ಬೆಳ್ತಂಗಡಿ: ಮಂಗಳೂರಿನ ಉರ್ವ ಮಾರ್ಕೆಟ್ ನ ನಾಟ್ಯಾರಾಧನಾ ಕಲಾ ಕೇಂದ್ರದ ನಿರ್ದೇಶಕಿ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ಶಿಷ್ಯೆಯರಾದ ಧರಿತ್ರಿ ಭಿಡೆ ಹಾಗೂ ಹಂಸಿನಿ ಭಿಡೆ ಅವರ ಭರತನೃತ್ಯ ರಂಗಪ್ರವೇಶ 21ರಂದು ನಡೆಯಲಿದೆ.

ಬೆಳ್ತಂಗಡಿಯ ಕಲ್ಮಂಜದ ನಿವಾಸಿ, ಉಜಿರೆಯ ಪತ್ರಿಕಾ ವಿತರಕ ಧನಂಜಯ ಭಿಡೆ ಹಾಗೂ ಚಿತ್ರಾ ಭಿಡೆ ದಂಪತಿಯ ಪುತ್ರಿಯರಾದ ಧರಿತ್ರಿ ಭಿಡೆ ಹಾಗೂ ಹಂಸಿನಿ ಭಿಡೆ ರಂಗ ಪ್ರವೇಶ ಕಾರ್ಯಕ್ರಮ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿದ್ದು ಸಂಜೆ 4.30 ಆರಂಭವಾಗುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಭಿನವ ಡಾನ್ಸ್ ಕಂಪೆನಿಯ ಕಲಾತ್ಮಕ ನಿರ್ದೇಶಕ ನಿರುಪಮಾ ಮತ್ತು ರಾಜೇಂದ್ರ ಟಿ.ಡಿ, ಸುರತ್ಕಲ್‌ನ ನಾಟ್ಯಾಂಜಲಿ ಕಲಾ ಅಕಾಡೆಮಿ ಗುರು ವಿದ್ವಾನ್ ಚಂದ್ರಶೇಖರ ನಾವಡ, ಎಸ್.ಡಿ.ಎಂ.ಸೊಸೈಟಿ ಕಾರ್ಯದರ್ಶಿ ಸತೀಶ್ಚಂದ್ರ , ಉಜಿರೆ ಶ್ರೀ ಜನಾರ್ದನ‌ ಸ್ವಾಮಿ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಶರತ್ಕೃಷ್ಣ ಪೆಡ್ವಟ್ನಾಯರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಧರಿತ್ರಿ ಭಿಡೆ, ಎಸ್.ಡಿ.ಎಂ. ಪದವಿ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಭರತನಾಟ್ಯ ವಿದ್ವತ್ಪೂರ್ವ ಹಂತದ ಪರೀಕ್ಷೆಯನ್ನು (ಭರತನಾಟ್ಯ ಪ್ರೌಢ) ಬೆಂಗಳೂರಿನ ಎಸ್- ವ್ಯಾಸ ವಿಶ್ವವಿದ್ಯಾಲಯದ ಎಸ್- ಸೊಸೈಟಿಯ ಸ್ಪೆಕ್ ಪರೀಕ್ಷೆಯ ಮೂಲಕ ಪ್ರಥಮ ರ್ಯಾಂಕ್ ನೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಹಂಸಿನಿ ಭಿಡೆ, ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಕಾಮರ್ಸ್ ವಿಭಾಗದ ವಿದ್ಯಾರ್ಥಿನಿಯಾಗಿದ್ದು ಕೆ.ಎಸ್.ಇ.ಬಿ ನಡೆಸಿದ್ದ ಭರತನಾಟ್ಯ ಸೀನಿಯರ್ ಪರೀಕ್ಷೆಯನ್ನು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಗುರು ಸುಮಂಗಲಾ ರತ್ನಾಕರ್ ರಾವ್ ಅವರ ನಟುವಾಂಗಂ ಮತ್ತು ನೃತ್ಯ ನಿರ್ದೇಶನದಲ್ಲಿ, ಅವರು ರಚಿಸಿರುವ ಭರತನಾಟ್ಯ ಕನ್ನಡ ಮಾರ್ಗಂನ ನೃತ್ಯಬಂಧಗಳಿಗೆ ಭಿಡೆ ಸಹೋದರಿಯರು ನೃತ್ಯ ಪ್ರಸ್ತುತಿ ನೀಡಲಿದ್ದು, ಹಿಮ್ಮೇಳದಲ್ಲಿ ಬೆಂಗಳೂರಿನ ರೋಹಿತ್ ಭಟ್ ಉಪ್ಪೂರು( ಗಾಯನ), ವಿನಯ್ ನಾಗರಾಜ್ ( ಮೃದಂಗ), ನಿತೀಶ್ ಅಮ್ಮಣ್ಣಾಯ (ಕೊಳಲು) ಹಾಗೂ ವೈ.ಜಿ. ಶ್ರೀಲತಾ ನಿಕ್ಷಿತ್ (ವೀಣೆ) ಭಾಗವಹಿಸಲಿದ್ದಾರೆ. ಉಚಿತ ಪ್ರವೇಶಾವಕಾಶವನ್ನು ಕಲ್ಪಿಸಿರುವ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ನಾಟ್ಯಾರಾಧನಾ ಕಲಾ ಕೇಂದ್ರದ ಟ್ರಷ್ಟಿ ಬಿ ರತ್ನಾಕರ ರಾವ್ ಹಾಗೂ ಧನಂಜಯ ಭಿಡೆ ತಿಳಿಸಿದ್ದಾರೆ.