ಕನ್ನಡಪ್ರಭ ವಾರ್ತೆ ಶಿರಾ ಶಿಕ್ಷಣವೇ ಎಲ್ಲಾ ಅಭಿವೃದ್ಧಿಗೆ ಮೂಲ ಕಾರಣವಾಗಿದ್ದು, ಪೋಷಕರೂ ಸಹ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ.ಜಿ ಹೇಳಿದರು. ಅವರು ಗುರುವಾರ ನಗರದ ರಂಗನಾಥ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಅಲೆಮಾರಿ ಜನಾಂಗ ಪದವಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕೆ.ಎ.ಎಸ್, ಐ.ಎ.ಎಸ್. ಪರೀಕ್ಷೆಗೆ ತಯಾರಿ ನಡೆಸಲು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯಲು ಸೌಲಭ್ಯ ನೀಡಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಾಂಗದವರು ಶಿಕ್ಷಣವಂತರಾಗಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಹಲವಾರು ಸವಲತ್ತುಗಳಿದ್ದು, ಪೋಷಕರು ಇಲಾಖೆಗೆ ಭೇಟಿ ನೀಡಿ ಸವಲತ್ತು ಪಡೆಯಬಹುದು. ೬ನೇ ತರಗತಿಯಿಂದ ಪಿಯುಸಿವರೆಗೆ ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆ ನೇರವಾಗಿ ವಸತಿ ಶಾಲೆಗಳಿಗೆ ದಾಖಲಾತಿ ಮಾಡುವ ಸೌಲಭ್ಯ ಇದೆ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಸುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಉಚಿತ ಊಟ, ವಸತಿ, ಸಮವಸ್ತ್ರ, ವೈದ್ಯಕೀಯ ಸೌಲಭ್ಯ, ಪಠ್ಯಪುಸ್ತಕ ಸೇರಿದಂತೆ ಹಲವು ಸೌಲಭ್ಯಗಳಿವೆ. ಇಷ್ಟೆಲ್ಲಾ ಅನುಕೂಲಗಳಿದ್ದರೂ ಪೋಷಕರು ದಾಖಲಾತಿಗೆ ನಿರಾಸಕ್ತಿ ತೋರಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಸಂಬಂಧಿಸಿದ ವಿದ್ಯಾರ್ಥಿ ನಿಲಯಗಳಿಗೆ ಸೇರಿಸಲು ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ರಂಗನಾಥ ನಗರದ ಪರವಾಗಿ ಕಾಂಗ್ರೆಸ್ ಮುಖಂಡ ಅಪ್ಪಿ ರಂಗನಾಥ್ ಅವರು ಸನ್ಮಾನಿಸಿದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ತಾಲೂಕು ಸಹಾಯಕ ನಿರ್ದೇಶಕ ವಿ.ಕೆ.ಬಡಿಗೇರ, ಗ್ರೇಡ್-೨ ತಹಶೀಲ್ದಾರ್ ನಾಗರಾಜು, ನಿಲಯ ಮೇಲ್ವಿಚಾರಕ ಹನುಮಂತರಾಜು, ಇಸಿಒ ಮಂಜಪ್ಪ, ತಾಪಂ ಯೋಜನಾಧಿಕಾರಿ ರಂಗನಾಥ್, ನಗರಸಭೆ ಸಿಬ್ಬಂದಿ ಶ್ರೀನಿವಾಸ್, ರಂಗನಾಥ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಟಿ.ರಂಗನಾಥ್, ಶಿಕ್ಷಕಿ ಗೀತಾ, ಅಂಗನವಾಡಿ ಶಿಕ್ಷಕಿ ರೂಪ, ಸಾವಿತ್ರಮ್ಮ, ಬೆಸ್ಕಾ ಸಲಹಾ ಸಮಿತಿ ಸದಸ್ಯ ಲೋಕೇಶ್, ನವೋದಯ ವೇದಿಕೆ ಅಧ್ಯಕ್ಷ ಜಯರಾಮಕೃಷ್ಣ, ಮುಖಂಡರಾದ ಶಿವಣ್ಣ ಸೇರಿದಂತೆ ಹಲವರು ಹಾಜರಿದ್ದರು.