ವಸತಿರಹಿತರಿಗೆ ನಿವೇಶನ ನೀಡುವ ಸಂಕಲ್ಪ: ಶ್ರೀನಿವಾಸ ಮಾನೆ

KannadaprabhaNewsNetwork |  
Published : Nov 06, 2025, 02:15 AM IST
ಫೋಟೊ: 5ಎಚ್‌ಎನ್‌ಎಲ್1 | Kannada Prabha

ಸಾರಾಂಶ

ಹಾನಗಲ್ಲದ ಮೌಲಾನಾ ಆಜಾದ್ ಶಾಲೆಯಲ್ಲಿ ಪುರಸಭೆಯ ಆಶ್ರಯದಲ್ಲಿ ಮುಖ್ಯಮಂತ್ರಿಗಳ ವಸತಿ ನಿವೇಶನ ಯೋಜನೆಯಡಿ ಪುರಸಭೆ ವ್ಯಾಪ್ತಿಯ 53 ವಸತಿರಹಿತ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಸಮಾರಂಭ ನಡೆಯಿತು.

ಹಾನಗಲ್ಲ: ಹಾನಗಲ್ಲ ನಗರ ಬೆಳೆಯುತ್ತಿದೆ. ಇಲ್ಲಿ ನಾಲ್ಕೈದು ನೂರು ಕುಟುಂಬಗಳು ನಿವೇಶನ ಇಲ್ಲದೇ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿವೆ. ಅಂಥ ಕುಟುಂಬಗಳಿಗೆ ತಮ್ಮ ಅವಧಿ ಮುಗಿಯುವ ಒಳಗೆ ನಿವೇಶನ ದೊರಕಿಸುವ ಸಂಕಲ್ಪ ಮಾಡಿದ್ದಾಗಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಇಲ್ಲಿನ ಮೌಲಾನಾ ಆಜಾದ್ ಶಾಲೆಯಲ್ಲಿ ಪುರಸಭೆಯ ಆಶ್ರಯದಲ್ಲಿ ನಡೆದ ಮುಖ್ಯಮಂತ್ರಿಗಳ ವಸತಿ ನಿವೇಶನ ಯೋಜನೆಯಡಿ ಪುರಸಭೆ ವ್ಯಾಪ್ತಿಯ 53 ವಸತಿರಹಿತ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಜಾಗ ಗುರುತಿಸಲಾಗಿದೆ. ವಸತಿರಹಿತರಿಗೆ ನಿವೇಶನ ದೊರಕಿಸುವಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಲಿರುವ ಹೊಸ ರೀತಿಯ ಪ್ರಯೋಗ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಸ್ಲಂ ಬೋರ್ಡ್‌ನಿಂದ ಒಂದು ಸಾವಿರ, ಆಶ್ರಯ ಯೋಜನೆಯಡಿ ಇನ್ನೊಂದು ಸಾವಿರ ಮನೆಗಳನ್ನು ಮಂಜೂರಿ ಮಾಡಿಸಲಾಗಿದೆ. ಅರ್ಜಿಗಳಿಲ್ಲದ ಕಾರಣ ಆಶ್ರಯ ಯೋಜನೆಯಡಿಯ 500 ಮನೆಗಳನ್ನು ವಾಪಸ್ ನೀಡಲಾಗಿದೆ. ಈ ಪೈಕಿ 360 ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಇನ್ನೂ 140 ಮನೆಗಳು ಬಾಕಿ ಇವೆ. ಅರ್ಹರು ಅರ್ಜಿ ಸಲ್ಲಿಸಿ ಮನೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದ ಅವರು, ಆಶ್ರಯ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ಸಹಾಯಧನದಲ್ಲಿ ತನ್ನ ಪಾಲಿನ ಅರ್ಧ ಹಣವನ್ನು ರಾಜ್ಯ ಸರ್ಕಾರ ನೀಡಿದ್ದು, ಉಳಿದರ್ಧ ಹಣವನ್ನು ಕೇಂದ್ರ ಸರ್ಕಾರ ಪಾವತಿಸಬೇಕಿದೆ ಎಂದರು.

24 ಗಂಟೆಗಳ ಕಾಲ ನೀರು ಪೂರೈಸಲು ಧರ್ಮಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ತರುವ ₹36 ಕೋಟಿ ವೆಚ್ಚದ ಕಾಮಗಾರಿ ಚಾಲನೆ ಪಡೆದಿದೆ. ₹15 ಕೋಟಿ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳು ಮಳೆಯ ಕಾರಣದಿಂದ ವಿಳಂಬವಾಗಿವೆ. ರಸ್ತೆ ಮತ್ತು ಚರಂಡಿ ಕಾಮಗಾರಿಗೆ ₹7.60 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ ಮಾತನಾಡಿ, ಕೆಲವು ತಾಂತ್ರಿಕ ಕಾರಣಗಳಿಂದ ಹಲವು ಅಭಿವೃದ್ಧಿ ಕಾಮಗಾರಿಗಳು ಚಾಲನೆ ಪಡೆದಿಲ್ಲ. ಶೀಘ್ರ ಚಾಲನೆ ಪಡೆಯಲಿವೆ ಎಂದರು.

ತಹಸೀಲ್ದಾರ್ ರೇಣುಕಾ ಎಸ್., ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷರಾದ ಖುರ್ಷಿದ್ ಹುಲ್ಲತ್ತಿ, ನಾಗಪ್ಪ ಸವದತ್ತಿ, ಅಹ್ಮದ್‌ಬಾಷಾ ಪೀರಜಾದೆ, ಪರಶುರಾಮ ಖಂಡೂನವರ, ಮಮತಾ ಆರೆಗೊಪ್ಪ, ಮಾಜಿ ಉಪಾಧ್ಯಕ್ಷ ಮಹೇಶ ಪವಾಡಿ, ಶಂಶಿಯಾ ಬಾಳೂರ, ಸದಸ್ಯರಾದ ವಿರೂಪಾಕ್ಷಪ್ಪ ಕಡಬಗೇರಿ, ಹಸೀನಾಬಾನು ನಾಯ್ಕ, ಸುರೇಶ ನಾಗಣ್ಣನವರ, ಗೌಸ್‌ಮೋದೀನ ತಂಡೂರ, ಮೇಕಾಜಿ ಕಲಾಲ, ಅಬ್ದುಲ್‌ಗನಿ ಪಾಳಾ, ಆಶ್ರಯ ಸಮಿತಿ ಸದಸ್ಯರಾದ ಮೇಘನಾ ಸುಲಾಖೆ, ಮಾಲತೇಶ ಕಾಳೇರ, ನಿಯಾಜ್ ಸರ್ವಿಕೇರಿ, ವಿನಾಯಕ ಬಂಕನಾಳ, ರವೀಂದ್ರ ದೇಶಪಾಂಡೆ, ರಾಜೂ ಗುಡಿ, ಉಮೇಶ ಮಾಳಗಿ, ಮರ್ದಾನಸಾಬ ಬಡಗಿ, ಟಾಕನಗೌಡ ಪಾಟೀಲ, ಸಂತೋಷ ಸುಣಗಾರ, ಆದರ್ಶ ಶೆಟ್ಟಿ, ಬಾಬಾಜಾನ ಕೊಂಡವಾಡೆ, ಮುಖ್ಯಾಧಿಕಾರಿ ಜಗದೀಶ ಇದ್ದರು. ಶಿವಾನಂದ ಕ್ಯಾಲಕೊಂಡ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ