ಡೋಂಗಿ ದಲಿತ ನಾಯಕರ ಬಗ್ಗೆ ಸಮುದಾಯದವರು ಎಚ್ಚರಿಕೆಯಿಂದಿರಬೇಕು: ಉಮೇಶ್

KannadaprabhaNewsNetwork | Published : Dec 29, 2024 1:20 AM

ಸಾರಾಂಶ

ಈ ಸ್ವಯಂ ಘೋಷಿತ ದಲಿತ ನಾಯಕರೆನಿಸಿಕೊಂಡವರ ಹಿನ್ನೆಲೆಯಾದರೂ ಏನು? ಕಂಬಾಲಹಳ್ಳಿ ನರಮೇಧ ನಡೆದಾಗ ಇವರು ಎಲ್ಲಿದ್ದರು? ಇದುವರೆಗೂ ಯಾವೊಂದು ಪ್ರತಿಭಟನೆಗಳಲ್ಲಿಯೂ ಭಾಗವಹಿಸದ ಇವರು ಇಂದು ಹಠಾತ್ತನೇ ಬಾಬಾ ಸಾಹೇಬರ ಪುತ್ಥಳಿ ಹೆಸರು ಬಳಸಿಕೊಂಡು ಪ್ರತಿಭಟನೆಯ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ. ಇವರು ಇದುವರೆಗೂ ಎಷ್ಟು ಹೋರಾಟಗಳಲ್ಲಿ ಭಾಗವಹಿಸಿ ದಲಿತರಿಗೆ ನ್ಯಾಯ ಕೊಡಿಸಿದ್ದಾರೆಂದು ಸ್ಪಷ್ಟೀಕರಣ ನೀಡಲೆಂದು ಸವಾಲೆಸೆದಿದ್ದಾರೆ.

ಚಿಂತಾಮಣಿ: ಅರೆಬೆತ್ತಲೆ ಪ್ರತಿಭಟನೆ ಮಾಡುತ್ತಿದ್ದ ನಮ್ಮ ಅಣ್ಣ- ತಮ್ಮಂದಿರೊಂದಿಗೆ (ದಲಿತರ) ಅರೆಬೆತ್ತಲೆ ಹೋರಾಟಕ್ಕೆ ಮುಂದೆ ಬಾರದೆ ಪ್ರತಿಭಟನೆ ಮುಗಿದ ನಂತರ ಇನ್‌ಶರ್ಟ್ ಮಾಡಿಕೊಂಡು ಜರ್ಕಿನ್ ಧರಿಸಿ ಟಿಪ್‌ಟಾಪಾಗಿ ಹೋರಾಟಗಾರರ ಮಧ್ಯೆ ಬಂದು ಪತ್ರಿಕಾ ಹೇಳಿಕೆ ಕೊಡುವ ಸ್ವಯಂಘೋಷಿತ ಡೋಂಗಿ ದಲಿತ ನಾಯಕರೆನಿಸಿರುವ ಭಾವ- ಭಾಮೈದುನರ ಬಗ್ಗೆ ಎಚ್ಚರದಿಂದಿರುವಂತೆ ಕಾಂಗ್ರೆಸ್ ಮುಖಂಡ ಉಮೇಶ್ ಹೇಳಿದರು.

ದಲಿತರ ಮಧ್ಯೆ ಒಡಕುಂಟು ಮಾಡಿ ತಮ್ಮ ರಾಜಕೀಯ ತೆವಲಿಗಾಗಿ ಬೇಳೆ ಬೇಯಿಸಿಕೊಳ್ಳಲು ಸ್ವಯಂ ಘೋಷಿತ ಕೆಲ ಡೋಂಗಿ ದಲಿತ ನಾಯಕರು ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿದ್ದಾರೆಂದು ಉಮೇಶ್ ಕುಟುಕಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಸ್ವಯಂ ಘೋಷಿತ ದಲಿತ ನಾಯಕರೆನಿಸಿಕೊಂಡವರು ಸರ್ಕಾರಿ ಶಾಲೆಯ ಆವರಣದಲ್ಲಿ ಏನೂ ವ್ಯವಸ್ಥೆ ಇಲ್ಲದಂಥ ಪ್ರದೇಶದಲ್ಲಿಡುವಂತಹ ಪ್ರಮೇಯವಾದರೂ ಏನು? ಇದರ ಹಿಂದೆ ಕಾಣದ ರಾಜಕೀಯ ಕೈಗಳು ಕೆಲಸ ಮಾಡುತ್ತಿವೆಯೆಂದು ದೂರಿದ್ದಾರೆ.

ಸಂಘಟನೆಗಳನ್ನು ಕಟ್ಟಿದಂತಹ ಮುಂಚೂಣಿ ದಲಿತ ನಾಯಕರ ಸಹಕಾರವೂ ಇಲ್ಲದೆ ಅಂಬೇಡ್ಕರ್ ಪುತ್ಥಳಿಯನ್ನು ರಾತ್ರೋರಾತ್ರಿ ಕದ್ದು ಮುಚ್ಚಿ ಪ್ರತಿಷ್ಠಾಪನೆ ಮಾಡುವ ಉದ್ದೇಶವಾದರೂ ಏನಿತ್ತೆಂದು ಪ್ರಶ್ನಿಸಿದ್ದಾರೆ.

ಈ ಸ್ವಯಂ ಘೋಷಿತ ದಲಿತ ನಾಯಕರೆನಿಸಿಕೊಂಡವರ ಹಿನ್ನೆಲೆಯಾದರೂ ಏನು? ಕಂಬಾಲಹಳ್ಳಿ ನರಮೇಧ ನಡೆದಾಗ ಇವರು ಎಲ್ಲಿದ್ದರು? ಇದುವರೆಗೂ ಯಾವೊಂದು ಪ್ರತಿಭಟನೆಗಳಲ್ಲಿಯೂ ಭಾಗವಹಿಸದ ಇವರು ಇಂದು ಹಠಾತ್ತನೇ ಬಾಬಾ ಸಾಹೇಬರ ಪುತ್ಥಳಿ ಹೆಸರು ಬಳಸಿಕೊಂಡು ಪ್ರತಿಭಟನೆಯ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ. ಇವರು ಇದುವರೆಗೂ ಎಷ್ಟು ಹೋರಾಟಗಳಲ್ಲಿ ಭಾಗವಹಿಸಿ ದಲಿತರಿಗೆ ನ್ಯಾಯ ಕೊಡಿಸಿದ್ದಾರೆಂದು ಸ್ಪಷ್ಟೀಕರಣ ನೀಡಲೆಂದು ಸವಾಲೆಸೆದಿದ್ದಾರೆ.

ಈ ಡೋಂಗಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಒಂದು ಟ್ರಸ್ಟನ್ನು ಮಾಡಿಕೊಂಡು ಅದರಲ್ಲಿ ಬರುವಂತಹ ಹಣದಲ್ಲಿ ಸ್ವಲ್ಪಮಟ್ಟಿಗೆ ಕೆಲಸಗಳನ್ನು ಮಾಡಿ ಉಳಿದಂತಹ ಹಣವನ್ನು ದಲಿತರ ಹೆಸರಲ್ಲಿ ಲಪಟಾಯಿಸುತ್ತಿದ್ದಾರೆಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ ಎಂದು ಕಿಡಿಕಾರಿದ್ದಾರೆ.

Share this article