ಹಗರಿಬೊಮ್ಮನಹಳ್ಳಿ:ಜಿಲ್ಲೆಯಲ್ಲಿ ರಾಜಕೀಯ ವಾತಾವರಣವನ್ನು ಹದಗೆಡಿಸಿದ ಬಿಜೆಪಿಗರಿಗೆ ಯಾವುದೇ ಕಾರಣಕ್ಕೂ ಮತದಾನ ಮಾಡಬೇಡಿ ಎಂದು ಬಳ್ಳಾರಿ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಹೇಳಿದರು.
ಶ್ರೀರಾಮುಲು ಬಳ್ಳಾರಿ ಜಿಲ್ಲೆಗೆ ಸಂಸದರಾದಾಗ ಜಿಲ್ಲೆ ಯಾವ ಅಭಿವೃಧ್ದಿ ಕಂಡಿಲ್ಲ. ಚುನಾವಣೆಯಲ್ಲಿ ಮಾತ್ರ ಇವರಿಗೆ ಜನರು ನೆನಪಾಗುತ್ತಾರೆ. ಚುನಾವಣೆಯಲ್ಲಿ ಗೆದ್ದ ಮೇಲೆ ತಮ್ಮ ಅಭಿವೃದ್ಧಿಯತ್ತ ಬಿಜೆಪಿಯವರು ಚಿತ್ತ ಹರಿಸುತ್ತಾರೆ. ತಂಬ್ರಹಳ್ಳಿ ಗ್ರಾಮವನ್ನು ಆದರ್ಶ ಗ್ರಾಮ ಮಾಡುತ್ತೇವೆ ಎಂದು ಆಯ್ಕೆ ಮಾಡಿಕೊಂಡು ನಯಾಪೈಸೆ ಅನುದಾನ ಒದಗಿಸದೆ ಹುಸಿ ಭರವಸೆ ನೀಡಿ ವಿಫಲರಾಗಿದ್ದಾರೆ. ಇವರು ಹಾಕಿರುವ ಹೈಮಾಸ್ ದೀಪಗಳು ಕೂಡ ಸಂಸದರ ಯೋಜನೆಯ ಅನುದಾನವಲ್ಲ. ಇವು ಕೂಡ ಎನ್‌ಎಂಡಿಸಿ ಕಾರ್ಖಾನೆಯವರು ಹಾಕಿದ್ದಾರೆ. ಪ್ರಾಮಾಣಿಕ ಅಭ್ಯರ್ಥಿ ಆಯ್ಕೆ ನಿಮ್ಮ ಕೈಯಲ್ಲಿದೆ, ರಾಜ್ಯ ಸರಕಾರ ಜನಪರ ಆಡಳಿತ ನೀಡುತ್ತಿರುವುದನ್ನು ಮರೆಯಬೇಡಿ ಎಂದು ತಿಳಿಸಿದರು.ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ಮಾತನಾಡಿ, ನರೇಂದ್ರ ಮೋದಿಯವರು ಕಳೆದ ೧೦ ವರ್ಷಗಳಲ್ಲಿ ಶೂನ್ಯ ಸಾಧನೆ ಮಾಡಿರುವುದು ಜನರಿಗೆ ತಿಳಿದಿದೆ. ದೇಶದಲ್ಲಿ ೫೪೦ಗ್ರಾಮಗಳನ್ನು ಆದರ್ಶ ಗ್ರಾಮಗಳನ್ನಾಗಿ ಮಾಡಲಾಗುವುದು ಎಂದು ಆಯ್ಕೆ ಮಾಡಿಕೊಂಡು, ದೇಶದ ಒಂದು ಗ್ರಾಮಕ್ಕೂ ಅನುದಾನ ನೀಡದೆ ಅಭಿವೃದ್ಧಿ ಮರೆತಿದ್ದಾರೆ. ಇವರು ಮಾತನ್ನು ಮಾತ್ರ ಅಚ್ಚುಕಟ್ಟಾಗಿ ಮಾತನಾಡುತ್ತಾರೆ. ಕೆಲಸ ಮಾಡುವ ಇಚ್ಚಾಶಕ್ತಿ ಬಿಜೆಪಿಯವರಿಗಿಲ್ಲ ಎಂದು ಹರಿಹಾಯ್ದರು. ಮಾಜಿ ಶಾಸಕ ಎನ್.ಎಂ.ನಬಿಸಾಬ್ ಮಾತನಾಡಿದರು.
ಈ ಸಂದರ್ಭದಲಿ ಜಿಪಂ ಮಾಜಿ ಸದಸ್ಯರಾದ ಅಕ್ಕಿ ತೋಟೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಂದಿಬಂಡಿ ಸೋಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಹಿರಬಾನು, ಮುಖಂಡರಾದ ಚಿಂತ್ರಪಳ್ಳಿ ದೇವೆಂದ್ರಪ್ಪ, ಗೌರಜ್ಜನವರ ಗಿರೀಶ್, ಪಟ್ಟಣಶೆಟ್ಟಿ ಸುರೇಶ, ಹುಗ್ಗಿ ದೊಡ್ಡಬಸಪ್ಪ, ಕೊಪ್ಪಳ ಶಾಹಿರ್, ಹೊಟ್ಟಿ ವೀರಣ್ಣ, ಟಿ.ವೆಂಕೋಬಪ್ಪ, ಉಲುವತ್ತಿ ಬಾಬುವಲಿ, ಗಂಗಾವತಿ ಅಜೀಜ್, ರೆಡ್ಡಿ ಮಂಜುನಾಥ ಪಾಟೀಲ್, ಟಿಎಚ್‌ಎಂ ರುದ್ರಯ್ಯ, ಸುಭಾಷ್ ಇತರರಿದ್ದರು.