ರಾಷ್ಟ್ರೀಯ ಹೆದ್ದಾರಿ 50, ರಾಹೆ 67ರಲ್ಲಿ ಲಾರಿ ಸಂಚಾರ ಯಥಾಸ್ಥಿತಿ
ಕನ್ನಡಪ್ರಭ ವಾರ್ತೆ ಹೊಸಪೇಟೆಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘ ಮತ್ತು ಸಿವಿಲ್ ಲಾರಿ ಮಾಲೀಕರು ಹಾಗೂ ಚಾಲಕರ ಸಂಘ, ಟಿಪ್ಪರ್ ಲಾರಿ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನೀಡಿರುವ ಮುಷ್ಕರಕ್ಕೆ ಮೊದಲ ದಿನವಾದ ಮಂಗಳವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜ್ಯದಲ್ಲಿ ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ. ಇದರಿಂದ ಲಾರಿಗಳಲ್ಲಿ ಸರಕು ಸಾಗಣೆ ಮೇಲೆಯೇ ಜೀವನ ನಡೆಸುತ್ತಿರುವ ಲಾರಿ ಮಾಲೀಕರು, ಚಾಲಕರು, ಕ್ಲೀನರ್ ಹಾಗೂ ಹಮಾಲರಿಗೆ ಭಾರೀ ಹೊಡೆತ ಬೀಳಲಿದೆ. ಇದರಿಂದ ಬೆಲೆ ಏರಿಕೆ ಆಗಲಿದೆ. ಸರ್ಕಾರ ಈ ಕೂಡಲೇ ಡೀಸೆಲ್ ಬೆಲೆ ಏರಿಕೆ ಹಿಂಪಡೆದು, ಯಥಾಸ್ಥಿತಿಗೆ ತರಬೇಕು. ಪೆಟ್ರೋಲ್ ಬೆಲೆ ಕೂಡ ರಾಜ್ಯದಲ್ಲಿ ಜಾಸ್ತಿ ಇದೆ. ಜನ ಜೀವನ ಕಷ್ಟಕರವಾಗಿದೆ ಎಂದು ಲಾರಿ ಮಾಲೀಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಮಣಿ ಹೇಳಿದರು.ವಿಜಯನಗರ ಜಿಲ್ಲೆಯಲ್ಲಿ ಮಂಗಳವಾರ ಕೆಲವು ಕಡೆ ಲಾರಿ ಸಂಚಾರ ಇಲ್ಲದಿದ್ದರೆ, ಇನ್ನೂ ಕೆಲವು ಕಡೆ ಸಂಚಾರ ಎಂದಿನಂತೆ ಇತ್ತು. ಈ ಹಿಂದೆ ದೂರದ ಊರುಗಳಿಂದ ಸರಕು ಸಾಗಣೆಯೊಂದಿಗೆ ಆಗಮಿಸುತ್ತಿರುವ ಲಾರಿಗಳು, ಟಿಪ್ಪರ್ ಲಾರಿಗಳು ಸಂಚರಿಸುತ್ತಿವೆ. ಸ್ಥಳೀಯ ಲಾರಿಗಳು ಎಲ್ಲಿಯೂ ಓಡಾಟ ನಡೆಸುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಜತೆಗೂ ಬೇಡಿಕೆಗಳ ಈಡೇರಿಕೆಗಾಗಿ ಸಂಘದ ಮುಖಂಡರು ಮಾತುಕತೆ ನಡೆಸುತ್ತಿದ್ದಾರೆ ಎಂದು ಮಣಿ ತಿಳಿಸಿದರು.
ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ 50 ಮತ್ತು ರಾಹೆ 67ರಲ್ಲಿ ಲಾರಿ ಸಂಚಾರ ಯಥಾಸ್ಥಿತಿಯಲ್ಲಿತ್ತು. ಕಾರ್ಖಾನೆಗಳು ಹಾಗೂ ಗಣಿಗಳಿಗೆ ತೆರಳುವ ಲಾರಿಗಳು ಹಾಗೂ ಟಿಪ್ಪರ್ ಲಾರಿಗಳ ಓಡಾಟ ಸ್ಥಗಿತಗೊಳಿಸಲು ಸ್ಥಳೀಯ ಮುಖಂಡರು ಸೂಚನೆ ನೀಡಿದ್ದಾರೆ. ಇನ್ನೂ ದೈನಂದಿನ ವಸ್ತುಗಳನ್ನು ಮಾರುಕಟ್ಟೆಗೆ ಸಾಗಿಸುವ ಲಾರಿಗಳು ಮತ್ತು ಇತರ ಗೂಡ್ಸ್ ವಾಹನಗಳ ಮಾಲೀಕರಿಗೂ ತಿಳಿಸಲಾಗಿದೆ ಎಂದು ಸ್ಥಳೀಯ ಮುಖಂಡರು ತಿಳಿಸಿದರು. ಮುಖ್ಯಮಂತ್ರಿ ಜತೆಗೆ ಮಾತುಕತೆ ಫಲಪ್ರದವಾಗದಿದ್ದರೆ, ಪ್ರತಿಭಟನೆ ಕಾವು ಪಡೆಯಲಿದೆ ಎಂದೂ ಮುಖಂಡರು ತಿಳಿಸಿದ್ದಾರೆ.