- ಪೌರಕಾರ್ಮಿಕರ ಸೇವೆ ಕಾಯಂಗೆ ಹಣ ವಸೂಲಿ ಏಕೆ?: ಶಾಸಕ ಬಸವಂತಪ್ಪ ಕಿಡಿನುಡಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಬಡ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ₹2 ಲಕ್ಷ, ₹3 ಲಕ್ಷ , ₹5 ಲಕ್ಷ ವಸೂಲಿ ಮಾಡುವುದನ್ನು ನಿಲ್ಲಿಸವ್ವಾ ತಾಯಿ. ನಿನಗೆ ಕೈಮುಗಿದು ಕೇಳುತ್ತೇನೆ..ಹೀಗೆಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ದಾವಣಗೆರೆ ಪಾಲಿಕೆ ಆಯುಕ್ತರಿಗೆ ವೇದಿಕೆ ಮೇಲಿನಿಂದಲೇ ಮನವಿ ಮಾಡಿದ ಘಟನೆ ನಗರದಲ್ಲಿ ನಡೆಯಿತು.
ಸೋಮವಾರ ನಗರದ ಪಾಲಿಕೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ ಸಮಾರಂಭದಲ್ಲಿ ಅವರು ಈ ತಾಕೀತು ಮಾಡಿದರು. ಕೊರಳಲ್ಲಿ ಮಾಂಗಲ್ಯ ಸರ, ಮೂಗಲ್ಲಿ ಮೂಗುಬೊಟ್ಟು ಸಹ ಇಲ್ಲದೇ ಪೌರ ಕಾರ್ಮಿಕ ಮಹಿಳೆಯರು ಬಾಳುತ್ತಿದ್ದಾರೆ. ಅಂತಹವರ ಸೇವೆ ಕಾಯಂಗೊಳಿಸಲು ಹಣ ಯಾಕೆ ವಸೂಲಿ ಮಾಡುತ್ತೀರಿ ಎಂದರು.ಪಾಲಿಕೆ, ನಗರಸಭೆ, ಪುರಸಭೆ, ಪಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಎಲ್ಲ ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಈ ಸಂತೋಷ ಒಂದು ಕಡೆ ಇದೆ. ಮತ್ತೊಂದು ಕಡೆ ಲಂಚಾವತಾರ. ಅಕ್ಕಾ... ಒಂದು ನಿಮಿಷ ಇಲ್ಲಿ ಕೇಳವ್ವಾ ಕಮೀಷನರೇ, ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವ ಆದೇಶ ಪತ್ರ ಬರುತ್ತಿದ್ದಂತೆ ₹2 ಲಕ್ಷ, ₹3 ಲಕ್ಷ, ₹5 ಲಕ್ಷ ಕೊಡಬೇಕಂತೆ ಎಂಬ ಮಾತು ಪೌರ ಕಾರ್ಮಿಕರಿಂದ ಕೇಳಿಬರುತ್ತಿದೆ. ಇದಕ್ಕೆ ಮಧ್ಯವರ್ತಿಗಳೂ ಇದ್ದಾರೆಂಬ ಮಾತು ಇದೆ. ಇದಕ್ಕೆಲ್ಲಾ ಅವಕಾಶ ಕೊಡಬೇಡಿ ಎಂದು ಶಾಸಕರು ಹೇಳಿದರು.
ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವುದನ್ನು ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರಾಗಲೀ, ನಾನಾಗಲೀ ಅಥವಾ ರಾಜ್ಯದ ಯಾವುದೇ ಸಚಿವರು, ಸಂಸದರು, ಶಾಸಕರಾಗಲೀ ಗಮನಿಸುವುದಿಲ್ಲ. ಯಾವೊಬ್ಬ ಪೌರ ಕಾರ್ಮಿಕರಿಂದ ಹಣ ಪಡೆದು ಸೇವೆ ಕಾಯಂಗೊಳಿಸಲು ಮುಂದಾಗಿದ್ದರೆ ಅಂತಹ ಕೆಲಸ ಮಾಡಬೇಡಿ. ವಸೂಲಿ ವಿರುದ್ಧ ಲೋಕಾಯುಕ್ತಕ್ಕೆ ಹೋಗಿ, ತನಿಖೆ ಮಾಡಿಸಿದರೆ ನಿಮಗೆಲ್ಲರಿಗೂ ಗೊತ್ತಾಗುತ್ತದೆ ಎಂದರು.- - -
(ಟಾಪ್ ಕೋಟ್) ಇವು ಪೌರ ಕಾರ್ಮಿಕರು, ಅಲ್ಲಿಯೇ ಹುಟ್ಟಿ, ಅಲ್ಲಿಯೇ ಸಾಯುತ್ತವೆ. ನೀವುಗಳು ಜವಾಬ್ದಾರಿಯುತ ಅಧಿಕಾರಿಗಳಾಗಿ ಪೌರ ಕಾರ್ಮಿಕರ ಹಿತವನ್ನು ಕಾಯದಿದ್ದರೆ ಮತ್ತೆ ವಿಧಾನಸೌಧದಲ್ಲಿ ಈ ಬಗ್ಗೆ ಧ್ವನಿ ಎತ್ತುವೆ. ಗುತ್ತಿಗೆ ನೇಮಕಾತಿ ವೇಳೆಯಲ್ಲೂ ಲಕ್ಷಾಂತರ ಹಣ ವಸೂಲಿ ಮಾಡಲಾಗಿದೆ. ಇದನ್ನು ತಡೆಗಟ್ಟುವ ಕೆಲಸ ಆಗಬೇಕು- ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ
- - --15ಕೆಡಿವಿಜಿ1: ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ