ಕೆಜಿಎಫ್ : 2001 ರಲ್ಲಿ ಚಿನ್ನದ ಗಣಿಗಳನ್ನು ಮುಚ್ಚುವ ಸಮಯದಲ್ಲಿ ಗಣಿ ಆಡಳಿತ ಮಂಡಳಿ ಮತ್ತು ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರ ನಡುವೆ ಮನೆಗಳಿಗೆ ಸಂಬಂಧಿಸಿದಂತೆ ಒಪ್ಪಂದವಾಗಿದ್ದು, ಅದರಂತೆ ಒಬ್ಬರಿಗೆ ಒಂದು ಮನೆ ಮಾತ್ರ ಅವಕಾಶ ಇದೆ ಎಂದು ಸಂಸದ ಎಂ.ಮಲ್ಲೇಶ್‌ಬಾಬು ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ‘ಸೇವ್ ಕೆಜಿಎಫ್ ಯುನೈಟೆಡ್ ಫ್ರಂಟ್’ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. 2001 ರಲ್ಲಿ ಮಾಡಿಕೊಂಡಿರುವ ಒಪ್ಪಂದದಂತೆ ಒಬ್ಬರಿಗೆ ಒಂದು ಮನೆಯ ಹಕ್ಕುಪತ್ರವನ್ನು ನೀಡಲು ಯಾವುದೇ ಅಡ್ಡಿಯಿಲ್ಲ. ಆದರೆ ಇಂದಿಗೂ ಕೆಲವು ನೌಕರರು ತಮ್ಮ ಹೆಸರಿನಲ್ಲಿ ಎರಡು, ಮೂರು ಮನೆಗಳನ್ನು ಹೊಂದಿರುವುದರಿಂದಾಗಿ ಎಲ್ಲರಿಗೂ ಹಕ್ಕುಪತ್ರಗಳನ್ನು ನೀಡುವುದು ತಡವಾಗುತ್ತಿದೆ ಎಂದರು. ಹೆಚ್ಚುವರಿ ಮನೆ ಹಿಂತಿರುಗಿಸಿ
ಎಸ್‌ಟಿಬಿಪಿ ಯೋಜನೆಯಡಿಯಲ್ಲಿ ಒಂದು ಮನೆಗಿಂತ ಹೆಚ್ಚಿನ ಮನೆಗಳನ್ನು ವಶಪಡಿಸಿಕೊಂಡಿರುವವರು ಒಂದು ಮನೆಯನ್ನು ಮಾತ್ರ ಇರಿಸಿಕೊಂಡು ಉಳಿದ ಮನೆಗಳನ್ನು ಹಿಂದಿರುಗಿಸುವಂತೆ ಈಗಾಗಲೇ ಬಿಜಿಎಂಎಲ್ ವತಿಯಿಂದ ನೋಟಿಸ್‌ಗಳನ್ನು ನೀಡಲಾಗಿದ್ದು, ಅದರಂತೆ ಹಿಂತಿರುಗಿಸಿದಲ್ಲಿ ಮಾತ್ರ ಆದಷ್ಟು ಬೇಗನೇ ಉಳಿದವರಿಗೆ ಮನೆಯ ಹಕ್ಕುಪತ್ರಗಳನ್ನು ವಿತರಿಸುವ ಕೆಲಸವನ್ನು ಮಾಡಲಾಗುವುದು ಎಂದರು. ಬಿಜಿಎಂಎಲ್ ಆಸ್ಪತ್ರೆಯನ್ನು ಪುನಃ ಪ್ರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸತ್ಯಸಾಯಿ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ ಬಿಜಿಎಂಎಲ್ ಆಸ್ಪತ್ರೆ ಜಾಗದ ವಿಚಾರವಾಗಿ ಪ್ರಸ್ತುತ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಅದು ಮುಗಿದ ಬಳಿಕವಷ್ಟೇ ಸತ್ಯಸಾಯಿ ಸಂಸ್ಥೆಯವರು ಆಸ್ಪತ್ರೆಯನ್ನು ನಡೆಸಿಕೊಂಡು ಹೋಗಲಿದ್ದಾರೆ ಎಂದರು. ಅನೈತಿಕ ಚಟುವಟಿಕೆ ತಡೆಗಟ್ಟಿ
ನಗರದ ಜಿಮ್ಖಾನ ನವೀಕರಣಗೊಳಿಸುವಂತೆ ಈಗಾಗಲೇ ಸಿಎಸ್‌ಓ ರವರೊಂದಿಗೆ ಚರ್ಚಿಸಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೈದಾನದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ಸಂಬಂಧಿಸಿದಂತೆ ಸೇವ್ ಕೆಜಿಎಫ್ ಯುನೈಟೆಡ್ ಫ್ರಂಟ್ ವತಿಯಿಂದ ಪೊಲೀಸರಿಗೆ ಮನವಿ ಪತ್ರವನ್ನು ನೀಡಿ ಸರಿಪಡಿಸುವಂತೆ ಆಗ್ರಹಿಸಬೇಕೆಂದರು. ಬಿಇಎಂಎಲ್ ಸಂಸ್ಥೆಯ ಗುತ್ತಿಗೆ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಂಡ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರನ್ನು ಸ್ಥಳಕ್ಕೆ ಕರೆಯಿಸಿ ನೌಕರರ ಮನವೊಲಿಸುವ ಕಾರ್ಯವನ್ನು ಮಾಡಿದರೂ ಸಹ ಒಬ್ಬ ನೌಕರರೂ ತಮ್ಮನ್ನು ಭೇಟಿ ಮಾಡಲಿಲ್ಲ. ನೌಕರರಿಗೆ ತಾಳ್ಮೆ ಅಗತ್ಯವಾಗಿದ್ದು, ತಾಳ್ಮೆಯಿಂದ ಇದ್ದಲ್ಲಿ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ ಎಂದರು. ಸೇವ್ ಕೆಜಿಎಫ್‌ನ ಅಧ್ಯಕ್ಷರಾದ ಜ್ಯೂತಿಬಸು ಮಾತನಾಡಿ, ಬಿಜಿಎಂಎಲ್‌ನ ಆಸ್ಪತ್ರೆಯನ್ನು ಪ್ರಾರಂಭಿಸಿ ಚಿನ್ನದ ಗಣಿಗಳ ಕಾರ್ಮಿಕರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಬೇಕು, ಚಿನ್ನದ ಗಣಿಗಳ ಪ್ರದೇಶದಲ್ಲಿ ೧೦ ಸಾವಿರ ನಿವೃತ್ತ ಕಾರ್ಮಿಕರ ಮನೆಗಳನ್ನು ಸ್ವಂತ ಮಾಡಬೇಕು, ಬಿಜಿಎಂಎಲ್ ನಿವೃತ್ತ ನೌಕರರ ೫೨ ಕೋಟಿ ಬಾಕಿ ಹಣವನ್ನು ನೀಡಬೇಕು, ಜಿಮ್‌ಖಾನ ಮೈದಾನ, ಡಾ.ಅಂಬೇಡ್ಕರ್ ಪುಟ್‌ಬಾಲ್ ಮೈದಾನವನ್ನು ಪುನರ್ ಪ್ರಾರಂಬಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಗೆ ಕಾಯಕಲ್ಪ
ಬೆಮೆಲ್ ಸಂಸ್ಥೆಯಲ್ಲಿ ಖಾಲಿ ಇರುವ ನೌಕರರ ಹುದ್ದೇಗಳನ್ನು ತುಂಬಿ ಸ್ಥಳೀಯರಿಗೆ ಅವಕಾಶ ನೀಡಬೇಕು, ಕೆಜಿಎಫ್ ತಾಲೂಕಿನ ಒಂದು ಲಕ್ಷ ಸಹಿ ಸಂಗ್ರಹಣೆ ಮಾಡಿ ಕೆಜಿಎಫ್‌ನ ಸಾರ್ವಜನಿಕ ಆಸ್ಪತ್ರೆಗೆ ಕಾಯಕಲ್ಪ ನೀಡಬೇಕು, ಕೆಜಿಎಫ್ ಸಾರ್ವಜನಿ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸಗೆ ನೀಡದೆ ಕೋಲಾರ ಮತ್ತು ಬೆಂಗಳೂರುಗೆ ಆಸ್ಪತ್ರೆಗಳ ರೆಫರ್ ಮಾಡುತ್ತಿದ್ದು, ಇದರಿಂದ ಬಹುತೇಕ ರೋಗಿಗಳು ಮಾರ್ಗ ಮಧ್ಯದಲ್ಲಿ ಸಾವನ್ನುಪ್ಪಿದ್ದಾರೆ, ಈ ಸಾವುಗಳನ್ನು ತಪ್ಪಿಸಲು ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರು ಮತ್ತು ದಾದಿಯರನ್ನು ನೇಮಕ ಮಾಡಬೇಕೆಂದು ಸಂಸದರಿಗೆ ಮನವಿ ಮಾಡಿದರು. ಜಿಲ್ಲಾಜೆಡಿಎಸ್ ಮುಖಂಡರಾದ ಶ್ರೀನಾಥ್, ನಟರಾಜ್, ತಾಲೂಕು ಅಧ್ಯಕ್ಷ ದಯಾನಂದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.