ಸಾಂಪ್ರದಾಯಿಕ ದಸರಾ ಆಚರಣೆಗೆ ಸಮಿತಿ ನಿರ್ಧಾರ: ದಶಮಂಟಪಗಳ ಶೋಭಾಯಾತ್ರೆಗೆ ನಿಯಮ ಜಾರಿ

KannadaprabhaNewsNetwork |  
Published : Oct 22, 2023, 01:01 AM IST
ದಸರಾ ದಶಮಂಟಪ ಸಮಿತಿ ಸುದ್ದಿಗೋಷ್ಠಿ | Kannada Prabha

ಸಾರಾಂಶ

ನ್ಯಾಯಾಲಯದ ನಿರ್ದೇಶನದಂತೆ ಮಂಟಪಗಳಲ್ಲಿ ಯಾವುದೇ ರೀತಿಯ ಲೇಸರ್ ಲೈಟ್ ಬಳಸುವಂತಿಲ್ಲ, ಧ್ವನಿ ವರ್ಧಕಕ್ಕೆ ಕ್ರೇನ್ ಬಳಸಬಾರದು, ಮಂಟಪಗಳಲ್ಲಿ ಸುಡುಮದ್ದು ಅಥವಾ ಪಟಾಕಿ ಬಳಸಬಾರದು ಎನ್ನುವುದು ಸೇರಿದಂತೆ ೧೭ ನಿಯಮಗಳನ್ನು ದಶಮಂಟಪ ಸಮಿತಿಯಲ್ಲಿ ಚರ್ಚೆ ಮಾಡಿ ಜಾರಿಗೆ ತರಲು ತೀರ್ಮಾನ.

ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಮಡಿಕೇರಿ ದಸರಾವನ್ನು ನ್ಯಾಯಾಲಯದ ಆದೇಶಕ್ಕೆ ಗೌರವ ಕೊಟ್ಟು ಸಾಂಪ್ರದಾಯಿಕವಾಗಿ ಆಚರಿಸಲಾಗುವುದು ಎಂದು ಮಡಿಕೇರಿ ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಎಚ್. ಮಂಜುನಾಥ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ನಿರ್ದೇಶನದಂತೆ ಮಂಟಪಗಳಲ್ಲಿ ಯಾವುದೇ ರೀತಿಯ ಲೇಸರ್ ಲೈಟ್ ಬಳಸುವಂತಿಲ್ಲ, ಧ್ವನಿ ವರ್ಧಕಕ್ಕೆ ಕ್ರೇನ್ ಬಳಸಬಾರದು, ಮಂಟಪಗಳಲ್ಲಿ ಸುಡುಮದ್ದು ಅಥವಾ ಪಟಾಕಿ ಬಳಸಬಾರದು ಎನ್ನುವುದು ಸೇರಿದಂತೆ ೧೭ ನಿಯಮಗಳನ್ನು ದಶಮಂಟಪ ಸಮಿತಿಯಲ್ಲಿ ಚರ್ಚೆ ಮಾಡಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಇದನ್ನು ಎಲ್ಲ ಮಂಟಪ ಸಮಿತಿಗಳು ಪಾಲಿಸುವ ವಿಶ್ವಾಸವಿದೆ ಎಂದರು. ಮಡಿಕೇರಿ ದಸರಾದಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗ ಪ್ರಮುಖ ಆಕರ್ಷಣೆಯಾದರೆ, ನಾಡಿನ ಜನರನ್ನು ಒಂದೆಡೆ ಸೇರಿಸುವ ಹೆಗ್ಗಳಿಕೆ ಶೋಭಾಯಾತ್ರೆಯದ್ದಾಗಿದೆ. ಮಡಿಕೇರಿ ದಸರಾಕ್ಕೆ ಸರ್ಕಾರದಿಂದ ೯೫ ಲಕ್ಷ ರು. ಅನುದಾನ ಬಂದಿದೆ. ದಸರಾ ಮಂಟಪಗಳಿಗೆ ಕನಿಷ್ಠ ೪ ಲಕ್ಷ ರು. ಬೇಡಿಕೆ ಇಡಲಾಗಿದೆ. ಕರಗ ಸಮಿತಿಗೆ ೨.೫ ಲಕ್ಷ ರು. ಬೇಡಿಕೆ ಇಡಲಾಗಿದ್ದು, ಉತ್ತಮ ಮೊತ್ತ ಸಿಗುವ ನಿರೀಕ್ಷೆ ಇದೆ. ಡಿಜೆ, ಲೇಸರ್ ಲೈಟ್ ಬಳಸಲು ಮುಂದಿನ ದಿನಗಳಲ್ಲಿ ವಿಶೇಷ ಅನುಮತಿ ತರಲು ಪ್ರಯತ್ನಿಸಲಾಗುವುದು. ಈ ವರ್ಷ ಇದಕ್ಕೆ ಕಾಲಾವಕಾಶ ಕಡಿಮೆ ಇದೆ. ಜನರ ದೇಣಿಗೆ, ಸರ್ಕಾರದ ಸಹಕಾರದಿಂದ ಮಡಿಕೇರಿ ದಸರಾ ಆಚರಿಸಲಾಗುತ್ತದೆ. ಸರ್ಕಾರದ ನಿಯಮಗಳನ್ನು ಪಾಲಿಸುವಲ್ಲಿ ಸಾರ್ವಜನಿಕರೂ ಸಹಕರಿಸಬೇಕು. ದಶಮಂಟಪ ಸಮಿತಿಯಿಂದ ಅ.೨೬ಕ್ಕೆ ಮಡಿಕೇರಿ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಗುವುದು. ದಸರಾದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕರ್ಕಶ ಶಬ್ಧ ಮಾಡುವ ಪೀಪಿ, ಮುಖವಾಡಗಳ ಬಳಕೆಯನ್ನೂ ನಿರ್ಬಂಧಿಸಲಾಗಿದೆ ಎಂದರು. ಸಮಿತಿ ಕಾರ್ಯಾಧ್ಯಕ್ಷೆ ಜಯಂತಿ ಆರ್. ಶೆಟ್ಟಿ ಮಾತನಾಡಿ, ಸಾಂಪ್ರದಾಯಿಕ ದಸರಾವನ್ನು ಕಾನೂನಿನ ನಿಯಮದ ಅಡಿಯಲ್ಲಿ ಮಾಡಲಾಗುವುದು. ಸರಳತೆಯಿಂದ ಆಚರಿಸಲು ಸೂಚಿಸಲಾಗಿದೆ. ಇದನ್ನು ಪಾಲಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಎಚ್.ಆರ್. ಜಗದೀಶ್, ಆನಂದ್, ರಘುಪತಿ, ಗೋಪಿನಾಥ್ ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ