ಗೋಕರ್ಣ: ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ರೂಪುರೇಷೆ ತಯಾರಿಸಿ ಯೋಜನೆ ಜಾರಿಗೆ ತರಲು ಬದ್ಧನಾಗಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಗೋಕರ್ಣ ಗ್ರಾಪಂನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೇಗೇರಿಸಲು ಶಾಸಕ ದಿನಕರ ಶೆಟ್ಟಿ ಸದನದಲ್ಲಿ ಆಗ್ರಹಿಸಿದ್ದಾರೆ. ಅದಕ್ಕೆ ನನ್ನ ಸಹಮತವಿದ್ದು, ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮುಂದಿನ ವರ್ಷದಿಂದ ಆತ್ಮಲಿಂಗವಿರುವ ಮೂಲಸ್ಥಳ ಗೋಕರ್ಣ ಹಾಗೂ ಇದರ ಭಾಗಗಳಾದ ಉಳಿದ ನಾಲ್ಕು ಕ್ಷೇತ್ರದಲ್ಲಿ ಗೋಕರ್ಣ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಘೋಷಿಸಿದರು.ಸರ್ಕಾರದಲ್ಲಿ ಅಭಿವೃದ್ಧಿಯ ಅನುದಾನದ ಕೊರತೆ ಇಲ್ಲ, ಮಂದಿರಗಳು, ಮಠ ಹಾಗೂ ಶಾಲೆ ಇದ್ದ ಕಡೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದೇ ನನ್ನ ಆದ್ಯತೆ ಎಂದರು.
ಶಿವರಾತ್ರಿಯಂದು ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇವರ ನಾಮಸ್ತುತಿಗಳು ಸ್ಮರಣೆ ಹೆಚ್ಚು ನಡೆಯಲಿ ಎಂದು ಆಶಿಸಿದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ೧೫ ದಿನಗಳಲ್ಲಿ ಕಾರ್ಯಕ್ರಮ ಸಂಘಟಿಸಿ ಆರಂಭಿಸುವುದು ಕಠಿಣವಾಗಿತ್ತು. ಇದಕ್ಕೆ ಉಸ್ತುವಾರಿ ಸಚಿವರು ಹಾಗೂ ಅವರ ಜತೆಗಿರುವ ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ಉತ್ತಮ ಸಹಕಾರ ನೀಡಿದೆ. ಇದರ ಜತೆ ಅಧಿಕಾರಿಗಳು, ಇಲ್ಲಿನ ಉದ್ಯಮಿಗಳ ಸಹಯೋಗದಿಂದ ಇದೇ ಮೊದಲ ಬಾರಿ ಶಿವರಾತ್ರಿಯಂದು ಸರ್ಕಾರದ ವತಿಯಿಂದ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತು ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಕಾಂದೂ, ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ, ಗೋಕರ್ಣ ಉತ್ಸವ ಸಮಿತಿ ಪ್ರಮುಖರಾದ ರಾಜಗೋಪಾಲ ಅಡಿಗುರೂಜಿ, ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಭಾವಿ, ಮಹಾಬಲೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಸತೀಶ ನಾಯ್ಕ ಉಪಸ್ಥಿತರಿದ್ದರು.ಕುಮಟಾ ತಹಸೀಲ್ದಾರ್ ಸತೀಶ ಗೌಡ ಸ್ವಾಗತಿಸಿದರು. ತಹಸೀಲ್ದಾರ್ ಅಶೋಕ ಭಟ್ ವಂದಿಸಿದರು. ಗೋಕರ್ಣ ಉತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.
ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ:ವಿದುಷಿ ಸುಂಗಲಾ ರಾವ್ ತಂಡದಿಂದ ನೃತ್ಯರ್ಪಣಾ ಕಾರ್ಯಕ್ರಮ ನಡೆಯಿತು. ರಾತ್ರಿ ಬೀಟ್ ಗುರೂಸ್ ತಂಡದಿಂದ ಸಾಂಪ್ರದಾಯಿಕ ಹಾಗೂ ಪಾಶ್ಚಿಮಾತ್ಯ ಶೈಲಿಯ ವಾದ್ಯಸಮ್ಮೇಳನದಲ್ಲಿ ಅನೇಕ ಹಾಡುಗಳು ಕೊಳಲಿನ ಮೂಲಕ ನುಡಿಸಿದ್ದು ಜನರನ್ನು ಮನರಂಜಿಸಿತು. ನಂತರ ನಡೆದ ಖ್ಯಾತ ಗಾಯಕ ಆಲ್ ಓಕೆ ತಂಡದ ಲೈವ್ ಬ್ಯಾಂಡ್ ಬಹುವಿಶಿಷ್ಟವಾಗಿ ಮೂಡಿಬಂತು.