಮಳಿಗೆಗೆ ಆರೋಪಿಗಳು ಕಮೀಷನ್ ಕೊಡುತ್ತಿದ್ದರು ಎಂದು ತಿಳಿದು ಬಂದಿದೆ.