ಕೂಡ್ಲಿಗಿ: ಸಮಾನತೆ, ಸಹೋದರತ್ವ, ಜಾತ್ಯತೀತ ಸೇರಿ ನಾನಾ ತತ್ವಗಳನ್ನು ಒಳಗೊಂಡ ಸಂವಿಧಾನದ ಆಶಯದಂತೆ ಕ್ಷೇತ್ರದ ಸರ್ವರ ಹಿತದೃಷ್ಟಿಯಿಂದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ತಿಳಿಸಿದರು.
ಅವರು ಪಟ್ಟಣದ ಮಹದೇವ ಮೈಲಾರ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.ದೇಶದಲ್ಲಿ ಸಂವಿಧಾನ ಜಾರಿಯಾದ ದಿನವನ್ನು ಸಂಭ್ರಮಿಸುತ್ತಿದ್ದೇವೆ. ಇಂಥ ಶ್ರೇಷ್ಠ ಸಂವಿಧಾನ ರಚಿಸಿದ ಅಂಬೇಡ್ಕರ್ ಆದರ್ಶಗಳನ್ನು ಅಳವಡಿಸಿಕೊಂಡು ಕ್ಷೇತ್ರದಲ್ಲಿ ಬಡವರು, ದಲಿತರು, ಹಿಂದುಳಿದವರು ಸೇರಿ ಎಲ್ಲ ವರ್ಗದವರ ಹಿತ ಕಾಪಾಡುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿದ್ದು, ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಸೇರಿ ತಾಲೂಕು ಆಸ್ಪತ್ರೆಗಳು ಮೇಲ್ದರ್ಜೆಗೇರಿಸಲಾಗಿದೆ ಎಂದರು.
200ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣ, ಕಾತ್ರಿಕೆಹಟ್ಟಿ, ಜುಮ್ಮೋಬನಹಳ್ಳಿ ಮ್ಯಾಸರಹಟ್ಟಿ, ಅರ್ಜುನ ಚಿನ್ನೇನಹಳ್ಳಿಯಲ್ಲಿ ನೂತನ ಪ್ರೌಢಶಾಲೆಗಳ ಆರಂಭಕ್ಕೆ ಅನುಮೋದನೆಗೊಂಡಿವೆ. ನಾನಾ ರಸ್ತೆಗಳು, ಸೇತುವೆಗಳು ಸೇರಿ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಲಾಗಿದೆ. ಅದರಂತೆ, ಸ್ವಚ್ಛತೆ ಸೇರಿ ನಾನಾ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಅನುದಾನ ತಂದು ಕಾಮಗಾರಿ ಆರಂಭಿಸಲಾಗಿದೆ. ಈ ಹಿಂದೆ ನಮ್ಮ ತಂದೆ ಎನ್.ಟಿ.ಬೊಮ್ಮಣ್ಣ ಅವರು ಶಾಸಕರಾಗಿದ್ದ ಸಂದರ್ಭ ರಸ್ತೆಗಳೇ ಇಲ್ಲದ ಹಳ್ಳಿಗಳಿಗೆ ಮಣ್ಣಿನ ರಸ್ತೆಗಳನ್ನು ನಿರ್ಮಿಸಿದ್ದರು. ಇದೀಗ ನಾನು ಶಾಸಕನಾದ ನಂತರ ಸಿಸಿ, ಡಾಂಬರ್ ರಸ್ತೆಗಳಾಗಿ ಅಭಿವೃದ್ಧಿಗೊಳ್ಳುತ್ತಿವೆ ಎಂದು ತಿಳಿಸಿದರು.ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಎಂ.ರೇಣುಕಾ ಮಾತನಾಡಿದರು. ತಾಪಂ ಇಒ ನರಸಪ್ಪ, ಗ್ರೇಡ್ 2 ತಹಸೀಲ್ದಾರ್ ನೇತ್ರಾವತಿ, ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಉಪಾಧ್ಯಕ್ಷೆ ಲೀಲಾವತಿ ಪ್ರಭಾಕರ್, ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ಮುಖ್ಯಾಧಿಕಾರಿ ಮುಗುಳಿ, ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ಸುರೇಶ್ ತಳವಾರ, ಪಪಂ ಸದಸ್ಯರಾದ ರೇಣುಕಾ ದುರುಗೇಶ್, ಡಾಣಿ ಚೌಡಮ್ಮ, ಕೆ.ಈಶಪ್ಪ, ಭಾಸುನಾಯ್ಕ, ಪೂರ್ಯಾನಾಯ್ಕ, ಕೆ.ಎಚ್.ಎಂ.ಸಚಿನ್ ಕುಮಾರ್, ಸರಸ್ವತಿ ರಮೇಶ್, ಲಕ್ಷ್ಮಿ ಬಸವರಾಜ, ಮುಖಂಡರಾದ ಮಾದಿಹಳ್ಳಿ ನಜೀರ್, ಡಾಣಿ ರಾಘವೇಂದ್ರ, ಹಿರೇಕುಂಬಳಗುಂಟೆ ಟಿ.ಉಮೇಶ್, ತಿಮ್ಮಣ್ಣ ಯಾದವ, ಕಾಟೇರ್ ಹಾಲೇಶ್, ಜಯಮ್ಮರ ರಾಘವೇಂದ್ರ, ಬೊಪ್ಪಲಾಪುರ ಬಸವರಾಜ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ನಾನಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವುದರ ಜತೆಗೆ ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ಶಾಸಕರು ವಿತರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮಹಾತ್ಮಗಾಂಧಿ ಚಿತಾಭಸ್ಮವಿರುವ ಹುತಾತ್ಮರ ರಾಷ್ಟ್ರೀಯ ಸ್ಮಾರಕಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೇರಿ ಅಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.ಕೂಡ್ಲಿಗಿ ಪಟ್ಟಣ ಮಹದೇವ ಮೈಲಾರ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಡಾ.ಶ್ರೀನಿವಾಸ್ ಮಾತನಾಡಿದರು.