ಹುಬ್ಬಳ್ಳಿ: ನೆಲೆ ಇಲ್ಲದೆ ಅತಂತ್ರರಾಗಬಾರದು. ತಮ್ಮ ಮನೆಯ ಅಧಿಕೃತ ಹಕ್ಕು ಸಿಗಬೇಕು ಎನ್ನುವುದೇ ನನ್ನ ಗುರಿಯಾಗಿದ್ದು, ಸ್ಲಂ ಪ್ರದೇಶದ ಎಲ್ಲ ನಿವಾಸಿಗಳಿಗೆ ಹಕ್ಕುಪತ್ರ ಕೊಡಲಾಗುವುದು ಎಂದು ಸ್ಲಂ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದರು.
ಸ್ಲಂ ಬೋರ್ಡ್ ಅಧ್ಯಕ್ಷನಾದ ಬಳಿಕ ರಾಜ್ಯದ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯ ನಿರಂತರ ನಡೆದಿದೆ. ಬಡವರ ಸೂರು ಮತ್ತು ಭದ್ರತೆಯ ದೃಷ್ಟಿಯಿಂದ ಈ ಕಾರ್ಯಕ್ಕೆ ಆದ್ಯತೆ ನೀಡಿದ್ದೇನೆ ಎಂದರು.
ಕ್ಷೇತ್ರದ ಸರ್ಕಾರಿ ಶಾಲೆಗಳ ನವೀಕರಣ, ಸ್ಮಾರ್ಟ್ ಕ್ಲಾಸ್ ಸೌಲಭ್ಯ ಮತ್ತು ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸ್ಲಂ ಪ್ರದೇಶಗಳಲ್ಲಿ ಕಾಂಕ್ರೀಟ್ ರಸ್ತೆ, ಯುಜಿಡಿ ಲೈನ್ ಕೋಟ್ಯಂತರ ರುಪಾಯಿ ಅನುದಾನ ನೀಡಲಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತೇನೆ ಎಂದರು.ಈ ವೇಳೆ ಪಾಲಿಕೆ ಸದಸ್ಯರಾದ ರಾಧಾಬಾಯಿ ಸಪಾರಿ, ಮನ್ಸೂರಾ ಮುದಗಲ್ಲ, ಮುಖಂಡರಾದ ರಾಜಕುಮಾರ ಕಾಮರೆಡ್ಡಿ, ಭಾಗಣ್ಣ ಬಿರಾಜದಾರ, ಮುಸ್ತಾಕ ಮುದಗಲ್ಲ, ಬಸೀರ ಗುಡಮಾಲ್, ಅಂಬರೀಶ ಛಲವಾದಿ, ಆರೀಫ್ ದೊಡ್ಡಮನಿ ಸೇರಿ ಹಲವರಿದ್ದರು.