ಹೊಸಪೇಟೆ: ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಬಗ್ಗೆ ನಾವು ಸಿದ್ಧರಿದ್ದೇವೆ. ಆದರೆ ಆಂಧ್ರಪ್ರದೇಶ, ತೆಲಂಗಾಣ ಮುಖ್ಯಮಂತ್ರಿಗಳು ಈ ಕುರಿತು ಮಾತುಕತೆ ನಡೆಸಲು ಸಮಯ ನೀಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಜಲಾಶಯದಿಂದ ನೀರು ಹೋಗುತ್ತಿದೆಯಲ್ಲ, ಅದಕ್ಕೆ ಅವರು ಸುಮ್ಮನೆ ಇದ್ದಾರೆ. ನವಲಿ ಸಮಾನಾಂತರ ಜಲಾಶಯದ ಬಗ್ಗೆ ಮಾತುಕತೆ ಮಾಡಿ ಬಗೆಹರಿಸಿಕೊಳ್ಳೋಣ ಎಂದು ಅವರಲ್ಲಿ ನಾವು ಮನವಿ ಮಾಡಿದ್ದೇವೆ ಎಂದರು.
ಜಲಾಶಯದಲ್ಲಿ 30 ಟಿಎಂಸಿ ಹೂಳು ತುಂಬಿದೆ. ಹೂಳು ತೆಗೆಸುವ ವಿಚಾರ ಮತ್ತು ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಕುರಿತು ಎರಡು ರೀತಿಯಲ್ಲಿ ಚಿಂತನೆ ನಡೆಸಲಾಗುತ್ತಿದೆ. 30 ಟಿಎಂಸಿ ಹೂಳು ತುಂಬಿದ್ದರಿಂದ ಅಷ್ಟು ನೀರನ್ನು ನಷ್ಟ ಅನುಭವಿಸುತ್ತಿದ್ದೇವೆ. ನವಲಿ ಬಳಿ ಹೊಸ ಲಿಫ್ಟ್ ಮಾಡಿ ನೀರು ಸಂಗ್ರಹಿಸುವ ಯೋಜನೆಯೂ ಇದೆ. ಈ ಕುರಿತು ಯೋಜನೆ ಸಿದ್ಧಪಡಿಸಿ ತುಂಗಭದ್ರಾ ಮಂಡಳಿಯಲ್ಲಿ ಚರ್ಚಿಸಲು ಪ್ರಸ್ತಾವನೆ ಇದೆ. ಯಾವ ಸ್ಥಳ ಎಂದು ಈಗಲೇ ಬಹಿರಂಗ ಪಡಿಸುವಂತಿಲ್ಲ. ಸ್ಥಳ ಬಹಿರಂಗ ಪಡಿಸಿದರೆ ಅಲ್ಲಿನ ಜನರನ್ನು ಎತ್ತಿಕಟ್ಟುತ್ತಾರೆ. ಈ ಹಿನ್ನೆಲೆಯಲ್ಲಿ ತುಂಗಭದ್ರಾ ಮಂಡಳಿಯಲ್ಲಿ ಚರ್ಚಿಸಿ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಆದರೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ಮಾತುಕತೆಗೆ ಮುಂದೆ ಬರುತ್ತಿಲ್ಲ. ಸ್ವಲ್ಪದಿನ ಕಾಯೋಣ ಎಂದರು.ಜಲಾಶಯ ಹೂಳು ತುಂಬಿರುವ ಕಾರಣ ಅಣೆಕಟ್ಟಿನ ಸಾಮರ್ಥ್ಯ 105 ಟಿಎಂಸಿಯಿಂದ 100 ಟಿಎಂಸಿಗೆ ಇಳಿಕೆಯಾಗಿದೆ. ಹೂಳು ತೆಗೆಯಲು ಚೀನಾ ತಂತ್ರಜ್ಞಾನ ಬಳಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಗ್ಲೋಬಲ್ ಟೆಂಡರ್ ಕರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.