ಹಾವೇರಿ: ಕೋಣನತಂಬಿಗಿ ಗ್ರಾಮದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಗ್ರಾಮಸ್ಥರ ಬೇಡಿಕೆಗಳನ್ನು ಪೂರೈಸಲು ಬದ್ಧನಾಗಿರುವೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.ತಾಲೂಕಿನ ಕೋಣನತಂಬಿಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೂತನವಾಗಿ ನಿರ್ಮಾಣಗೊಂಡ ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಮದ ಕಲ್ಮೇಶ್ವರ ದೇವಸ್ಥಾನಕ್ಕೆ ಸಮುದಾಯ ಭವನ, ಪ್ರೌಢಶಾಲೆಗೆ ಮೂಲ ಸೌಕರ್ಯ, ಶಾಲಾ ಕಟ್ಟಡ ಸೋರುವಿಕೆ ತಡೆಗಟ್ಟುವುದು ಸೇರಿದಂತೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ನಿರ್ಮಾಣ, ಪ್ರವಾಹ ಸಂತ್ರಸ್ತರಿಗೆ ಮನೆಗಳನ್ನು ಒದಗಿಸಲು ಗ್ರಾಮಸ್ಥರು ಸಲ್ಲಿಸಿರುವ ಬೇಡಿಕೆಗಳನ್ನು ಈಡೇರಿಸಿ ತಮ್ಮ ವಿಶ್ವಾಸ ಉಳಿಸಿಕೊಳ್ಳುವೆ ಎಂದರು.ಅಷ್ಟೇ ಅಲ್ಲದೆ ಕೋಣನತಂಬಿಗಿಯಿಂದ ಹಿರೇಮರಳಿಹಳ್ಳಿ ಗ್ರಾಮದವರೆಗೂ ರಸ್ತೆ ನಿರ್ಮಾಣ, ಇನ್ನೂ ಮೂರ್ನಾಲ್ಕು ಬ್ಯಾರೇಜ್ ದುರಸ್ತಿ ಕಾರ್ಯವನ್ನು ಶೀಘ್ರದಲ್ಲೇ ನೆರವೇರಿಸುವೆ. ತಮ್ಮ ಸಹಕಾರ ನಿರಂತರವಾಗಿರಲಿ ಎಂದು ಮನವಿ ಮಾಡಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬಸನಗೌಡ ಹಿರೇಗೌಡ್ರ ಹಾಗೂ ಮಂಜಯ್ಯ ಹಾಲಪ್ಪನವರಮಠ ಮಾತನಾಡಿದರು.ಮುಖಂಡರಾದ ಎಂ.ಎಂ. ಹಿರೇಮಠ, ಎಂ.ಎಂ. ಮೈದೂರ, ತಾಲೂಕು ಪಂಚಾಯಿತಿ ಇಒ ಡಾ. ಪರಮೇಶ ಹುಬ್ಬಳ್ಳಿ, ಯುವ ಮುಖಂಡ ದರ್ಶನ ಲಮಾಣಿ, ಗ್ರಾಪಂ ಉಪಾಧ್ಯಕ್ಷೆ ಸುನಿತಾ ದೇವಸೂರ, ಸದಸ್ಯರಾದ ಮಲ್ಲಪ್ಪ ಬಣಕಾರ, ಹನುಮಂತಪ್ಪ ಕುರುಬರ, ಹೊಳಲಪ್ಪ ಪೂಜಾರ, ಚಂದ್ರಪ್ಪ ತಳವಾರ, ರೇಣವ್ವ ಯಲಗಚ್ಚ, ಚನ್ನವ್ವ ಹಳ್ಳೆಪ್ಪನವರ, ಸೋಮಕ್ಕ ಹುಳಕೆಲ್ಲಪ್ಪನವರ, ನೀಲವ್ವ ತಳವಾರ, ಲಕ್ಷ್ಮಿ ಕರಡಿ, ಪವಿತ್ರಾ ಹರಿಜನ, ಕೆಸರಳ್ಳಿ, ಮಣ್ಣೂರು ಹಾಗೂ ಶಿರಮಾಪುರ ಗ್ರಾಮಸ್ಥರು ಇದ್ದರು. ಗ್ರಾಪಂ ಅಧ್ಯಕ್ಷ ಫಕ್ಕೀರಪ್ಪ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಕೋಟೆಪ್ಪ ಚೂರಿ ಸ್ವಾಗತಿಸಿದರು. ಮಾಲತೇಶ ನಿರೂಪಿಸಿದರು. ಪ್ರಕಾಶ ಉದಗಟ್ಟಿ ವಂದಿಸಿದರು.