ಸಾಮಾನ್ಯ ವ್ಯಕ್ತಿಗೆ ಹಕ್ಕು, ಅವಕಾಶ, ಅಧಿಕಾರ ನೀಡಿರುವುದು ಸಂವಿಧಾನ: ಚಲುವರಾಯಸ್ವಾಮಿ

KannadaprabhaNewsNetwork |  
Published : Feb 02, 2025, 11:48 PM IST
2ಕೆಎಂಎನ್ ಡಿ19 | Kannada Prabha

ಸಾರಾಂಶ

ಸಮಾಜದ ಹಿತ ದೃಷ್ಟಿಯಿಂದ ಸಾರ್ವಜನಿಕರು, ಮಹಿಳೆಯರು, ಯುವಕರನ್ನು ಭಾರತ ದೇಶದ ಇತಿಹಾಸದತ್ತ ತಿರುಗಿಸಬೇಕಿದೆ. ಮುಂದೊಂದು ದಿನ ನಮ್ಮ ಕಾಲ ಮುಗಿಯುತ್ತದೆ. ನಮ್ಮ ಹಿಂದೆ ಬರುವಂತಹ ಹೊಸ ಪೀಳಿಗೆಗೆ ಅನಾಹುತ ಕಾದಿದೆ. ಆದ್ದರಿಂದ ಸಂವಿಧಾನದ ಪ್ರಜ್ಞೆ ಹೆಚ್ಚಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಹಣ, ಅಧಿಕಾರ ಬಲ ಇಲ್ಲದ ಸಾಮಾನ್ಯ ವ್ಯಕ್ತಿಯು ಎಲ್ಲ ಹಕ್ಕುಗಳನ್ನು ಪಡೆಯಲು, ತನ್ನ ಘನತೆಗೆ ಧಕ್ಕೆಯಾದಾಗ ಧನಿ ಎತ್ತಲು ಅವಕಾಶ, ಅಧಿಕಾರವನ್ನು ನೀಡಿರುವುದು ಸಂವಿಧಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ (ಕೆಎಸ್‌ಎಸ್ )ಸಂಘಟನೆ ವತಿಯಿಂದ ನಡೆದ 75ನೇ ಸಂವಿಧಾನ ಅಮೃತ ಮಹೋತ್ಸವ ಆಚರಣೆ ಮತ್ತು ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ ದಶಮಾನೋತ್ಸವದಲ್ಲಿ ಮಾತನಾಡಿದರು.

ಸಂವಿಧಾನ ಪ್ರಜ್ಞೆ ಹೆಚ್ಚಿಸಿಕೊಳ್ಳುವುದು ಮತ್ತು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ದಲಿತ ಸಮುದಾಯಕ್ಕೆ ಮಾತ್ರವೇ ಸಂವಿಧಾನ ರಚನೆಯಾಗಿದೆ ಎಂಬ ಪೂರ್ವಾಗ್ರಹ ಒಳ್ಳೆಯದಲ್ಲ ಎಂದರು.

ಸಮಾಜದ ಹಿತ ದೃಷ್ಟಿಯಿಂದ ಸಾರ್ವಜನಿಕರು, ಮಹಿಳೆಯರು, ಯುವಕರನ್ನು ಭಾರತ ದೇಶದ ಇತಿಹಾಸದತ್ತ ತಿರುಗಿಸಬೇಕಿದೆ. ಮುಂದೊಂದು ದಿನ ನಮ್ಮ ಕಾಲ ಮುಗಿಯುತ್ತದೆ. ನಮ್ಮ ಹಿಂದೆ ಬರುವಂತಹ ಹೊಸ ಪೀಳಿಗೆಗೆ ಅನಾಹುತ ಕಾದಿದೆ. ಆದ್ದರಿಂದ ಸಂವಿಧಾನದ ಪ್ರಜ್ಞೆ ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ದೇಶದ ಸಂವಿಧಾನ ಬಹಳ ಮುಖ್ಯ ಬಹುಶಃ ಎಲ್ಲಾ ಗ್ರಂಥಗಳಿಗಿಂತಲೂ ಶ್ರೇಷ್ಠವಾಗಿದೆ ಎಂದು ಪ್ರಜ್ಞಾವಂತರು ಹೇಳಿದ್ದಾರೆ. ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಪ್ರತಿಯೊಬ್ಬ ನಾಗರಿಕರಿಗೂ ಶಕ್ತಿ ತುಂಬುವ ಗ್ರಂಥ ಸಂವಿಧಾನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕರಡು ಸಮಿತಿ ಅಧ್ಯಕ್ಷ್ಯರನ್ನಾಗಿ ಮಾಡಿದ ನಂತರ ಸಂವಿಧಾನ ದಲಿತರಿಗೆ ಮಾತ್ರ ಸಂಬಂಧಪಟ್ಟದ್ದು ಎಂದು ತಿಳಿದುಕೊಳ್ಳುವುದು ತಪ್ಪಾಗುತ್ತದೆ ಎಂದರು.

ಸಮಾರಂಭವನ್ನು ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಇಂದಿನ ಸಮಾಜಕ್ಕೆ ಪುತ್ಥಳಿಯ ಬದಲಾಗಿ ಪುಸ್ತಕದ ಅಂಬೇಡ್ಕರ್, ಮೆರವಣಿಗೆ ಬದಲಾಗಿ ಬರವಣಿಗೆಯ ಅಂಬೇಡ್ಕರ್ ಬೇಕಾಗಿದೆ. ಅಂಬೇಡ್ಕರ್‌ ಅವರನ್ನು ಪೂಜಿಸುವುದಕ್ಕಿಂತ ಅವರ ಚಿಂತನೆಗಳನ್ನು ಅರಿತು ಆಚರಣೆಗೆ ತರುವುದು ಮುಖ್ಯವಾಗಿದೆ ಎಂದರು.

ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಚಿವರು ಮತ್ತು ಶಾಸಕರು, ಕಾಂಗ್ರೆಸ್ ಮುಖಂಡ ಸ್ಟಾರ್ ಚಂದ್ರು ಪುಷ್ಪಾರ್ಚನೆ ಮಾಡಿದರು. ಶಾಸಕರಾದ ಪಿ.ರವಿಕುಮಾರ್, ದಿನೇಶ್ ಗೂಳಿಗೌಡ, ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ ರಾಜ್ಯಾಧ್ಯಕ್ಷ ಎಚ್.ಎನ್. ನರಸಿಂಹಮೂರ್ತಿ, ಸಂಸ್ಥಾಪಕ ಅಧ್ಯಕ್ಷ ಡಾ. ಕುಮಾರಸ್ವಾಮಿ ಸಾಕ್ಯ, ಚಂದ್ರು, ಮೂಡಾ ಅಧ್ಯಕ್ಷ ನಹಿಮ, ನಾವು ದ್ರಾವಿಡ ಕನ್ನಡಿಗರು ಚಳುವಳಿ ಹನಕೆರೆ ಅಭಿ, ಲೇಖಕ ಎಸ್. ಸಿದ್ದಯ್ಯ, ಅಬಕಾರಿ ಅಧಿಕಾರಿ ತಿರುಮಲಾಪುರ ನಾರಾಯಣ, ಎಲ್ ಸಂದೇಶ್, ಲಕ್ಷಣ ಚೀರನಹಳ್ಳಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ