ಗಜೇಂದ್ರಗಡ: ಸ್ವಾತಂತ್ರ್ಯ ಭಾರತದ ಆಶಯ ಈಡೇರಿಸಲು ನಾಗರಿಕರಿಗೆ ಆರೋಗ್ಯ, ಶಿಕ್ಷಣ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ಮೂಲಕ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದ್ದೇನೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸ್ವಾತಂತ್ರ್ಯ ಎಂದರೆ ಎಲ್ಲರು ಸಮಾನರು, ಅವರಿಗೆ ಎಲ್ಲ ಸೌಲಭ್ಯ ದೊರಕಬೇಕು ಎಂಬುದನ್ನು ಅರಿತಿರುವ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸ್ವಾತಂತ್ರ್ಯದ ಆಶಯ ಈಡೇರಿಕೆಗೆ ಹಿಂದಿನಿಂದಲೂ ಶ್ರಮಿಸುತ್ತಾ ಬಂದಿದೆ. ಈ ದೇಸೆಯಲ್ಲಿ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ನವೆಂಬರ್ ತಿಂಗಳಲ್ಲಿ ಭೂಮಿಪೂಜೆ, ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಸ್ಟೇಲ್ ನಿರ್ಮಾಣಕ್ಕೆ ೪ ಅನುದಾನ ಮಂಜೂರು, ಕಾಯಂ ನ್ಯಾಯಾಲಯ ಆರಂಭಕ್ಕೆ ₹೯.೫ ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಟೆಂಡರ್ ಕರೆಯಲು ಸಿದ್ಧತೆಯಲ್ಲಿದೆ. ಹೀಗಾಗಿ ಒಂದೇ ಸೂರಿನಡಿ ತಾಲೂಕಿನ ಎಲ್ಲ ಕಚೇರಿಗಳ ಕಾರ್ಯಾರಂಭಕ್ಕೆ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದೇನೆ ಎಂದರು.
ದೇಶದಲ್ಲಿ ಎಲ್ಲರು ಸಮಾನರು ಎನ್ನುವ ಆಶಯಕ್ಕೆ ಪೂರಕವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಉಚಿತ ಹಾಗೂ ಗ್ಯಾರಂಟಿ ಯೋಜನೆ ಟೀಕಿಸಿದವರು ಇಂದು ಯೋಜನೆ ಸರ್ಕಾರ ನಿಲ್ಲಿಸಲಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ಸರ್ಕಾರ ಯಾವುದೇ ಯೋಜನೆ ನಿಲ್ಲಿಸುವದಿಲ್ಲ ಎಂದರು.ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ತ್ಯಾಗ, ಬಲಿದಾನದ ಮೂಲಕ ಸಿಕ್ಕಿರುವ ಸ್ವಾತಂತ್ರ್ಯ ಉಳಿಸಿಕೊಳ್ಳುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಚೆನ್ನಮ್ಮ ವೃತ್ತ: ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ನಡೆದ ಮುಖಂಡ ಕಳಕಪ್ಪ ಸಂಗನಾಳ ೭೮ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದರು. ಮುಖಂಡರಾದ ಶರಣಪ್ಪ ಚಳಗೇರಿ, ಅಪ್ಪು ಮತ್ತಿಕಟ್ಟಿ ಮಾತನಾಡಿದರು.
ಎಸ್‌ಎಂಭೂಮರಡ್ಡಿ ಪದವಿ ಪೂರ್ವ ಕಾಲೇಜು: ಪಟ್ಟಣದ ಎಸ್.ಎಂ. ಭೂಮರಡ್ಡಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ೭೮ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಪ್ರಾಚಾರ್ಯ ಜಿ.ಬಿ. ಗುಡಿಮನಿ ನೆರವೇರಿಸಿದರು. ಸಿ.ಎಸ್. ಮೂರಶಿಳ್ಳಿನ, ಎಂ.ವಿ. ನಾಡಗೇರ, ಬಿ.ವಿ. ಮುನವಳ್ಳಿ, ಎ.ಎಸ್. ವಡ್ಡರ, ಎಸ್.ಎಸ್.ವಾಲಿಕಾರ ಇದ್ದರು.