ಕನ್ನಡಪ್ರಭ ಸರಣಿ ವರದಿ ಭಾಗ : 127
ಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಂಪನಿಗಳು ವಿಷಕಾರಿ ರಾಸಾಯನಿಕ ತ್ಯಾಜ್ಯವನ್ನು ಹಳ್ಳಕೊಳ್ಳ-ನದಿಗಳಿಗೆ ಡ್ರೈನೇಜ್ ಮೂಲಕ ಕಳ್ಳತನದಿಂದ ಹೊರಬಿಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಈ ದೂರುಗಳ ಹಿನ್ನೆಲೆಯಲ್ಲಿ, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ, ದೂರು ದಾಖಲಾಗಿದ್ದರೂ ಸಹ, ಕಂಪನಿಗಳು ಎಂದಿನಂತೆ ಮತ್ತೇ ಮತ್ತೇ ತ್ಯಾಜ್ಯವನ್ನು ಹರಿಬಿಡುತ್ತಿರುವುದು ಭಾರಿ ಆತಂಕ ಮೂಡಿಸಿದೆ.ಕಳೆದೊಂದು ವಾರದಿಂದ ಮಳೆಯ ಮಧ್ಯೆ ನಿರಂತರ ತ್ಯಾಜ್ಯವನ್ನು ಹಳ್ಳ-ನದಿಗೆ ಹರಿಸಲಾಗುತ್ತಿದೆ. ಅಲ್ಲಿನ ರೈತರ ಹೊಲಗದ್ದೆಗಳಲ್ಲಿ ಬೇಕಾಬಿಟ್ಟಿಯಾಗಿ ತ್ಯಾಜ್ಯ ವಿಲೇವಾರಿ ಮಾಡಿ, ಟ್ಯಾಂಕರುಗಳು ಪರಾರಿಯಾಗಿದ್ದವು. ಇದೆಲ್ಲದರ ಪರಿಣಾಮ, ವಿಷಕಾರಿ ತ್ಯಾಜ್ಯ ನೀರಿಗೆ ಬೆರೆತಿದ್ದರಿಂದ ಹಳ್ಳದಲ್ಲಿನ ಎರಡು ದಿನಗಳ ಹಿಂದೆ ಸಾವಿರಾರು ಮೀನು-ಜಲಚರಗಳ ಮಾರಣಹೋಮದ ದೃಶ್ಯಗಳು ಕಂಡುಬಂದಿದ್ದವು. ಜನ-ಜಾನುವಾರುಗಳು ಹಳ್ಳಕೊಳ್ಳ-ನದಿ ನೀರನ್ನು ಬಳಸದಂತೆ ಜನರಿಗೆ ಸ್ಥಳೀಯರು ಎಚ್ಚರಿಸಿದ್ದರು.
------------
: ಇಮ್ತಿಯಾಜ್, ಕಡೇಚೂರು.
-----------ನಮ್ಮೂರಲ್ಲಿರುವ ಈ ರಾಸಾಯನಿಕ ಮತ್ತು ತ್ಯಾಜ್ಯ ವಿಲೇವಾರಿ ಕೈಗಾರಿಕೆಗಳು ಬಿಡುವ ದುರ್ನಾತದಿಂದ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅದರಂತೆ, ಪ್ರತಿ ಮಳೆಗಾಲದ ವೇಳೆಯಲ್ಲಿ ಮೀನುಗಳು ಸೇರಿದಂತೆ ಜಲಚರಗಳ ಮಾರಣಹೋಮ ನಡೆಯುತ್ತಿದೆ. ಇದರ ಬಗ್ಗೆ ಈ ವರ್ಷ ಸ್ಥಳೀಯರು ದೂರು ನೀಡಿದಾಗ, ಸ್ಥಳಕ್ಕೆ ಆಗಮಿಸಿ ತನಿಖೆ ಮಾಡುವ ಅಧಿಕಾರಿಗಳು, ಸತ್ತ ಮೀನುಗಳು ಮತ್ತು ಇಲ್ಲಿನ ನೀರನ್ನು ಪರೀಕ್ಷೆಗೆ ಕೊಂಡೊಯ್ಯುವ ಮೊದಲೇ, ಇವು ಕಂಪನಿಗಳ ರಾಸಾಯನಿಕ ತ್ಯಾಜ್ಯದಿಂದ ಸತ್ತಿರುವುದಿಲ್ಲ ಎಂದು ಸಮಜಾಯಿಸಿ ನೀಡುತ್ತಿರುವುದು ನೋಡಿದರೆ, ಅಧಿಕಾರಿಗಳಿಂದ ಸತ್ಯಾಸತ್ಯತೆ ವರದಿ ಹೇಗೆ ನಿರೀಕ್ಷಿಸಬಹುದು? ದಯವಿಟ್ಟು ಜಿಲ್ಲಾಧಿಕಾರಿಗಳು ವಿಶೇಷ ಗಮನಹರಿಸಿ ಈ ಘಟನೆಯನ್ನು ಅತ್ಯಂತ ದಕ್ಷ ಅಧಿಕಾರಿಗಳನ್ನೊಳಗೊಂಡ ತಂಡವನ್ನು ನೇಮಿಸಿ ವಿಚಾರಣೆ ಮಾಡಬೇಕು.: