ಕೋಮು ಗಲಭೆ ನಡೆದರೆ ಬದುಕು ಕಷ್ಟ, ಯುವಜನರ ಭವಿಷ್ಯಕ್ಕೆ ಮಾರಕ: ನವೀನ್‌ ಪಡೀಲ್‌

KannadaprabhaNewsNetwork |  
Published : May 29, 2025, 12:07 AM IST
ನವೀನ್‌ ಪಡೀಲ್‌ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಂಗಳೂರು ಪ್ರೆಸ್‌ ಕ್ಲಬ್‌ ವತಿಯಿಂದ ಮಂಗಳವಾರ ನಡೆದ ಪ್ರೆಸ್‌ ಕ್ಲಬ್‌ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ರನಟ ನವೀನ್‌ ಡಿ. ಪಡೀಲ್‌, ಮಂಗಳೂರಿನ ಸೌಹಾರ್ದತೆ ಉಳಿಯಬೇಕು. ಕೋಮು ದ್ವೇಷ ಅಳಿಯಬೇಕು ಎಂಬ ಹಿನ್ನೆಲೆಯಲ್ಲಿ ಸೌಹಾರ್ದತೆಗೆ ಸಂಬಂಧಿಸಿದ ‘ನೆರೆ ಕರೆ’ ಚಿತ್ರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಸೌಹಾರ್ದತೆ ಉಳಿಯಬೇಕು. ಕೋಮು ದ್ವೇಷ ಅಳಿಯಬೇಕು ಎಂಬ ಹಿನ್ನೆಲೆಯಲ್ಲಿ ಸೌಹಾರ್ದತೆಗೆ ಸಂಬಂಧಿಸಿದ ‘ನೆರೆ ಕರೆ’ ಚಿತ್ರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತುಳು ರಂಗಭೂಮಿ ಹಾಗೂ ಚಿತ್ರನಟ ನವೀನ್‌ ಡಿ. ಪಡೀಲ್‌ ಹೇಳಿದ್ದಾರೆ.

ಮಂಗಳೂರು ಪ್ರೆಸ್‌ ಕ್ಲಬ್‌ ವತಿಯಿಂದ ಮಂಗಳವಾರ ನಡೆದ ಪ್ರೆಸ್‌ ಕ್ಲಬ್‌ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೌಹಾರ್ದತೆಯ ಈ ಸಿನೆಮಾಕ್ಕೆ ಶಶಿರಾಜ್‌ ರಾವ್‌ ಕಾವೂರು ಕಥೆ, ಸಂಭಾಷಣೆ ಬರೆದಿದ್ದಾರೆ ಎಂದರು.

ಮಂಗಳೂರು ಬುದ್ಧಿವಂತರ ಊರು ನಿಜ. ಆದರೆ ಕೋಮು ಗಲಭೆ ಮುಂದುವರಿದರೆ ಇಲ್ಲಿ ಬದುಕೇ ಕಷ್ಟವಾಗಬಹುದು. ಯುವ ಜನರ ಭವಿಷ್ಯ ಮಾರಕವಾಗಬಹುದು. ಆದ್ದರಿಂದ ಈಗ ಇರುವ ಗೊಂದಲದ ವಾತಾವರಣ ಸರಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನವೀನ್‌ ಪಡೀಲ್‌ ಹೇಳಿದರು.

ಓಟಿನ ರಾಜಕೀಯದಿಂದಾಗಿ ಅಮಾಯಕರು ಸಾಯುವುದು ನಿಲ್ಲಬೇಕು ಎಂದು ಹೇಳಿದ ಅವರು, ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರೂ ಹೊಂದಾಣಿಕೆಯಿಂದ ಬದುಕಿದರೆ ಯಾವುದೇ ಸಮಸ್ಯೆ ಇಲ್ಲ ಎಂದು ಕಿವಿಮಾತು ಹೇಳಿದರು.

ನನ್ನಲ್ಲಿರುವ ಕಲಾ ಪ್ರತಿಭೆಯ ಬೆಳವಣಿಗೆಗೆ ಎಲ್ಲ ಜಾತಿ, ಧರ್ಮದವರು ಸಹಕಾರ ನೀಡಿದ್ದಾರೆ. ನಾನು ಶಿಕ್ಷಣ ಪಡೆದದ್ದು ಕಡಿಮೆಯಾದರೂ ಎಲ್ಲರೊಂದಿಗೆ ಬೆರೆಯುತ್ತ ಬೆಳೆದ ಕಾರಣದಿಂದ ಉತ್ತಮ ಸಂಸ್ಕಾರ ನನ್ನಲ್ಲಿ ಬೆಳೆಯಿತು. 7ನೇ ತರಗತಿಯಲ್ಲಿದ್ದಾಗಲೇ ಸಾಂತಾಕ್ಲಾಸ್‌ ಪಾತ್ರದ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಂಡೆ. ಇದು ನನ್ನಲ್ಲಿ ಧೈರ್ಯ ತುಂಬಿತು. ಮುಂದೆ ನಾಟಕದ ಸಣ್ಣ ಪಾತ್ರಗಳನ್ನು ಮಾಡುತ್ತಾ ಆ ಮೂಲಕ ದೊಡ್ಡ ನಾಟಕ ತಂಡಗಳ ಪರಿಚಯವಾಯ್ತು. ವಿಜಯಕುಮಾರ್‌ ಕೊಡಿಯಾಲಬೈಲ್‌ ಅವರ ‘ಒಂಜಿ ನಿಮಿಷ’ ನಾಟಕದಲ್ಲಿ ಕೃಷ್ಣಪ್ಪನ ಪಾತ್ರವು ಜನರನ್ನು ತಲುಪಿತು. ಆಗ ನನಗೆ ಕೇವಲ 20ರ ಹರೆಯ ಎಂದು ಆ ದಿನಗಳನ್ನು ನೆನಪಿಸಿಕೊಂಡರು ಪಡೀಲ್‌.

ಪತ್ರಕರ್ತ ಜಗನ್ನಾಥ ಶೆಟ್ಟಿಬಾಳ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ.ಹರೀಶ್‌ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್‌., ಮಂಗಳೂರು ಪ್ರೆಸ್‌ ಕ್ಲಬ್‌ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಮಾಜಿ ಅಧ್ಯಕ್ಷ ಅನ್ನು ಮಂಗಳೂರು ಇದ್ದರು. ಪ್ರೆಸ್‌ ಕ್ಲಬ್‌ ಕಾರ್ಯದರ್ಶಿ ಪುಷ್ಪರಾಜ್‌ ಬಿಎನ್‌ ವಂದಿಸಿದರು, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ನಿರೂಪಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ