ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಕೆಲಕಾಲ ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು, ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿ ತಾಲೂಕು ಆಡಳಿತಸೌಧಕ್ಕೆ ಆಗಮಿಸಿದರು.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಜಯಕುಮಾರ್ ಸಾವಿನ ಪ್ರಕರಣ ಕುರಿತು ಸಮಗ್ರ ತನಿಖೆ ಮಾಡಬೇಕು. ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ಜೊತೆಗೆ ಆತನ ಪತ್ನಿಗೆ ಒಂದು ಸರ್ಕಾರಿ ನೌಕರಿ ನೀಡುವಂತೆ ಆಗ್ರಹಿಸಿದರು.ದಲಿತ ಯುವಕ ಜಯಕುಮಾರ್ ಅವರದ್ದು ಆತ್ಮಹತ್ಯೆಯಲ್ಲ. ಅದೊಂದು ಕೊಲೆ. ಕತ್ತರಘಟ್ಟದ ಅನಿಲ್ ಕುಮಾರ್ ಜಯಕುಮಾರ್ ಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಅನಿಲ್ ಕುಮಾರ್ ಒಬ್ಬ ರೌಡಿಶೀಟರ್ ಆಗಿದ್ದು ಆತನ ವಿರುದ್ಧ ದೂರು ನೀಡಿದ ಮರುದಿನವೇ ಜಯಕುಮಾರ್ ಅವರ ಶವ ಅರೆಬೆಂದ ಸ್ಥಿತಿಯಲ್ಲಿ ಸಿಕ್ಕಿದೆ ಎಂದು ಆರೋಪಿಸಿದರು.
ಜಯಕುಮಾರ್ ಸಾವನ್ನು ಆತ್ಮಹತ್ಯೆ ಪ್ರಕರಣ ಎಂದು ಕೇಸು ದಾಖಲಿಸಿ ಕರ್ತವ್ಯ ಲೋಪ ಎಸಗಿರುವ ಪೊಲೀಸರನ್ನು ಅಮಾನತು ಮಾಡಬೇಕು. ಆತನ ಕುಟುಂಬಕ್ಕೆ ಸರ್ಕಾರಿ ಭೂಮಿ ಮಂಜೂರು, ಪತ್ನಿಗೆ ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರು. ನೀಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಛಲವಾದಿ ಮಠದ ಬಸವನಾಗದೇವ ಸ್ವಾಮೀಜಿ, ರಾಜ್ಯ ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೂಡು, ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ರೈತ ಮುಖಂಡ ಎಂವಿ.ರಾಜೇಗೌಡ, ವಿವಿಧ ಸಂಘಟನೆಗಳ ಮುಖಂಡರಾದ ಚಂದ್ರಹಾಸ, ಅಭಿಗೌಡ, ಜಯರಾಜ್, ವಕೀಲೆ ಚೈತ್ರಾ, ರಮಾನಂದ ಬಸ್ತಿರಂಗಪ್ಪ, ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್, ಬಸ್ತಿ ಪ್ರದೀಪ್, ಬಿ.ರಾಜಯ್ಯ, ಹೊಸಹೊಳಲು ಪುಟ್ಟರಾಜು, ಕಮಲಾಕ್ಷಿ, ಲಕ್ಷ್ಮೀರಾಜು ಸೇರಿದಂತೆ ಹಲವರು ಇದ್ದರು.