ಇಂದಿಗೂ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಖೇದಕರ: ಶಾಸಕ ಕೋಳಿವಾಡ

KannadaprabhaNewsNetwork | Published : Aug 16, 2024 12:45 AM

ಸಾರಾಂಶ

ದೇಶದ ಚುನಾವಣೆಯಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ರಾಣಿಬೆನ್ನೂರು: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕಗಳು ಸಂದರೂ ಇಂದಿಗೂ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ನಿಜಕ್ಕೂ ಖೇದಕರ ಸಂಗತಿ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.ತಾಲೂಕು ಆಡಳಿತದ ವತಿಯಿಂದ ಗುರುವಾರ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರಸಭಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣೆಯಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣದಿಂದ ಭ್ರಷ್ಟಾಚಾರ ಕಡಿವಾಣ ಹಾಕಬಹುದು ಹಾಗೂ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಾಗುತ್ತದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೂ ನಗರ ಪ್ರದೇಶದ ಮಕ್ಕಳ ರೀತಿಯಲ್ಲಿ ಇಂಗ್ಲೀಷ್ ಮಾಧ್ಯಮದ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣವನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ ಮೊದಲ ಹಂತವಾಗಿ 18 ಗ್ರಾಮಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ ಎಂದರು.

ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮಾತನಾಡಿ, ಅನೇಕರ ತ್ಯಾಗ, ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದೇ ಸ್ವಾತಂತ್ರ್ಯ ದಿನಾಚರಣೆಯ ಉದ್ದೇಶವಾಗಿದೆ. ನಾವೆಲ್ಲ ಭಾರತೀಯರು ಒಂದಾಗಬೇಕು. ನಮ್ಮ ತಾಯ್ನಾಡಿಗೆ ಎಂದಿಗೂ ದ್ರೋಹ ಮಾಡಲು ಬಿಡುವುದಿಲ್ಲ ಎಂಬ ಭರವಸೆಯನ್ನು ನಾವಿಂದು ನೀಡಬೇಕಾಗಿದೆ. ನಮ್ಮ ದೇಶವನ್ನು ಶಕ್ತಿಯುತ ಮತ್ತು ವಿಶ್ವದಲ್ಲಿ ಗೌರವಾನ್ವಿತವಾಗಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದರು.

ಅಪರಾಧ ವಿಭಾಗದ ಪಿಎಸ್‌ಐ ಎಚ್.ಎನ್. ದೊಡ್ಡಮನಿ ನೇತೃತ್ವದಲ್ಲಿ ಪೊಲೀಸ್, ಗೃಹರಕ್ಷಕ ದಳ, ಎನ್.ಸಿ.ಸಿ., ಸ್ಕೌಟ್ಸ್, ಗೈಡ್, ಸೇವಾದಳ ಹಾಗೂ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ಆಕರ್ಷಕ ಪಥಸಂಚಲನ ನಡೆಸಿದರು.

ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿ ನೆರೆದಿದ್ದ ಜನರನ್ನು ರಂಜಿಸಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಪ್ಪ ಕುಡಪಲಿ, ಟಿಎಪಿಸಿಎಂಎಸ್ ಅಧ್ಯಕ್ಷ ಯಲ್ಲರಡ್ಡಿ ರಡ್ಡೇರ, ನಗರಸಭೆ ಪೌರಾಯುಕ್ತ ಭೀಮಪ್ಪ ಇಂಗಳಗಿ, ತಾಪಂ ಇಒ ಪರಮೇಶ, ಡಿವೈಎಸ್‌ಪಿ ಡಾ. ಗಿರೀಶ ಬೋಜಣ್ಣನವರ, ಬಿಇಒ ಶಾಮಸುಂದರ ಅಡಿಗ ಹಾಗೂ ನಗರಸಭಾ ಸದಸ್ಯರು ವೇದಿಕೆಯಲ್ಲಿದ್ದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಕೊಡಮಾಡಲಾದ ಲ್ಯಾಪ್‌ಟ್ಯಾಪ್‌ಗಳನ್ನು ವಿತರಿಸಲಾಯಿತು.

ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ, ನಾಡಗೀತೆ ಮತ್ತು ರೈತಗೀತೆಗಳನ್ನು ಹಾಡಿದರು.

ಶಕುನಿ ಡೈಲಾಗ್: ಮುಜುಗರ

ಸ್ವತಂತ್ರ ದಿನದ ಸಮಯದಲ್ಲಿ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ದೇಶ ಭಕ್ತರ ಬಗ್ಗೆ ಹಾಗೂ ದೇಶದ ಬಗ್ಗೆ ಮಾತನಾಡಲಾಗುತ್ತದೆ. ಆದರೆ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ‍್ಯ ದಿನಾಚರಣೆ ವೇದಿಕೆಯಲ್ಲಿ ಧ್ವಜಾರೋಹಣಕ್ಕೂ ಪೂರ್ವದಲ್ಲಿ ಶಿಕ್ಷಣ ಇಲಾಖೆಯಲ್ಲಿ ಸಿಆರ್‌ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬೀರಪ್ಪ ಅಣಜಿ ಎಂಬುವರು ಶಕುನಿ ಪಾತ್ರದ ಡೈಲಾಗ್ ಹೇಳಿದರು. ಇದಕ್ಕೆ ಶಿಕ್ಷಣ ಇಲಾಖೆಯ ಬಿಇಒ ಶ್ಯಾಮಸುಂದರ ಅಡಿಗ ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿ ಸಹ ಸಾಥ್ ನೀಡಿದ್ದಾರೆ. ಇದು ನೆರೆದ ಸಭೀಕರಿಗೆ ತೀವ್ರ ಮುಜುಗರ ಉಂಟು ಮಾಡಿತು.

Share this article