ಪಾಲೆ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ: ಪೊನ್ನಣ್ಣ ಅಭಯ

KannadaprabhaNewsNetwork |  
Published : Jan 03, 2024, 01:45 AM IST
ಚಿತ್ರ : 2ಎಂಡಿಕೆ2 :  ಶಾಸಕ ಎ.ಎಸ್. ಪೊನ್ನಣ್ಣ  ಮಾತನಾಡಿದರು.  | Kannada Prabha

ಸಾರಾಂಶ

ಮೂರ್ನಾಡಿನಲ್ಲಿ ನಡೆದ ಕೊಡವ ಪಾಲೆ ಜನಾಂಗದ ವಾರ್ಷಿಕ ಕ್ರೀಡಾಕೂಟಕ್ಕೆ ವಿರಾಜಪೇಟೆ ಶಾಸಕ ಎ.ಎಸ್‌.ಪೊನ್ನಣ್ಣ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಪಾಲೆ ಜನಾಂಗ ಹಿಂದೆ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಇದೀಗ ಪರಿಶಿಷ್ಟ ಜಾತಿ ಎಂದು ತಪ್ಪಾಗಿ ಪರಿಗಣನೆ ಆಗಿರುವುದು ಗಮನಕ್ಕೆ ಬಂದಿದೆ. ಅಡಚಣೆ ಸರಿಪಡಿಸಿ, ಅಧಿಕೃತವಾಗಿ ಪರಿಶಿಷ್ಟ ಪಂಗಡ ಎಂದು ಮರು ಆದೇಶ ಮಾಡಿಸುವ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿಅನಾದಿ ಕಾಲದಿಂದಲೂ ಕೊಡವ ಸಂಸ್ಕೃತಿ ಆಚರಿಸುತ್ತ, ಕೊಡಗಿನ ಮೂಲನಿವಾಸಿಗಳಾಗಿ ಬಾಳುತ್ತಿರುವ ಕೊಡವ ಪಾಲೆ ಜನಾಂಗದ ಸರ್ವತೋಮುಖ ಅಭಿವೃದ್ದಿಗೆ ಕಟಿಬದ್ಧನಾಗಿದ್ದು, ಹಿಂದೆ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಇದೀಗ ಪರಿಶಿಷ್ಟ ಜಾತಿ ಎಂದು ತಪ್ಪಾಗಿ ಪರಿಗಣನೆ ಆಗಿರುವುದು ಗಮನಕ್ಕೆ ಬಂದಿದೆ. ಆಗಿರುವ ತಾಂತ್ರಿಕ ಅಡಚಣೆ ಸರಿಪಡಿಸಿ, ಅಧಿಕೃತವಾಗಿ ಪರಿಶಿಷ್ಟ ಪಂಗಡ ಎಂದು ಮರು ಆದೇಶ ಮಾಡಿಸಲಾಗುವುದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಭರವಸೆ ನೀಡಿದ್ದಾರೆ.

ಮೂರ್ನಾಡಿನಲ್ಲಿ ನಡೆದ ಕೊಡವ ಪಾಲೆ ಜನಾಂಗದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಡವ ಪಾಲೆ ಅಥವಾ ಅರಮನೆಪಾಲೆ ಜನಾಂಗವು ಕೊಡವ ಸಂಸ್ಕೃತಿಯನ್ನು ಪಾಲಿಸುತಿದ್ದು, ಅವರದ್ದೇ ಶೈಲಿಯ ಶ್ರಮದಿಂದ ಶಾಂತಿಯುತವಾಗಿ ಬಾಳುತ್ತಿರುವ ಜನಾಂಗ. ಇತ್ತೀಚೆಗೆ ತೀವ್ರ ಜನಸಂಖ್ಯೆ ಕುಸಿತ ಆಗುತ್ತಿದ್ದು, ಈ ಜನಾಂಗದ ರಕ್ಷಣೆ ನಮ್ಮ ಸರ್ಕಾರದ ಹೊಣೆಯಾಗಿದೆ ಅದನ್ನು ತಾವು ಪಾಲಿಸುತ್ತೇನೆ ಎಂದರು.

ಈ ಹಿಂದೆ ಸರ್ಕಾರಿ ದಾಖಲೆಗಳಲ್ಲಿ ಪರಿಶಿಷ್ಟ ಪಂಗಡ ಎಂದಿದ್ದು, ಇತ್ತೀಚೆಗೆ ಪರಿಶಿಷ್ಟ ಜಾತಿ ಎಂದು ಬದಲಾಗಿದ್ದು ಆಗಿರುವ ತೊಂದರೆಯನ್ನು ಕಾನೂನು ವ್ಯಾಪ್ತಿಯಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದರು.

ಅಖಿಲಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ, ಕೊಡವ ಪಾಲೆ ಜನಾಂಗವು ಅನಾದಿಕಾಲದೊಂದಿಗೆ ಕೊಡವ ಸಂಸ್ಕೃತಿ ಪಾಲಿಸುತ್ತಾ, ನಿಷ್ಟೆ ಮತ್ತು ಪ್ರಾಮಾಣಿಕ ಜನಾಂಗವಾಗಿ ಬಾಳುತ್ತಿದ್ದು, ಅವರ ಮೂಲ ಕಸುಬನ್ನು ತಪ್ಪದೇ ಪಾಲಿಸುತ್ತಿದ್ದಾರೆ. ಕೊಡಗಿನ ಎಲ್ಲಾ ಮೂಲ ನಿವಾಸಿ ಜನಾಂಗಗಳು ಅವರವರ ಕುಲ ಮತ್ತು ಸಂಪ್ರದಾಯಕ್ಕೆ ಬದ್ಧರಾಗಿ ಒಗ್ಗಟ್ಟಿನಿಂದ ಬಾಳುವಂತೆ ಆಗಬೇಕು ಎಂದರು.

ಕೊಡವ ಭಾಷಿಕ ಮೂಲನಿವಾಸಿ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಶ್ ನಾಣಯ್ಯ ಮಾತನಾಡಿ, ಸರ್ವ ಕೊಡವ ಭಾಷಿಕ ಜನಾಂಗಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಸಂಸ್ಕೃತಿ ಬೆಳೆಸುವತ್ತ ಒಟ್ಟಾಗಿ ಸಾಗಬೇಕಾಗಿದೆ, ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯಬೇಕು ಎಂದರು.

ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಮಾತನಾಡಿ, ಕೊಡವ ಪಾಲೆ ಜನಾಂಗ ತಮ್ಮ ಮೂಲತನದ ಅಸ್ತಿತ್ವದ ಅನ್ವೇಷಣೆಗೆ ಮುಂದಾಗಿ ಜನಾಂಗೀಯ ದಾಖಲೆ ರಚಿಸಬೇಕು, ತಮ್ಮ ಮೂಲತನವನ್ನ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಲಿ, ಇಂತ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳುವಿಕೆಯಿಂದ ಸಹಬಾಳ್ವೆಗೆ ನಾಂದಿಯಾಗಲಿ ಎಂದರು.

ಜನಾಂಗದ ಹಿರಿಯ, ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜದ ಅಧ್ಯಕ್ಷ ಜಿ.ಚೆನಿಯ ನಾಪೋಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಞಿರ ಸಾಬುತಿಮ್ಮಯ್ಯ, ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಡಿಞಾರಂಡ ಪ್ರಭುಕುಮಾರ್, ಕೊಡಗು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ, ಅಹಿಂದ ಅಧ್ಯಕ್ಷ ತೋರೆರ ಮುದ್ದಯ್ಯ, ಕೊಡವ ಭಾಷಿಕ ಸಮುದಾಯ ಕೂಟದ ಕಾರ್ಯದರ್ಶಿ ಮೊಳ್ಳೆಕುಟ್ಟಡ ದಿನುಬೋಜಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಸೇರಿದಂತೆ ಕೊಡವ ಪಾಲೆ ಜನಾಂಗದ ಪ್ರಮುಖರು ಪಾಲ್ಗೊಂಡಿದ್ದರು.

ಎಲ್ಲ ಅತಿಥಿಗಳನ್ನು ಸಮಾಜದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸಮಾಜದ ಸದಸ್ಯರಿಗಾಗಿ ನಡೆದ ಕ್ರೀಡಾಕೂಟದ ಪುರುಷರ ಕ್ರಿಕೆಟ್‌‌ ಮತ್ತು ಮಹಿಳೆಯರ ತ್ರೋಬಾಲ್‌‌ನಲ್ಲಿ ಅಂಜಿಕೂಟ್ ವಾರಿಯರ್ಸ್ ಕಂಡಿಮಕ್ಕಿ ತಂಡ ಪ್ರಥಮ ಕ್ರಿಕೇಟ್ ದ್ವಿತೀಯ ಸ್ಥಾನ ಜಿಲ್ಲಾ ಸಮಿತಿ ಪಡೆದರೆ, ಥ್ರೋಬಾಲ್ ದ್ವಿತೀಯ ಸ್ಥಾನವನ್ನು ನಾಪೋಕ್ಲು ಪೇರೂರು ತಂಡ ಪಡೆಯಿತು. ಕ್ರೀಡಾಕೂಟದಲ್ಲಿ ಮಕ್ಕಳು ಮತ್ತು ವಯಸ್ಕರಿಗೆ ಹಲವಾರು ಆಟೊಟ ಆಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?