ಹೆಬ್ಬಾಳ ಕ್ಷೇತ್ರದಲ್ಲಿನ ಸರ್ವಾಂಗೀಣಅಭಿವೃದ್ಧಿಗೆ ಬದ್ಧ: ಬೈರತಿ ಸುರೇಶ್‌

KannadaprabhaNewsNetwork |  
Published : Jul 21, 2024, 01:20 AM IST
Byrathi Suresh | Kannada Prabha

ಸಾರಾಂಶ

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಕ್ಷೇತ್ರದ ನಿವಾಸಿಗಳ ಶ್ರೇಯೋಭಿವೃದ್ಧಿಗೆ ಕೈಮೀರಿ ಶ್ರಮಿಸುವುದಾಗಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್‌.ಸುರೇಶ್‌ (ಬೈರತಿ ಸುರೇಶ್‌) ಅವರು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಕ್ಷೇತ್ರದ ನಿವಾಸಿಗಳ ಶ್ರೇಯೋಭಿವೃದ್ಧಿಗೆ ಕೈಮೀರಿ ಶ್ರಮಿಸುವುದಾಗಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್‌.ಸುರೇಶ್‌ (ಬೈರತಿ ಸುರೇಶ್‌) ಅವರು ಭರವಸೆ ನೀಡಿದರು.

ಶನಿವಾರ ಆರ್‌.ಟಿ.ನಗರದ ಎಚ್‌.ಎಂ.ಟಿ.ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಆರ್‌.ಟಿ.ನಗರದ ಮತ್ತು ಹೆಬ್ಬಾಳ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಆಯೋಜಿಸಿದ್ದ ಬೈರತಿ ಸುರೇಶ್‌ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ 2 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು.

ನಗರಾಭಿವೃದ್ಧಿ ಸಚಿವನಾಗಿರುವ ಕಾರಣ ಇಡೀ ರಾಜ್ಯದ ಸಮಸ್ಯೆ ಆಲಿಸಬೇಕಿದೆ. ಹಾಗಾಗಿ ಕ್ಷೇತ್ರದ ಜನರಿಗೆ ಮೊದಲಿನಂತೆ ಬೇಕೆಂದಾಗ ಸಿಗಲು ಸಾಧ್ಯವಾಗುತ್ತಿಲ್ಲ. ಈ ನಡುವೆಯೂ ಪ್ರತಿದಿನ ಬೆಳಗ್ಗೆ ಕ್ಷೇತ್ರದ ಜನರ ಕಷ್ಟಸುಖ ಆಲಿಸಿಯೇ ಮುಂದಿನ ಕಾರ್ಯಕ್ರಮಕ್ಕೆ ತೆರಳುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಆದಷ್ಟು ಬಿಡುವು ಮಾಡಿಕೊಂಡು ಕ್ಷೇತ್ರದ ಜನರೊಂದಿಗಿದ್ದು, ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.

ಪ್ರತಿಭಾವಂತ ವೈದ್ಯಕೀಯ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಾಧ್ಯವಾದಷ್ಟು ನೆರವು ನೀಡುತ್ತಿದ್ದೇನೆ. ಈ ಬಾರಿ ಶಾಲೆಗಳ ಎರಡು ಸಾವಿರ ವಿದ್ಯಾರ್ಥಿಗಳಿಗೆ ಸ್ವಂತ ಹಣದಲ್ಲಿ ಧನಸಹಾಯ ಮಾಡುತ್ತಿದ್ದೇನೆ. ಕ್ಷೇತ್ರದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕು. ಈ ನಿಟ್ಟಿನಲ್ಲಿ ಬೇಕಾದ ಎಲ್ಲ ನೆರವು ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು.

ಪಾಲಿಕೆ ಮಾಜಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಮಾತನಾಡಿ, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿ, ಈಗ ಸಚಿವರಾಗಿರುವ ಬೈರತಿ ಸುರೇಶ್‌ ಅವರು, ಮುಂದೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವಷ್ಟರ ಮಟ್ಟಿಗೆ ಎತ್ತರಕ್ಕೆ ಬೆಳೆಯಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಎಂ.ವಿ.ರಾಜೀವ್‌ಗೌಡ, ಬ್ಲಾಕ್‌ ಕಾಂಗ್ರೆಸ್‌ ಮುಖಂಡ ಬಾಲಾಜಿ ಉಪಸ್ಥಿತರಿದ್ದರು.

ರಕ್ತದಾನ ಶಿಬಿರ

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಜೆ.ಸಿ.ನಗರ, ಚಾಮುಂಡಿನಗರ, ಗಂಗಾನಗರ, ಗಂಗೇನಹಳ್ಳಿ, ಮನೋರಾಯನಪಾಳ್ಯ, ವಿ.ನಾಗೇನಹಳ್ಳಿ, ಹೆಬ್ಬಾಳ, ಸಂಜಯನಗರ, ರಾಧಾಕೃಷ್ಣ ವಾರ್ಡ್‌ಗಳ ಆಯ್ದ ವಿದ್ಯಾರ್ಥಿಗಳಿಗೆ ಧನಸಹಾಯದ ಚೆಕ್‌ಗಳನ್ನು ವಿತರಿಸಲಾಯಿತು.

ಇದೇ ವೇಳೆ ಬೈರತಿ ಸುರೇಶ್‌ ಅವರ ಹುಟ್ಟುಹಬ್ಬದ ಅಂಗವಾಗಿ ಯಲಹಂಕ ಲಯನ್ಸ್‌ಕ್ಲಬ್‌ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!