ಕನ್ನಡಪ್ರಭವಾರ್ತೆ ಪಾವಗಡ
ಶಾಸಕರ ನಿಧಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಯಡಿ ಗ್ರಾಮದ ಸರ್ವತೋಭಿವೃದ್ದಿಗೆ ವಿಶೇಷ ಅದ್ಯತೆ ನೀಡುವುದಾಗಿ ಶಾಸಕ ಎಚ್.ವಿ.ವೆಂಕಟೇಶ್ ಭರವಸೆ ನೀಡಿದರು.ಭಾನುವಾರ ತಾಲೂಕಿನ ಗಡಿ ಗ್ರಾಮವಾದ ಬಿ.ಹೊಸಹಳ್ಳಿಗೆ ತೆರಳಿ ಗ್ರಾಮದ ಮುಖಂಡರಿಂದ ಹಲವು ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದರು. ಬಳಿಕ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಶಾಸಕ ವೆಂಕಟೇಶ್, ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿ, ಮರಿದಾಸನಹಳ್ಳಿ ಗ್ರಾಪಂ ವ್ಯಾಪ್ತಿಯ ಬಿ.ಹೊಸಹಳ್ಳಿ ಗಡಿ ಗ್ರಾಮವಾಗಿದ್ದು, ಈ ಊರಿನ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದೇನೆ. ಎಲ್ಲೂ ಮೂಲೆಯೊಂದರ ಕಗ್ಗತ್ತಲಿನಲ್ಲಿ ಕೂಡಿದ್ದ ಈ ಗ್ರಾಮ. ಇಂದು ಪ್ರಗತಿದತ್ತ ಸಾಗುತ್ತಿರುವುದು ಸಂತಸ ತಂದಿದೆ. ರಸ್ತೆ, ವಸತಿ ಸೇರಿದಂತೆ ಅಭಿವೃದ್ದಿಯಲ್ಲಿ ಸಕಾಷ್ಟು ಕುಂಠಿತ ಕಂಡಿತ್ತು. ಗ್ರಾಮಸ್ಥರ ಸಹಕಾರದ ಮೇರೆಗೆ ಈ ಊರಿನ ಮುಖಂಡರಾದ ವಿ.ಚಿಂತಲರೆಡ್ಡಿ ಗ್ರಾಮದ ಪ್ರಗತಿಗೆ ವಿಶೇಷ ಆಸಕ್ತಿ ವಹಿಸಿದ್ದರ ಫಲವಾಗಿ ಅಭಿವೃದ್ದಿಯಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದೆ. ನಿಮ್ಮ ಬೇಡಿಕೆಯಂತೆ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಆಂಗ್ಲ ವಿಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೂತನ ಶಾಲಾ ಕೊಠಡಿಯ ನಿರ್ಮಾಣಕ್ಕೆ ಶೀಘ್ರ ಹೆಚ್ಚಿನ ಅನುದಾನ ಕಲ್ಪಿಸಲಿದ್ದೇನೆ. ಹಾಗೆಯೇ ಕಡುಬಡವರಿಗೆ ವಸತಿ ಸೌಲಭ್ಯ, ನಿವೇಶನ ಹಾಗೂ ಸಂಪರ್ಕ ರಸ್ತೆ ಪ್ರಗತಿ ಮತ್ತು ಶುಚಿತ್ವ, ಚರಂಡಿ ನಿರ್ಮಾಣ ಸೇರಿದಂತೆ ಕುಡಿವ ನೀರಿನ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಿಪಂನ ವಿವಿಧ ಯೋಜನೆಯ ಅಡಿಯಲ್ಲಿ ಅನುದಾನ ಒದಗಿಸಲಿದ್ದೇನೆ. ಗ್ರಾಮೀಣ ಮಕ್ಕಳ ವಿದ್ಯಾಬ್ಯಾಸಕ್ಕೆ ಹೆಚ್ಚು ಒತ್ತು ನೀಡಲಿದ್ದೇನೆ. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಕಾಣಬೇಕು. ಎಲ್ಲ ರೀತಿಯ ಸಮಸ್ಯೆ ಪರಿಹಾರಕ್ಕೆ ಶಿಕ್ಷಣವೇ ಮೂಲ ಹೀಗಾಗಿ ತಮ್ಮ ಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿ ರೂಪಿಸುವಂತೆ ಫೋಷಕರಿಗೆ ಕರೆ ನೀಡಿದರು.
ದೂರದ ನಗರ ಪ್ರದೇಶದ ಕಾನ್ವೆಂಟ್‌ಗಳಿಗೆ ತೆರಳುವುದು ಬೇಡ ಎಂದು ತೀರ್ಮಾನಿಸಿ ಗ್ರಾಮದಲ್ಲಿ ಶಾಲಾಭಿವೃದ್ದಿ ಟ್ರಸ್ಟ್ ರಚಿಸಿಕೊಳ್ಳುವ ಮೂಲಕ ನಿಮ್ಮ ಹಣದಲ್ಲಿಯೇ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ತರಗತಿ ತೆರೆದಿರುವುದು ನಿಜಕ್ಕೂ ಮೆಚ್ಚುವಂತದ್ದು. ಅದೇ ರೀತಿ ಬಗೆಬಗೆಯ ಗಿಡ ನಟ್ಟು ಬೆಳೆಸುವ ಮೂಲಕ ಶಾಲಾ ಅವರಣದ ಸೌಂದರ್ಯ ಮತ್ತು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸುಸಜ್ಜಿತ ಕೊಠಡಿಯ ನಿರ್ಮಾಣದ ಕಾರ್ಯ ಮಾದರಿಯಾಗಿದೆ. ಶಾಲೆಯ ಪ್ರಗತಿ ಇದೇ ರೀತಿ ಅಭಿವೃದ್ದಿ ಕಾಣಲಿ. ಪ್ರಗತಿಗೆ ನನ್ನ ಸಹಕಾರ ಇದೇ ಇರುತ್ತದೆ ಎಂದರು.ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಶುಭಹಾರೈಸಿದರು.ಹಿರಿಯ ಮುಖಂಡ ವಿ.ಚಿಂತಲರೆಡ್ಡಿ ಮಾತನಾಡಿ ಶಾಲೆ ಹಾಗೂ ಗ್ರಾಮದ ಸರ್ವತ್ತೊಭಿವೃದ್ದಿಗೆ ವಿಶೇಷ ಆಸಕ್ತಿವಹಿಸಿ ಭರವಸೆ ನೀಡಿದ ಶಾಸಕರಾದ ಎಚ್.ವಿ.ವೆಂಕಟೇಶ್ ಅವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಇದೇ ವೇಳೆ ಮರಿದಾಸನಹಳ್ಳಿಯ ಮಾಜಿ ತಾಪಂ ಸದಸ್ಯ ಹನುಮಂತರಾಯಪ್ಪ,ಮಂಜುನಾಥರೆಡ್ಡಿ,ಜಯಪಾಲರೆಡ್ಡಿ ಇತರೆ ಆನೇಕ ಮಂದಿ ಗ್ರಾಮದ ಹಿರಿಯ ಮುಖಂಡರು ಮತ್ತು ಸಾರ್ವಜನಿಕರಿದ್ದರು.