ಹೊಸಪೇಟೆ: ಕೋಮುವಾದ ಕೇವಲ ಧಾರ್ಮಿಕ ಸಂಘರ್ಷಕ್ಕೆ ಸೀಮಿತವಾಗದೆ ರಾಜಕೀಯ ಅಧಿಕಾರ ಪಡೆಯುವ ಸಾಧನವಾಗಿ ಬಳಸಲ್ಪಡುತ್ತಿದೆ. ರಾಜಕೀಯ ಅಧಿಕಾರದ ಮೂಲಕ ಆರ್ಥಿಕ ಸಂಪತ್ತನ್ನು ಕೆಲವೇ ಹಿತಾಸಕ್ತಿಗಳಲ್ಲಿ ಕೇಂದ್ರೀಕರಿಸುವ ಪ್ರಯತ್ನ ನಡೆಯುತ್ತಿದೆ. ಇದು ಆಂತಕಕಾರಿ ಸಂಗತಿಯಾಗಿದೆ ಎಂದು ಸಿಪಿಐಎಂ ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಡಾ.ಕೆ. ಪ್ರಕಾಶ್ ಹೇಳಿದರು.
ದೇಶದ ನೈಸರ್ಗಿಕ ಸಂಪನ್ಮೂಲ ಕೆಲವೇ ದೊಡ್ಡ ಬಂಡವಾಳಶಾಹಿಗಳ ನಿಯಂತ್ರಣಕ್ಕೆ ಹೋದರೆ ದೇಶದ ಆರ್ಥಿಕ ಸಂಪತ್ತಿನ ಕೇಂದ್ರೀಕರಣಕ್ಕೆ ಕಾರಣವಾಗಲಿದೆ. ಮಂಗಳೂರು ವಿಮಾನ ನಿಲ್ದಾಣದ ಖಾಸಗೀಕರಣ, ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ವಿದ್ಯುತ್ ವಿತರಣಾ ಕ್ಷೇತ್ರ ಸೇರಿದಂತೆ ಸಾರ್ವಜನಿಕ ವಲಯದ ವಿವಿಧ ಕ್ಷೇತ್ರಗಳಲ್ಲಿ ಖಾಸಗಿ ಸಂಸ್ಥೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತಿದೆ. ಇದೇ ರೀತಿ ಎಫ್‌ಸಿಐನ ಧಾನ್ಯ ಸಂಗ್ರಹಣಾ ಗೋದಾಮುಗಳ ನಿರ್ವಹಣೆಯಲ್ಲಿ ಖಾಸಗಿ ಕಂಪನಿಗಳ ನಿರ್ವಹಣೆಗೆ ಮುಂದಾಗಿದ್ದಾರೆ.
ಧರ್ಮ, ಜಾತಿ ಹಾಗೂ ಕೋಮುವಾದದ ವಿಚಾರಗಳ ಸುತ್ತ ಯುವಜನರನ್ನು ಕೇಂದ್ರೀಕರಿಸುವ ಬದಲು, ಎಲ್ಲರಿಗೂ ಉದ್ಯೋಗ, ಗುಣಮಟ್ಟದ ಶಿಕ್ಷಣ, ಆರೋಗ್ಯ ಮತ್ತು ವಸತಿ ದೊರೆಯುವ ಕುರಿತು ಪ್ರಶ್ನೆ ಕೇಳುವ ಅಗತ್ಯವಿದೆ. ಕೋಮುವಾದದ ಮೂಲಕ ಜನರನ್ನು ವಿಭಜಿಸುವ ರಾಜಕಾರಣಕ್ಕಿಂತ ಜನರ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳೇ ಪ್ರಮುಖ ಚರ್ಚೆಯಾಗಬೇಕು ಎಂದು ಹೇಳಿದರು.ಹಿರಿಯ ವಕೀಲ ಕೆ.ಜಂಬಣ್ಣ ವಿಚಾರ ಸಂಕಿರಣ ಉದ್ಘಾಟಿಸಿ ಸಭೆಯಲ್ಲಿ ಮಾತನಾಡಿದರು.