ಪೌರ ನೌಕರರ ಬೇಡಿಕೆಗಳಿಗೆ ಸ್ಪಂದಿಸುವಂತೆ ಒತ್ತಾಯ

KannadaprabhaNewsNetwork |  
Published : May 29, 2025, 12:06 AM IST
28ಜಿಡಿಜಿ4 | Kannada Prabha

ಸಾರಾಂಶ

ರಾಜ್ಯಾದ್ಯಂತ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸುತ್ತಿರುವ ಪೌರ ನೌಕರರ ಪ್ರತಿಭಟನೆ ಗದಗ ನಗರಸಭೆಯ ಮುಂಭಾಗದಲ್ಲಿಯೂ ನಡೆಸುತ್ತಿದ್ದು, ಬುಧವಾರದ ಪ್ರತಿಭಟನೆಯ ವೇಳೆಯಲ್ಲಿ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ನೇತೃತ್ವದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

ಗದಗ: ರಾಜ್ಯಾದ್ಯಂತ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸುತ್ತಿರುವ ಪೌರ ನೌಕರರ ಪ್ರತಿಭಟನೆ ಗದಗ ನಗರಸಭೆಯ ಮುಂಭಾಗದಲ್ಲಿಯೂ ನಡೆಸುತ್ತಿದ್ದು, ಬುಧವಾರದ ಪ್ರತಿಭಟನೆಯ ವೇಳೆಯಲ್ಲಿ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಅವರ ನೇತೃತ್ವದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೆಂಕನಗೌಡ ಗೋವಿಂದಗೌಡ್ರ, ಪೌರ ನೌಕರರ ಬೇಡಿಕೆಗಳು ನ್ಯಾಯಯುಕ್ತವಾಗಿದ್ದು, ಅವುಗಳನ್ನು ರಾಜ್ಯ ಸರ್ಕಾರ ತ್ವರಿತವಾಗಿ ಈಡೇರಿಸಬೇಕು. ಸ್ಥಳೀಯ ಸಂಸ್ಥೆಗಳಿಗೆ ಪ್ರಶಸ್ತಿಗಳು ಸಿಕ್ಕಾಗ ಮಾತ್ರ ಚುನಾಯಿತ ಪ್ರತಿನಿಧಿಗಳು ಅದರಿಂದ ಹೆಸರನ್ನು ಪಡೆಯುತ್ತಾರೆ. ರೋಗ-ರುಜಿನಗಳಿಗೆ ಎದೆ ಕೊಟ್ಟು ನಿಂತು ನಗರವಾಸಿಗಳಿಗೆ ಶುಚಿತ್ವ ಕೊಡುತ್ತಿರುವ ಪೌರಕಾರ್ಮಿಕರಿಗೆ, ಲೋಡರ್ಸ್, ಕ್ಲೀನರ್, ಸ್ಯಾನಿಟರಿ ಸೂಪರ್‌ವೈಸರ್‌ ಹಾಗೂ ಪರಿವಾರಕ್ಕೆ ಆರೋಗ್ಯ ಹಾಗೂ ಜೀವ ರಕ್ಷಣೆಯ ಸೌಲಭ್ಯ ರಾಜ್ಯ ಸರ್ಕಾರ ನೀಡಬೇಕು. ಎಲ್ಲರಿಗಿಂತ ಹೆಚ್ಚಿನ ಆಪತ್ತಿನ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಸಿಗುವಂತಾಗಬೇಕು. ಈ ಮುಷ್ಕರಕ್ಕೆ ಹಾಗೂ ನ್ಯಾಯಯುತ ಬೇಡಿಕೆಗಳಿಗೆ ಜೆಡಿಎಸ್ ಸದಾ ಬೆಂಬಲಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ, ನಗರಸಭೆಯ ಮಾಜಿ ಸದಸ್ಯ ಎಂ.ಎಸ್. ಪರ್ವತಗೌಡರ, ಪೌರ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವುಗಳ ಈಡೇರಿಕೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು, ಬೇಡಿಕೆ ಈಡೇರುವ ವರೆಗೂ ಮುಷ್ಕರ ಹಿಂದೆ ಪಡೆಯಬಾರದು, ಕೇವಲ ಭರವಸೆ ನಂಬಿ ಇಟ್ಟ ಹೆಜ್ಜೆ ಹಿಂದಕ್ಕೆ ಪಡೆಯಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೌರ ಕಾರ್ಮಿಕರು, ಸಂಘಟನೆಗಳ ಮುಖಂಡರು, ಜೆಡಿಎಸ್ ನಿಯೋಗದಲ್ಲಿ ರಮೇಶ ಹುಣಸಿಮರದ, ಸಂತೋಷ ಪಾಟೀಲ, ಪ್ರಫುಲ ಪುಣೇಕರ, ಬಸವರಾಜ ಅಪ್ಪಣ್ಣವರ, ಜೋಸೆಫ ಉದೋಜಿ ಹಾಗೂ ಅನೇಕ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌