ಕರಾವಳಿ ಅಭಿವೃದ್ಧಿಗೆ ಬದ್ಧ: ಪ್ರಧಾನಿ ನರೇಂದ್ರ ಮೋದಿ ಭರವಸೆ

KannadaprabhaNewsNetwork |  
Published : Apr 16, 2024, 01:02 AM ISTUpdated : Apr 16, 2024, 09:17 AM IST
PM Modi Mysuru Visit

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮಶೀಲ ಮನೋಭಾವಕ್ಕೆ ಹೆಸರುವಾಸಿಯಾಗಿರುವ ಅನೇಕ ಜನರಿಗೆ ನಮ್ಮ ಆರ್ಥಿಕ ಸುಧಾರಣೆಗಳು ಪ್ರಯೋಜನಕಾರಿಯಾಗಿವೆ ಎಂದು ಪ್ರಧಾನಿ ತಿಳಿಸಿದ್ದಾರೆ.

 ಮಂಗಳೂರು : ಮಂಗಳೂರಿನಲ್ಲಿ ಭಾನುವಾರ ನಡೆದ ರೋಡ್‌ ಶೋನಲ್ಲಿ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಕರಾವಳಿ ಭಾಗದ ಜನರು ಹಾಗೂ ಪಕ್ಷದ ನಡುವೆ ಬಲಿಷ್ಠ ಬಾಂಧವ್ಯವಿದೆ. ಉತ್ತಮ ಆಡಳಿತದ ಸಿದ್ಧಾಂತ ಮತ್ತು ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಆಚರಿಸುವ ನಮ್ಮ ಪ್ರಯತ್ನಗಳಿಗೆ ಜನತೆ ನಮ್ಮನ್ನು ಹಲವು ವರ್ಷಗಳಿಂದ ಆಶೀರ್ವದಿಸಿದ್ದಾರೆ ಎಂದು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮಶೀಲ ಮನೋಭಾವಕ್ಕೆ ಹೆಸರುವಾಸಿಯಾಗಿರುವ ಅನೇಕ ಜನರಿಗೆ ನಮ್ಮ ಆರ್ಥಿಕ ಸುಧಾರಣೆಗಳು ಪ್ರಯೋಜನಕಾರಿಯಾಗಿವೆ. ಕಳೆದೊಂದು ದಶಕದಲ್ಲಿ ಬಂದರು ಅಭಿವೃದ್ಧಿ, ಮೀನುಗಾರಿಕೆ ಮತ್ತು ಮಹಿಳಾ ಮೀನುಗಾರರ ಸಬಲೀಕರಣ, ಇಂಧನ, ಆರೋಗ್ಯ ಮತ್ತು ಇತರ ವಲಯಗಳನ್ನು ಕೇಂದ್ರೀಕರಿಸಿ ಕೆಲಸ ಮಾಡಲಾಗಿದೆ. ಬಿಜೆಪಿಯ ಪ್ರಣಾಳಿಕೆ ʻಸಂಕಲ್ಪ ಪತ್ರʼದಲ್ಲಿ ಹೇಳಿರುವಂತೆ ಮಂಗಳೂರು ಅಭಿವೃದ್ಧಿಗಾಗಿ ನಗರಾಭಿವೃದ್ಧಿ ಮೂಲಕ ‘ಸುಗಮ ಜೀವನ’ ಕಲ್ಪಿಸಲಾಗುವುದು. ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿ ನಿರೂಪಿಸಲಾದ ದೃಷ್ಟಿಕೋನ ಕರಾವಳಿ ಆರ್ಥಿಕತೆಯನ್ನು ಪರಿವರ್ತಿಸುತ್ತದೆ ಎಂಬುದು ನನ್ನ ನಂಬಿಕೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಾನು ಉದ್ಘಾಟಿಸಿದ ಮತ್ತು ಶಿಲಾನ್ಯಾಸ ನೆರವೇರಿಸಿದ ಕೆಲಸಗಳಿಂದ ಇಲ್ಲಿನ ಜನರ ಜೀವನಮಟ್ಟ ಸುಧಾರಣೆಗೆ ಪುಷ್ಟಿ ದೊರೆಯಲಿದೆ. ಕೊಚ್ಚಿ- ಮಂಗಳೂರು ಪೈಪ್‌ ಲೈನ್‌ ಯೋಜನೆಯು ಸಹ ಇದರಲ್ಲಿ ಸೇರಿದೆ. ಮುಂಬರುವ ದಿನಗಳಲ್ಲಿ ಇಲ್ಲಿನ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಂದರು ವಲಯಕ್ಕೆ ಸಂಬಂಧಿಸಿದಂತೆ ಮೂಲ ಸೌಕರ್ಯವನ್ನು ಆಧುನೀಕರಣಗೊಳಿಸಲಾಗುವುದು ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

ನಮ್ಮ ಅಧಿಕಾರದ ಮೂರನೇ ಅವಧಿಯಲ್ಲಿ ಭವಿಷ್ಯದ ಶಿಕ್ಷಣಕ್ಕೆ ಸಂಬಂಧಿಸಿದ ಅಂಶಗಳನ್ನು ಸುಧಾರಿಸುವಲ್ಲಿ ಮತ್ತು ಈ ಪ್ರದೇಶದಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಆರೋಗ್ಯ ವಲಯದ ರಕ್ಷಣೆಗೆ ಹೆಚ್ಚಿನ ಕೆಲಸ ಮಾಡಬೇಕಾಗಿದೆ. ನಾವು ನೀಲಿ ಕ್ರಾಂತಿಯಲ್ಲಿ ಕೆಲಸ ಮಾಡಲು ಬಯಸುತ್ತಿದ್ದು, ಇದರಿಂದ ಮೀನುಗಾರರಿಗೆ ಉತ್ತೇಜನ ಸಿಗಲಿದೆ. ಇದೇ ರೀತಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದರಿಂದ ಕರ್ನಾಟಕದ ಈ ಭಾಗವನ್ನು ಹೆಚ್ಚಿನ ಜನ ನೋಡಲು ಸಹಕಾರಿಯಾಗಲಿದೆ ಎಂದಿದ್ದಾರೆ.

ಮತಬ್ಯಾಂಕ್‌ ರಾಜಕಾರಣದಲ್ಲಿ ಮುಳುಗಿ ಜನರನ್ನು ವಿಭಜಿಸುವ ಕಾಂಗ್ರೆಸ್‌ಗೆ ಮತ ಹಾಕಲು ದಕ್ಷಿಣ ಕನ್ನಡಕ್ಕೆ ಸಾಧ್ಯವಿಲ್ಲ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಗುಂಪುಗಾರಿಕೆಯಲ್ಲಿ ನಿರತವಾಗಿದ್ದು, ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ. ಅವರಿಗೆ ಕರ್ನಾಟಕದ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಇಲ್ಲ ಎಂದು ಮೋದಿ ಟೀಕಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ