ಯೋಧ ಕುಟುಂಬಗಳ ಹಿತ ಕಾಯಲು ಬದ್ಧ : ಸಿಎಂ

KannadaprabhaNewsNetwork |  
Published : Jul 27, 2026, 02:15 AM IST
DK Shivakumar

ಸಾರಾಂಶ

ಯೋಧರಿಂದಾಗಿ ನಾವು ನಮ್ಮ ಮನೆಗಳಲ್ಲಿ ನೆಮ್ಮದಿಯಾಗಿ ಮಲಗುತ್ತಿದ್ದು, ರಾಜ್ಯದಲ್ಲಿ ನೆಲೆಸಿರುವ ಲಕ್ಷಾಂತರ ಯೋಧರ ಕುಟುಂಬಗಳ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

 ಬೆಂಗಳೂರು :  ಯೋಧರಿಂದಾಗಿ ನಾವು ನಮ್ಮ ಮನೆಗಳಲ್ಲಿ ನೆಮ್ಮದಿಯಾಗಿ ಮಲಗುತ್ತಿದ್ದು, ರಾಜ್ಯದಲ್ಲಿ ನೆಲೆಸಿರುವ ಲಕ್ಷಾಂತರ ಯೋಧರ ಕುಟುಂಬಗಳ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಕಾರ್ಗಿಲ್ ವಿಜಯ್ ದಿವಸ

ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಭಾನುವಾರ ನಡೆದ ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಯೋಧರ ಕುಟುಂಬಗಳ ನೀಡುವ ಸಲಹೆ ಸ್ವೀಕರಿಸಲು ಸರ್ಕಾರ ಸಿದ್ಧವಿದೆ ಎಂದರು.

ನಮ್ಮ ಯೋಧರ ತ್ಯಾಗವೇ ನಮ್ಮ ಧೈರ್ಯ, ಸ್ವಾತಂತ್ರ್ಯ ಹೆಮ್ಮೆ. 27 ವರ್ಷಗಳ ಹಿಂದೆ ನಮ್ಮ ವೀರಯೋಧರು ಹಿಮಾಲಯದ ತಪ್ಪಲಿನಲ್ಲಿ ಶತ್ರುಗಳನ್ನು ಸದೆ ಬಡಿದು ದೇಶದ ತ್ರಿವರ್ಣ ಧ್ವಜ ಹಾರಿಸಿದರು. ನಮ್ಮ ಹೀರೋಗಳು ಹುತಾತ್ಮರಾಗಿರಬಹುದು. ಆದರೆ, ಅವರ ಪರಂಪರೆ ಶಾಶ್ವತ, ದೇಶಕ್ಕಾಗಿ ಹುತಾತ್ಮರಾದ ನಮ್ಮ ವೀರ ಯೋಧರಿಗೆ ಹೃತ್ಪೂರ್ವಕ ನಮನ ಎಂದರು.

ನಮ್ಮ ತಾಯ್ನಾಡು ರಕ್ಷಿಸಲು 527 ಯೋಧರು ಹುತಾತ್ಮರಾಗಿದ್ದಾರೆ. ಆದರಲ್ಲಿ ಕರ್ನಾಟಕದ 13 ಯೋಧರು ಸೇರಿದ್ದಾರೆ. ನಾನು ಕಾಂಗ್ರೆಸ್ ಪಕ್ಷದಿಂದ ಬಂದಿದ್ದು, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ನಮ್ಮ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದೆ. ನಮ್ಮ ಯೋಧರು, ಎಲ್ಲ ಪರಿಸ್ಥಿತಿಯಲ್ಲೂ ದೇಶದ ರಕ್ಷಣೆಗೆ ಬದ್ಧರಾಗಿದ್ದಾರೆ. ಭಾರತ -ಪಾಕಿಸ್ತಾನದ ಯುದ್ಧವಾಗಿರಲಿ, ಭಾರತ-ಚೀನಾ ಯುದ್ಧವಾಗಿರಲಿ, ಗಡಿ ಅತಿಕ್ರಮಣ ಪರಿಸ್ಥಿತಿಯೇ ಆಗಿರಲಿ, ನಮ್ಮ ಯೋಧರು ಕೆಚ್ಚೆದೆಯಿಂದ ದೇಶದ ಗಡಿ ರಕ್ಷಣೆಗೆ ಪ್ರತಿ ಕ್ಷಣ ದಿನವೂ ಸಿದ್ಧರಾಗಿರುತ್ತಾರೆ ಎಂದರು.

ಭಾರತದ ರಕ್ಷಣಾ ಪಡೆಗೆ ಕರ್ನಾಟಕ ಬೆನ್ನುಲುಬಾಗಿದೆ. ಬೆಮೆಲ್, ಡಿಆರ್ ಡಿಒ, ಇಸ್ರೋ ಸೇರಿ ಅನೇಕ ಸಂಸ್ಥೆಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾವು ಭಾರತದ ಮೊದಲ ಸೇನಾ ಮುಖ್ಯಸ್ಥರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ ಎಂದರು.

ಯೋಧರು, ಯುವಕರು, ಮಹಿಳೆಯರು, ರೈತರು ಹಾಗೂ ತೆರಿಗೆದಾರರು ನಮ್ಮ ಕೈಯಲ್ಲಿರುವ ಐದು ಬೆರಳುಗಳಿದ್ದಂತೆ ಈ ಬೆರಳುಗಳು ಸೇರಿದರೆ ದೇಶ ಮುಷ್ಟಿಯಾಗುತ್ತದೆ. ಕಾರ್ಗಿಲ್ ವಿಜಯ್ ದಿವಸ ಬಹಳ ವಿಶೇಷವಾದ ದಿನ, ದೇಶದ ಸ್ವಾತಂತ್ರ್ಯ ಕಾಪಾಡಲು ಏನು ಬೇಕಾದರೂ ಮಾಡಬಲ್ಲೆವು ಎಂಬುದನ್ನು ದೇಶದ ಯುವಕರು ಸಾಬೀತುಪಡಿಸಿದ್ದಾರೆ. ದೇಶದ ಹೊರಗಿನ ಹಾಗೂ ಒಳಗಿನ ದುಷ್ಟಶಕ್ತಿಗಳಿಂದ ಭಾರತ ಮಾತೆಗೆ ತೊಂದರೆಯಾಗಲು ಬಿಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಡಿಜಿಪಿ ಎಂ.ಎ.ಸಲೀಂ, ಗೃಹ ಇಲಾಖೆಯ ಕಾರ್ಯದರ್ಶಿ ಹಾಗೂ ಎಡಿಜಿಪಿ ಶರತ್ ಚಂದ್ರ, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಹಿರಿಯ ಸೇನಾಧಿಕಾರಿಗಳು ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.ಎನ್ ಸಿಸಿ ಕೆಡೆಟ್ ಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಶಾಲಾ ಮಕ್ಕಳು, ಮಾಜಿ ಸೈನಿಕರು, ಸೇವೆಯಲ್ಲಿರುವ ರಕ್ಷಣಾ ಸಿಬ್ಬಂದಿ, ಹುತಾತ್ಮ ಯೋಧರ ಕುಟುಂಬದವರು, ರಕ್ಷಣಾ ಅಧಿಕಾರಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು ಸ್ಮಾರಕಕ್ಕೆ ಪುಷ್ಪ ಗುಚ್ಛವಿರಿಸಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು. 

ಹುತಾತ್ಮರ ಸ್ಮಾರಕಕ್ಕೆ ರಾಜೀವ್‌ ಚಂದ್ರಶೇಖರ್‌ ಪುಷ್ಪನಮನ 

 ಕೇಂದ್ರದ ಮಾಜಿ ಸಚಿವ, ಕೇರಳ ಬಿಜೆಪಿ ಶಾಸಕ ರಾಜೀವ್ ಚಂದ್ರಶೇಖರ್ ಅವರು ನೆಹರು ತಾರಾಲಯ ಸಮೀಪ ಇರುವ ಹುತಾತ್ಮ ಯೋಧರ ಸ್ಮಾರಕಕ್ಕೆ ಆಗಮಿಸಿ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿ ಏರ್ ಕಮಾಂಡರ್ ಆಗಿ ನಿವೃತ್ತರಾದ ರಾಜೀವ್ ಚಂದ್ರಶೇಖರ್ ಅ‍ವರ ತಂದೆ ಎಂ.ಕೆ.ಚಂದ್ರಶೇಖರ್ ಈ ಸ್ಮಾರಕ ಸ್ಥಾಪನೆಗೆ ಶ್ರಮಿಸಿದ್ದನ್ನು ನೆನೆದರು. ಎಂ.ಕೆ.ಚಂದ್ರಶೇಖರ್ ಅವರ ಕನಸಾಗಿದ್ದ ಯೋಧರ ಸ್ಮಾರಕವನ್ನು ಇಳಿವಯಸ್ಸಿನಲ್ಲೂ ಪಟ್ಟು ಬಿಡದೆ ಕಾರ್ಯರೂಪಕ್ಕೆ ತಂದು ಸಾರ್ವಜನಿಕರಿಗೆ ಅರ್ಪಿಸಿದರು.

ಬೃಹತ್ ಗಾತ್ರದ ಕಲ್ಲನ್ನೇ ಆರಿಸಿ ವೀರಗಲ್ಲು ಸ್ಥಾಪಿಸಿದರು. ದೇಶದಲ್ಲೇ ಅತ್ಯಂತ ಎತ್ತರದಲ್ಲಿರುವ ರಾಷ್ಟ್ರದ ತ್ರಿವರ್ಣ ಧ್ವಜ ಸ್ತಂಭವನ್ನೂ ವೀರಗಲ್ಲಿನ ಸಮೀಪದಲ್ಲೇ ಪ್ರತಿಷ್ಠಾಪಿಸಿ ಬೆಂಗಳೂರಿಗರೇ ಹೆಮ್ಮೆ ಪಡುವಂತೆ ಮಾಡಿದರು. ಈ ಸ್ಮಾರಕದ ನೆಲ ಮಾಳಿಗೆಯಲ್ಲಿ ರಕ್ಷಣಾ ಇಲಾಖೆಯ ಅಪರೂಪದ ವಸ್ತುಗಳನ್ನು ಒಳಗೊಂಡ ಮ್ಯೂಸಿಯಂ ಕೂಡಾ ಸ್ಥಾಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೃಗಾಲಯಗಳು ಮನರಂಜನೆಗೂ ಸೈ, ಕಲಿಕೆಗೂ ಸೈ
ದಸರಾ: ಮೈಸೂರು ಅರಮನೆಗೆ ಸುಣ್ಣ - ಬಣ್ಣ