- ಚನ್ನಗಿರಿಯಲ್ಲಿ ಆರ್ಥಿಕ ವಲಯ ಸೃಜನೆಗೆ ಆದ್ಯತೆ: ಬಿಜೆಪಿ ಅಭ್ಯರ್ಥಿ । ಚಾಕು ಇರಿತ ಗಾಯಾಳುಗಳ ಕುಟುಂಬಗಳಿಗೆ ಸಾಂತ್ವನ - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಅತಿ ಹೆಚ್ಚು ಅಡಕೆ ಬೆಳೆಯುವ ಚನ್ನಗಿರಿ ತಾಲೂಕಿನ ಬೆಳೆಗಾರರ ಹಿತರಕ್ಷಣೆ ಹಾಗೂ ಅಡಕೆ ಮೌಲ್ಯವರ್ಧನೆಗೆ ಹೆಚ್ಚು ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗುವುದು. ಜೊತೆಗೆ ಅಡಕೆ ಉಪ ಉತ್ಪನ್ನಗಳ ತಯಾರಿಕೆಗೂ ಪ್ರೋತ್ಸಾಹ ನೀಡುವುದಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಭರವಸೆ ನೀಡಿದರು.ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ, ತಿಪ್ಪಗೊಂಡನಹಳ್ಳಿ, ಹೊನ್ನೇಬಾಗಿ, ಅಜ್ಜಿಹಳ್ಳಿ, ನಲ್ಲೂರು, ವಿವಿಧ ಗ್ರಾಮಗಳಲ್ಲಿ ಭಾನುವಾರ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮುಖಂಡರಾದ ತುಮ್ಕೋಸ್ ಶಿವಕುಮಾರ, ಮಾಡಾಳ ಮಲ್ಲಿಕಾರ್ಜುನ ಇತರರ ನೇತೃತ್ವದಲ್ಲಿ ಮತಯಾಚಿಸಿ ಮಾತನಾಡಿದ ಅವರು, ವಿಶೇಷ ಆರ್ಥಿಕ ವಲಯ ಸೃಜನೆಗೆ ಇಲ್ಲಿ ವಿಫುಲ ಅವಕಾಶಗಳಿವೆ. ಅವುಗಳ ಯಶಸ್ವಿ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡುವೆ. ತುಮ್ಕೋಸ್‌ಗೆ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕಿನ ಬೆಳೆಗಾರರು ಅಡಕೆ ತಂದು ಮಾರಾಟ ಮಾಡುತ್ತಾರೆ. ಇಲ್ಲಿ ಹೆಚ್ಚಿನ ಆರ್ಥಿಕ ವಹಿವಾಟು ನಡೆಯುತ್ತಿದ್ದು, ಅಡಕೆ ಉಪ ಉತ್ಪನ್ನ ತಯಾರಿಕಾ ಘಟಕಗಳು ಪ್ರಾರಂಭವಾದರೆ ಯುವಕರಿಗೆ ಉದ್ಯೋಗ ಸಿಗಲಿವೆ. ಅಲ್ಲದೇ, ಪರೋಕ್ಷವಾಗಿ ಅನೇಕ ಕುಟುಂಬಗಳಿಗೆ ಸಹಾಯವಾಗಲಿದೆ. ವಿಶೇಷ ಆರ್ಥಿಕ ವಲಯ ರಚನೆಗೆ ನನಗೆ ಮತ ನೀಡಿ, ಗೆಲ್ಲಿಸಿ ಎಂದು ಮನವಿ ಮಾಡಿದರು.
ಪ್ರವಾಸೋದ್ಯಮಕ್ಕೂ ಇಲ್ಲಿ ಸಾಕಷ್ಟು ಅವಕಾಶಗಳಿವೆ. ಈಗಾಗಲೇ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ್ ಪ್ರವಾಸೋದ್ಯಮ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಸೂಳೆಕೆರೆಯಲ್ಲಿ ಅತಿಥಿ ಗೃಹ, ಜಲಕ್ರೀಡಾ ಚಟುವಟಿಕೆಗೆ ಆದ್ಯತೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕೆಂದು ಜನ ಬಯಸಿದ್ದಾರೆ. ದೇಶದ ಎಲ್ಲ ಭಾಗದಲ್ಲೂ ಬಿಜೆಪಿ ಪರ ಅಲೆ ಇದೆ. ದಾವಣಗೆರೆ ಕ್ಷೇತ್ರದ ಜನರೂಸಹ ನನ್ನನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ. ಜನರಿಗೆ ಗೊತ್ತಿದೆ. ಇಲ್ಲಿ ನಾನು ಗೆದ್ದರೆ ಅಲ್ಲಿ ಮೋದಿ ಜೀ ಅವರು ಗೆದ್ದಂತೆ ಎಂದು ಅವರು ತಿಳಿಸಿದರು.ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಮಾತನಾಡಿ, ಸಂಸದ ಸಿದ್ದೇಶಣ್ಣ ಚನ್ನಗಿರಿ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಹೊರತುಪಡಿಸಿ ಕೇಂದ್ರದಿಂದ ವಿವಿಧ ಯೋಜನೆಯಡಿ ಅನುದಾನ ತಂದು ಅಭಿವೃದ್ಧಿಗೆ ಸಹಕರಿಸಿದ್ದಾರೆ. ಈಗ ಗಾಯತ್ರಿ ಸಿದ್ದೇಶ್ವರ್ ಸ್ಪರ್ಧಿಸಿದ್ದು, ಹೆಚ್ಚಿನ ಮತಗಳ ಅಂತರದಿಂದ ಗಾಯತ್ರಮ್ಮ ಅವರಿಗೆ ಗೆಲ್ಲಿಸಿ ಕಳುಹಿಸಿದರೆ, ಚನ್ನಗಿರಿ ತಾಲೂಕು ಮಾದರಿ ತಾಲೂಕನ್ನಾಗಿ ಅಭಿವೃದ್ಧಿ ಮಾಡುತ್ತಾರೆ ಎಂದರು.
ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಡಕೆ ಬೆಳೆಗಾರರಿಗೆ ಅನೂಕೂಲವಾಗಿದೆ. ಮೊದಲು ಬೇರೆ ರಾಷ್ಟ್ರದಿಂದ ಕಡಿಮೆ ಬೆಲೆಗೆ ಆಮದು ಮಾಡಿಕೊಂಡು ಇಲ್ಲಿನ ರೈತರಿಗೆ ತೊಂದರೆ ಕೊಡುತ್ತಿದ್ದರು. ಈಗ ಬೇರೆ ರಾಷ್ಟ್ರದಿಂದ ಆಮದು ಮಾಡಿಕೊಂಡರೂ ಆಮದು ಬೆಲೆ ನಿಗದಿ ಮಾಡಿದ್ದಾರೆ. ಹಾಗಾಗಿ, ಅಡಕೆ ಬೆಲೆ 35 ಸಾವಿರಕ್ಕಿಂತ ಕಡಿಮೆಯಾಗುತ್ತಿಲ್ಲ. ಮೋದಿ ರೈತರಿಗೆ ಬೆಲೆ ಗ್ಯಾರಂಟಿ ಕೊಟ್ಟಿದ್ದಾರೆ ಎಂದರು.ಮಾಜಿ ಸಚಿವ ಮುರುಗೇಶ್ ನಿರಾಣಿ ಪತ್ನಿ ಕಮಲಾ ನಿರಾಣಿ, ಮಂಡಲ ಅಧ್ಯಕ್ಷರು , ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್‌ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು, ಚನ್ನಗಿರಿ ವಿಧಾನಸಭಾ ಕ್ಷೇತ್ರದ ಮುಖಂಡರು ಇದ್ದರು.
- - - ಬಾಕ್ಸ್-1 ಜಿಹಾದಿಗಳ ಕುಕೃತ್ಯದ ಬಗ್ಗೆ ಬಾಯಿ ಬಿಡದ ಸಿಎಂ, ಹೋಂ ಕನ್ನಡಪ್ರಭ ವಾರ್ತೆ, ದಾವಣಗೆರೆ ಬಾಯಿ ಬಿಟ್ಟರೆ ಸಾಕು ಬರೀ ಗ್ಯಾರಂಟಿಗಳ ಬಗ್ಗೆ ಮಾತ್ರ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ 15 ದಿನಗಳಿಂದ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದ್ದು, ಸಾಲು ಸಾಲು ಹತ್ಯೆಗಳಾಗುತ್ತಿದ್ದರೂ ಯಾಕೆ ಚಕರಾ ಎತ್ತುತ್ತಿಲ್ಲ ಎಂದು ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕಿಡಿಕಾರಿದರು.ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದಲ್ಲಿ ಭಾನುವಾರ ಮತಯಾಚಿಸಿ ಮಾತನಾಡಿ, ರಾಜ್ಯದಲ್ಲಿ ಜನರು ನಿರ್ಭೀತಿಯಿಂದ ಮನೆ ಬಿಟ್ಟು ಹೊರಗೆ ಬರಲು ಒಂದು ಕ್ಷಣ ಯೋಚಿಸುವಂತಾಗಿದೆ. ರಾಜ್ಯದ ಜನರ ಜೀವಕ್ಕೆ ಗ್ಯಾರಂಟಿ ಕೊಡುವವರು ಯಾರು ಎಂದು ಪ್ರಶ್ನಿಸಿದರು.
ಸರಣಿ ಹತ್ಯೆಗಳ ಬಳಿಕ ತನಿಖಾ ಸಂಸ್ಥೆ ವರದಿ ಕೊಡುವ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ.ಪರಮೇಶ್ವರ ಒಂದು ಕೋಮಿನವರನ್ನು ದೃಷ್ಟಿಯಲ್ಲಿಟ್ಟುಕೊಂಡು, ಓಲೈಕೆ ಹೇಳಿಕೆ ನೀಡುತ್ತಿರುವುದು ನಾಡಿನ ದುರಂತ. ಇದು ಕಾಂಗ್ರೆಸ್ಸಿನ ತುಷ್ಟೀಕರಣದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಲ್ಲೂರಿನಲ್ಲಿ ರಾಮನವಮಿ ದಿನ ಹಿಂದು ಯುವಕರಿಗೆ ಅನ್ಯಕೋಮಿನ ಯುವಕರು ಚಾಕು ಇರಿದು, ಹಲ್ಲೆ ಮಾಡಿದ್ದಾರೆ. ಅದೃಷ್ಟವಶಾತ್ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂತಹ ಜಿಹಾದಿ ಕೃತ್ಯಗಳು ನಡೆಯಬಾರದೆಂದರೆ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು. ನೀವೆಲ್ಲರೂ ಬಿಜೆಪಿಗೆ ಬೆಂಬಲಿಸಿ, ಮತ ನೀಡಿದರೆ ಇಂತಹ ಜಿಹಾದಿ ಮನಸ್ಥಿತಿಯವರಿಂದ ಈ ರೀತಿ ಘಟನೆಗಳು ನಡೆಯುವುದಿಲ್ಲ ಎಂದು ಹೇಳಿದ ಅವರು, ಜಿಹಾದಿ ಮನಸ್ಥಿತಿಯ ಕ್ರಿಮಿನಲ್‌ಗಳು ಕೇಂದ್ರ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಲ ಮುದುಡಿಕೊಂಡಿರುತ್ತಾರೆ ಎಂದು ಹೇಳಿದರು.
ಅನಂತರ ನಲ್ಲೂರಿನಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಯುವಕರ ಮನೆಗಳಿಗೆ ತೆರಳಿ ಧೈರ್ಯ ಹೇಳಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.- - -
ಟಾಪ್ ಕೋಟ್ ಹೊನ್ನಾಳಿ, ಚನ್ನಗಿರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ, ಚಿತ್ರದುರ್ಗ ತಾಲೂಕುಗಳ 121 ಕೆರೆಗಲಿಗೆ ನೀರು ತುಂಬಿಸುವ ₹597 ಕೋಟಿಗಳ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಬಿಜೆಪಿ ಸರ್ಕಾರದ ಸಾಧನೆಯೇ ಹೊರತು, ಕಾಂಗ್ರೆಸ್ಸಿನದ್ದು ಎಳ್ಳಷ್ಟೂ ಶ್ರಮವಿಲ್ಲ. ಮುಗಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸುವುದೇ ತಮ್ಮ ಆದ್ಯತೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸುಳ್ಳು ಹೇಳುತ್ತಿದ್ದಾರೆ. ಈ ಯೋಜನೆ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿಗೆ ಗಂಧ-ಗಾಳಿಯೂ ಗೊತ್ತಿಲ್ಲ- ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ, ದಾವಣಗೆರೆ ಕ್ಷೇತ್ರ
- - - ಕೋಟ್ ಸಂಸದ ಜಿ.ಎಂ.ಸಿದ್ದೇಶ್ವರ ಕುಟುಂಬ ಜನ ಸೇವೆ ಮಾಡುವುದರಲ್ಲಿ ಯಾವಾಗಲೂ ಮುಂದೆ. ಈ ಚುನಾವಣೆಗೆ ಗಾಯತ್ರಿ ಸಿದ್ದೇಶ್ವರರಿಗೆ ನಮ್ಮ ಪಕ್ಷದ ಟಿಕೆಟ್ ಸಿಕ್ಕಿದೆ. ನಾವು ಚನ್ನಗಿರಿ ಕ್ಷೇತ್ರದಿಂದ ಕನಿಷ್ಠ 50 ಸಾವಿರ ಮತಗಳ ಮುನ್ನಡೆ ಕೊಟ್ಟು ಗೆಲ್ಲಿಸುವ ಕೆಲಸ ಮಾಡಬೇಕಿದೆ. ಇಂದಿನಿಂದಲೇ ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಗಾಯತ್ರಿ ಸಿದ್ದೇಶ್ವರರಿಗೆ ಮತ ನೀಡುವಂತೆ ಮನವಿ ಮಾಡಬೇಕು- ಮಾಡಾಳ್ ವಿರೂಪಾಕ್ಷಪ್ಪ, ಮಾಜಿ ಶಾಸಕ, ಬಿಜೆಪಿ
- - - -21ಕೆಡಿವಿಜಿ7, 8:ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಚನ್ನಗಿರಿ ಕ್ಷೇತ್ರದಲ್ಲಿ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ತುಮ್ಕೋಸ್ ಎಚ್.ಎಸ್.ಶಿವಕುಮಾರ ಇತರರ ನೇತೃತ್ವದಲ್ಲಿ ಪ್ರಚಾರ ಕೈಗೊಂಡು, ಮತಯಾಚಿಸಿದರು.