ರಾಜ್ಯದಲ್ಲಿ ಕೋಮು ನಿಗ್ರಹ ಪಡೆ ಕಾರ್ಯಾರಂಭ

KannadaprabhaNewsNetwork |  
Published : Jun 14, 2025, 12:56 AM ISTUpdated : Jun 14, 2025, 06:55 AM IST
ಮಂಗಳೂರಿನಲ್ಲಿ ವಿಶೇಷ ಕಾರ್ಯಪಡೆ ಕಚೇರಿ ಉದ್ಘಾಟಿಸುತ್ತಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್‌. | Kannada Prabha

ಸಾರಾಂಶ

ಕೋಮು ಸಂಘರ್ಷ ನಿಗ್ರಹಕ್ಕೆ ದೇಶದಲ್ಲೇ ಪ್ರಥಮ ‘ವಿಶೇಷ ಕಾರ್ಯಪಡೆ’ಯನ್ನು ಮಂಗಳೂರಿನಲ್ಲಿ ಸ್ಥಾಪಿಸಲಾಗಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಶುಕ್ರವಾರ ಇದಕ್ಕೆ ಚಾಲನೆ ನೀಡಿದ್ದಾರೆ. ಕೋಮು ಸಾಮರಸ್ಯ ಕಾಪಾಡಲು ಅಗತ್ಯ ಬಿದ್ದರೆ ಈ ಕಾರ್ಯಪಡೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಅವರು ತಿಳಿಸಿದ್ದಾರೆ.

 ಮಂಗಳೂರು :  ಕೋಮು ಸಂಘರ್ಷ ನಿಗ್ರಹಕ್ಕೆ ದೇಶದಲ್ಲೇ ಪ್ರಥಮ ‘ವಿಶೇಷ ಕಾರ್ಯಪಡೆ’ಯನ್ನು ಮಂಗಳೂರಿನಲ್ಲಿ ಸ್ಥಾಪಿಸಲಾಗಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಶುಕ್ರವಾರ ಇದಕ್ಕೆ ಚಾಲನೆ ನೀಡಿದ್ದಾರೆ. ಕೋಮು ಸಾಮರಸ್ಯ ಕಾಪಾಡಲು ಅಗತ್ಯ ಬಿದ್ದರೆ ಈ ಕಾರ್ಯಪಡೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಅವರು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯ ಹಿಂಬದಿಯ ಕಟ್ಟಡದಲ್ಲಿ ವಿಶೇಷ ಕಾರ್ಯಪಡೆಯ ಕಚೇರಿ ಉದ್ಘಾಟನೆಗೊಂಡಿತು. ಕಾರ್ಯಪಡೆಗೆ ಚಾಲನೆ ನೀಡಿ ಮಾತನಾಡಿದ ಪರಮೇಶ್ವರ್‌, ಕೋಮು ಸಂಘರ್ಷ ನಿಗ್ರಹಕ್ಕಾಗಿ ಇರುವ ದೇಶದ ಪ್ರಥಮ ವಿಶೇಷ ಕಾರ್ಯಪಡೆ ಇದು. ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಸಂಘರ್ಷ ಮಟ್ಟಹಾಕಲು ಈ ವಿಶೇಷ ಕಾರ್ಯಪಡೆ ಆರಂಭಿಸಲಾಗಿದೆ. ಅವಶ್ಯಕತೆ ಬಿದ್ದರೆ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದರು.ಎಎನ್‌ಎಫ್‌ ಮಾದರಿಯ ಪಡೆ:

ಪ್ರಸ್ತುತ ರಾಜ್ಯದಲ್ಲಿ ನಕ್ಸಲರು ಬಹುತೇಕ ಇಲ್ಲದಿರುವುದರಿಂದ ನಕ್ಸಲ್‌ ನಿಗ್ರಹ ಪಡೆಯಲ್ಲಿನ ನುರಿತ ಸಿಬ್ಬಂದಿಯನ್ನು ಒಳಗೊಂಡು ಅದೇ ಶೈಲಿಯಲ್ಲಿ ಈ ಕಾರ್ಯಪಡೆಯ ರೂಪುರೇಷೆ ರಚಿಸಲಾಗಿದೆ. ಕೋಮು ವಿಚಾರಧಾರೆಗಳನ್ನು ಪ್ರಚೋದಿಸುವುದು, ದ್ವೇಷ ಭಾಷಣ, ಸಹೋದರತೆಯ ಭಾವನೆ ಕೆಡಿಸುವ ಜನಸಮುದಾಯವನ್ನು ಕಠಿಣವಾಗಿ ಹತ್ತಿಕ್ಕುವ ಕೆಲಸವನ್ನು ಈ ಕಾರ್ಯಪಡೆಗೆ ನೀಡಲಾಗಿದೆ. ದ.ಕ.ದಲ್ಲಿ ಕೋಮು ಪ್ರಚೋದನೆಯ ಚಟುವಟಿಕೆಗಳನ್ನು ಇಷ್ಟು ದಿನ ಸಾಫ್ಟ್‌ ಆಗಿ ನಿರ್ವಹಿಸಿದ್ದೆವು. ಆದರೆ, ಸಂಬಂಧಿಸಿದವರು ಅದನ್ನು ಕಿವಿಗೇ ಹಾಕಿಕೊಂಡಿಲ್ಲ. ಹಾಗಾಗಿ ಬಲಪ್ರಯೋಗದ ಮೂಲಕ ನಿಗ್ರಹಿಸುವ ಸಮಯ ಬಂದಿದೆ. ಈ ಪಡೆ 248 ಸಿಬ್ಬಂದಿ ಬಲದೊಂದಿಗೆ ಮೂರು ತುಕಡಿಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಅಗತ್ಯ ಬಿದ್ದರೆ ಸಂಖ್ಯಾಬಲ ಹೆಚ್ಚಿಸುವುದಾಗಿ ಡಿಜಿ ತಿಳಿಸಿದ್ದಾರೆ ಎಂದು ಹೇಳಿದರು.ಎಎನ್‌ಎಫ್‌ ವಿಸರ್ಜನೆ ಇಲ್ಲ:

ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿದ್ದ ನಕ್ಸಲರು ಶರಣಾಗತರಾಗಿರುವುದರಿಂದ ನಕ್ಸಲ್‌ ನಿಗ್ರಹ ಪಡೆಯ ಅಗತ್ಯ ಸದ್ಯಕ್ಕಿಲ್ಲ. ಆದರೆ, ಯಾವುದಾದರೂ ಸಂದರ್ಭದಲ್ಲಿ ಬೇಕಾಗುತ್ತದೆ ಎಂಬ ನೆಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆಯನ್ನು ವಿಸರ್ಜನೆ ಮಾಡುವುದಿಲ್ಲ. ಒಡಿಶಾ, ಅಸ್ಸಾಂ ಮತ್ತಿತರ ಕಡೆಗಳಲ್ಲಿ ನಕ್ಸಲ್‌ ಚಟುವಟಿಕೆ ಇನ್ನೂ ಇದೆ. ಅಲ್ಲಿಂದ ಇಲ್ಲಿಗೆ ಬರುವ ಸಾಧ್ಯತೆಯೂ ಇರಬಹುದು. ಅಂತಹ ಸಂದರ್ಭ ಬಂದರೆ ತಯಾರಿರಬೇಕಾಗುತ್ತದೆ. ಆದ್ದರಿಂದ ನಕ್ಸಲ್‌ ನಿಗ್ರಹ ಪಡೆಯ ಸ್ವಲ್ಪ ಭಾಗವನ್ನು ಹಾಗೆಯೇ ಇರಿಸಿಕೊಳ್ಳಲಾಗಿದೆ ಎಂದರು.

ದ.ಕ. ಜಿಲ್ಲೆಯಲ್ಲಿ ನಡೆದ ಅಬ್ದುಲ್‌ ರಹೀಂ ಮತ್ತು ಅಶ್ರಫ್‌ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ಸತ್ಯಾಂಶ ಗೊತ್ತಾಗಲಿದೆ ಎಂದರು. ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರಕ್ಕೆ ಯಾವುದಾದರೂ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಪಡೆಯುವ ಅಧಿಕಾರವಿದೆ. ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಯಾಕೆ ನಿರ್ದಿಷ್ಟವಾಗಿ ಆ ಕೇಸನ್ನು ಮಾತ್ರ ಎನ್‌ಐಎಗೆ ಕೇಳಿದ್ದಾರೆ ಎಂಬುದು ಗೊತ್ತಿಲ್ಲ. ರಹೀಂ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲು ಕೇಂದ್ರ ಸರ್ಕಾರ ಕೇಳಿಲ್ಲ. ನಮ್ಮ ಪೊಲೀಸರು ತನಿಖೆ ನಡೆಸಲು ಸಮರ್ಥರಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಪ್ರತಿ ಪಿ.ಸಿ.ಗೂ ಸೈಬರ್‌ ತರಬೇತಿ:  ಹೆಚ್ಚುತ್ತಿರುವ ಸೈಬರ್‌ ಅಪರಾಧ ನಿಗ್ರಹಿಸಲು ರಾಜ್ಯದ ಪ್ರತಿ ಪೊಲೀಸ್‌ ಕಾನ್‌ಸ್ಟೇಬಲ್‌ಗೂ ತರಬೇತಿ ನೀಡಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಈಗಾಗಲೇ ಎಲ್ಲ ಎಸ್ಪಿ ಕಚೇರಿಗಳಲ್ಲಿ ತರಬೇತಿ ಯೂನಿಟ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಕಾನ್‌ಸ್ಟೇಬಲ್‌ಗಳಿಗೆ ತಾಂತ್ರಿಕ ತರಬೇತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.2015ರಲ್ಲಿ ನಾನು ಗೃಹ ಸಚಿವನಾಗಿದ್ದಾಗ ಪೊಲೀಸ್‌ ಗೃಹ ಯೋಜನೆ ಆರಂಭಿಸಿದ್ದೆ. ಈಗ ಶೇ.40ರಷ್ಟು ಪೊಲೀಸ್‌ ಸಿಬ್ಬಂದಿ ವಸತಿ ಗೃಹಗಳನ್ನು ಹೊಂದಿದ್ದಾರೆ. ಎಲ್ಲರಿಗೂ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!