ಹಿಂದೂಗಳು ಸಂಘಟಿತವಾದಾಗ ಮಾತ್ರ ಸಮುದಾಯ ಉನ್ನತಿ

KannadaprabhaNewsNetwork | Updated : Sep 30 2024, 01:22 AM IST

ಸಾರಾಂಶ

ಎಲ್ಲಾ ಹಿಂದೂಗಳು ಸಂಘಟಿತರಾದಾಗ ಮಾತ್ರ ಸಮುದಾಯ ಉನ್ನತಿ ಹೊಂದಲು ಸಾಧ್ಯ ಎಂದು ಕೇರಳದ ಇಡುಕ್ಕಿಯ ಪಚ್ಚಡಿ ಶ್ರೀ ನಾರಾಯಣಗುರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿಜು ಪುಳಿಕ್ಕಲೆಡತ್ತ್ ಹೇಳಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಎಲ್ಲಾ ಹಿಂದೂಗಳು ಸಂಘಟಿತರಾದಾಗ ಮಾತ್ರ ಸಮುದಾಯ ಉನ್ನತಿ ಹೊಂದಲು ಸಾಧ್ಯ ಎಂದು ಕೇರಳದ ಇಡುಕ್ಕಿಯ ಪಚ್ಚಡಿ ಶ್ರೀ ನಾರಾಯಣಗುರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿಜು ಪುಳಿಕ್ಕಲೆಡತ್ತ್ ಹೇಳಿದರು.ಅವರು ಭಾನುವಾರ ತಾಲೂಕಿನ ಬಿ.ಎಚ್. ಕೈಮರದಲ್ಲಿರುವ ನಾರಾಯಣಗುರು ಸಮುದಾಯ ಭವನದಲ್ಲಿ ಕೇರಳ ಹಿಂದೂ ಸಮಾಜದ ತಾಲೂಕು ಘಟಕ ಆಯೋಜಿಸಿದ್ದ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ 3 ನೇ ವರ್ಷದ ಓಣಂ ಆಚರಣೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಪ್ರತಿ ನಿತ್ಯ ರಾಮಾಯಣ, ಮಹಾಭಾರತ, ಭಗವದ್ಗೀತೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿನಿತ್ಯ ಪ್ರಾರ್ಥನೆ ಮಾಡಬೇಕು. ವಾರಕ್ಕೊಮ್ಮೆಯಾದರೂ ದೇವಸ್ಥಾನಕ್ಕೆ ಹೋಗಬೇಕು. ಗುರು ಹಿರಿಯರನ್ನು ಗೌರವಿಸಬೇಕು. ವೃದ್ಧಾಪ್ಯದಲ್ಲಿ ಪೋಷಕರನ್ನು ಸಲಹುವ ಕೆಲಸ ಮಾಡಬೇಕು. ಪ್ರಕೃತಿಯನ್ನು ಆರಾಧಿಸುವ ಮತ್ತು ಉಳಿಸುವ ಕೆಲಸ ಮಾಡಬೇಕು ಎಂದು ಜನರಿಗೆ ಕರೆ ನೀಡಿದರು.

ಜೀವನದಲ್ಲಿ ಒಳ್ಳೆಯ ಆಚಾರ, ವಿಚಾರಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಚಿಂತನೆಯನ್ನು ಬೆಳೆಸಿಕೊಳ್ಳಬೇಕು, ಕುಟುಂಬದಲ್ಲಿ ಎಲ್ಲರೂ ಒಟ್ಟಾಗಿ ಊಟ ಮಾಡಬೇಕು. ಇದರಿಂದ ಕುಟುಂಬಗಳು ಗಟ್ಟಿಯಾಗಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಬ್ರಹ್ಮಯಜ್ಞ, ದೇವಯಜ್ಞ, ಪಿತೃಯಜ್ಞ, ಭೂತಯಜ್ಞ ಹಾಗೂ ಮಾನಸಿಕ ಯಜ್ಞವನ್ನು ಪಾಲಿಸುವುದರಿಂದ ಕುಟುಂಬಗಳು ಸದೃಢವಾಗಲು ಸಾಧ್ಯವಾಗುತ್ತದೆ. ಮಹಾತ್ಮ ಗಾಂಧೀಜಿಯವರು ಹೇಳಿದಂತೆ ಮನುಷ್ಯನಲ್ಲಿ ಬೌದ್ಧಿಕ, ಶಾರೀರಿಕ ಮಾನಸಿಕ ಬೆಳವಣಿಗೆಗೆ ಶಿಕ್ಷಣ ಪೂರಕವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಬದುಕಿನ ಕಲೆಯನ್ನು ಕಲಿಸುವುದು ಅವಶ್ಯಕ ಎಂದು ತಿಳಿಸಿದರು.

ವೇದ, ಪುರಾಣ, ಉಪನಿಷತ್ತುಗಳು ಹೇಳುವುದು, ದೇವನೊಬ್ಬನೇ ನಾಮ ಹಲವು ಎಂದು. ಜಾತಿ ಯಾವುದಾದರೇನು? ಮೊದಲು ಮಾನವರಾಗಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧ ಭಾವವನ್ನು ಬಿಟ್ಟು ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಈ ಭಾವನೆಯನ್ನೇ ಸನಾತನ ಧರ್ಮದ ವೇದ, ಉಪನಿಷತ್ತು, ಪುರಾಣ ಒಳಗೊಂಡಿದೆ ಎಂದರು.ತಾಲೂಕು ನಾರಾಯಣಗುರು ಸಮಾಜದ ಅಧ್ಯಕ್ಷ ಪಿ.ಆರ್. ಸದಾಶಿವ ಮಾತನಾಡಿ, ಕೇರಳದಲ್ಲಿ ಶೋಷಣೆಗೊಳಗಾದ ಹಿಂದೂ ಸಮಾಜದವರು ನಾರಾಯಣ ಗುರುಗಳ ಮಾರ್ಗದರ್ಶನದಲ್ಲಿ ಸಂಘಟನೆಯಿಂದ ಬಲಯುತರಾಗಬೇಕು. ವಿದ್ಯೆ ಕಲಿತು ಸ್ವಾತಂತ್ರ್ಯರಾಗಿ ಎಂಬ ಸಂದೇಶದಂತೆ ಈಗ ಎಲ್ಲರೂ ಸಂಘಟಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ರಾಜಕೀಯವಾಗಿಯೂ ಅವಕಾಶಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿ, ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು ಎಂದರು.

ಕೇರಳ ಹಿಂದೂ ಸಮಾಜದ ಸಂಚಾಲಕ ಪಿ.ಆರ್. ಅರವಿಂದ ಮಾತನಾಡಿ, ಸಮಾಜದ ಸದಸ್ಯರ ಆಧ್ಯಾತ್ಮಿಕ ಅಭಿವೃದ್ಧಿಗಾಗಿ ರಾಮಾಯಣ ಪಠಣ, ಭಜನೆ,ಸಂಧ್ಯಾನಾಮಗಳನ್ನು ಕಲಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೇರಳ ಹಿಂದೂ ಸಮಾಜದ ಮುಖ್ಯಸ್ಥ ವಕೀಲ ಕೆ.ಪಿ. ಸುರೇಶ್ ಕುಮಾರ್ ಮಾತನಾಡಿ, ಸನಾತನ ಧರ್ಮವು ದೇವರ ಆರಾಧನೆ, ದೇವಸ್ಥಾನಕ್ಕೆ ಮಾತ್ರ ಸೀಮಿತವಾಗದೆ ನೃತ್ಯ, ಹಾಡು, ಭಜನೆಗಳಂತಹ ಕಲೆಗಳ ರೂಪದಲ್ಲಿಯೂ ಆರಾಧಿಸಲು ಅವಕಾಶ ನೀಡಿದೆ ಎಂದರು.

ಕೇರಳ ಹಿಂದೂ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಪಿ.ಆರ್. ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಹಿಂದೂ ಸಮಾಜದ ಮುಖಂಡ ಕೆ.ಎನ್. ಶಿವದಾಸ್, ವೆನಿಲ್ಲಾ ಭಾಸ್ಕರ್, ಸುಧಾಕರ ಆಚಾರ್ಯ ಮಾತನಾಡಿದರು. ಕೇರಳ ಸಮಾಜದ ಮುಖಂಡರಾದ ಒ.ಆರ್. ಬಿನು, ಮನೋಹರ್, ಕೆ.ಕೆ. ಸಜಿ ಉಪಸ್ಥಿತರಿದ್ದರು.

ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹೃದಯವಂತ ಡಾ.ವಿಷ್ಣುವರ್ಧನ್ ಪ್ರಶಸ್ತಿ ಪಡೆದ ಸಿಂಸೆಯ ಗಾಯಕಿ ವಿಶ್ರೇಯ, ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಸಿಂಚನ ಅವರನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Share this article