ಬಳ್ಳಾರಿ: ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವುದು ಚುನಾವಣೆ ಆಯೋಗದ ಮುಖ್ಯ ಉದ್ದೇಶವಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಪ್ರತಿ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ವಹಿಸಬೇಕು ಎಂದು ಚುನಾವಣಾ ವೆಚ್ಚ ವೀಕ್ಷಕರಾಗಿ ಆಗಮಿಸಿರುವ ಕೆ.ಕೃಷ್ಣಮೂರ್ತಿ, ಕೆ.ಸುರೇಂದ್ರ ಪೌಲ್ ಹೇಳಿದರು.ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ವೆಚ್ಚ ನಿರ್ವಹಣೆ ಸಂಬಂಧ ಸಹಾಯಕ ಚುನಾವಣೆ ವೆಚ್ಚ ವೀಕ್ಷಕರು, ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿವಿಟಿ, ಎಂಸಿಎಂಸಿ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಸಂಡೂರು, ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳ ವೆಚ್ಚ ವೀಕ್ಷಕರಾದ ಕೆ.ಸುರೇಂದ್ರ ಪೌಲ್ ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿ ಮತ್ತು ನಿರ್ದೇಶನಗಳನ್ನು ತಪ್ಪದೇ ಪಾಲಿಸುವುದರ ಮೂಲಕ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಸಹಾಯಕ ವೆಚ್ಚ ವೀಕ್ಷಕ ಅಧಿಕಾರಿಗಳು, ಎಫ್‍ಎಸ್‍ಟಿ, ಎಸ್‍ಎಸ್‍ಟಿ ಮತ್ತು ವಿವಿಟಿ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮೀಣ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವೆಚ್ಚ ವೀಕ್ಷಕರಾಗಿ ಆಗಮಿಸಿರುವ ಕೆ. ಕೃಷ್ಣಮೂರ್ತಿ ಅವರು ಮಾತನಾಡಿ, ಕಂಟ್ರೋಲ್ ರೂಂ ಗೆ ಸಲ್ಲಿಕೆಯಾಗುವ ದೂರುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ, ತುರ್ತು ಕ್ರಮ ವಹಿಸಬೇಕು. ಈ ದಿಸೆಯಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಚುನಾವಣಾ ವೆಚ್ಚ ನಿರ್ವಹಿಸಲು ನೇಮಕವಾಗಿರುವ ಅಧಿಕಾರಿಗಳು, ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಹರೀಶ್ ಚುನಾವಣೆ ವೆಚ್ಚ ನಿರ್ವಹಣೆ ಕುರಿತು ತರಬೇತಿ ನೀಡಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಪ್ರತಿ ಅಭ್ಯರ್ಥಿಗೆ ವೆಚ್ಚದ ಮಿತಿ ನಿಗದಿಪಡಿಸಿದ್ದು, ಎಲ್ಲ ಅಭ್ಯರ್ಥಿಗಳ ಪ್ರತಿದಿನದ ಕಾರ್ಯಕ್ರಮಗಳ ಕುರಿತ ಮಾಹಿತಿ ಪಡೆಯಬೇಕು. ದಾಖಲೆಗಳನ್ನು ವಿಡಿಯೋ ವೀಕ್ಷಣಾ ತಂಡಗಳಿಂದ ಪಡೆದು, ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅದರಲ್ಲಿನ ವೆಚ್ಚಗಳ ಕುರಿತು ದಾಖಲು ಮಾಡಬೇಕು ಎಂದರು.
ಚುನಾವಣೆ ವೆಚ್ಚ ದೃಷ್ಟಿಯಿಂದ ರಾಜಕೀಯ ಮುಖಂಡರು ಹಾಗೂ ಸ್ಟಾರ್ ಪ್ರಚಾರಕರ ಆಗಮನದ ಮೇಲೂ ಗಮನ ಇರಿಸಲಾಗಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿನದಿಂದಲೇ ವೆಚ್ಚದ ವಹಿಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ಚೆಕ್ ಪೋಸ್ಟ್‌ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಸೌಜನ್ಯಯುತವಾಗಿ ವರ್ತಿಸಿ, ಸಮರ್ಪಕ ತಪಾಸಣೆ ನಡೆಸಬೇಕು. ದಾಖಲೆ ರಹಿತ ಹಣ ಅಥವಾ ಇನ್ನಿತರೆ ವಸ್ತುಗಳು ಸಾಗಾಣಿಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಚುನಾವಣೆ ವೆಚ್ಚ ನೋಡಲ್ ಅಧಿಕಾರಿಯಾಗಿರುವ ಮಹಾನಗರ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ನಾಗರಾಜ, ಎಲ್ಲ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾ ವೆಚ್ಚ ವೀಕ್ಷಕರು, ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿವಿಟಿ, ಎಂಸಿಎಂಸಿ, ಎಸ್‍ಎಂಸಿ ತಂಡಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಇನ್ನಿತರರು ಉಪಸ್ಥಿತರಿದ್ದರು.