ಹಳಿಯಾಳ: ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರ ಬೆಂಬಲಿಗರಾಗಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಅವರಿಗೆ ಹೆಗಲು ನೀಡಿದ್ದೇವೆ. ಆದರೆ, ಹಿರಿಯ ನಾಯಕ ದೇಶಪಾಂಡೆ ನಾಯಕತ್ವ, ವ್ಯಕ್ತಿತ್ವದ ಮುಂದೇ ಘೋಟ್ನೇಕರ ಏನೋ ಅಲ್ಲ. ದೇಶಪಾಂಡೆ ಎಂದಿಗೂ ಯಾರ ಕೆಡುಕನ್ನು ಭಯಸಿಲ್ಲ, ದ್ವೇಷದ ರಾಜಕಾರಣವನ್ನು ಮಾಡಲಿಲ್ಲ. ಆದರೆ ಘೋಟ್ನೇಕರ ಅದಕ್ಕೆ ತದ್ವಿರುದ್ಧವಾಗಿದ್ದರಿಂದ ಅವರನ್ನು ಬಿಟ್ಟು ದೇಶಪಾಂಡೆ ನಾಯಕತ್ವದಲ್ಲಿ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಘೋಟ್ನೇಕರ ಕಟ್ಟಾ ಬೆಂಬಲಿಗರಾಗಿರುವ ಜೆಡಿಎಸ್ ಮುಖಂಡರು ಹೇಳಿದ್ದಾರೆ.
ಘೋಟ್ನೇಕರ ಸಹವಾಸ ಸಾಕು, ನಾನು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದವನು. ಕಾಂಗ್ರೆಸ್‌ನಿಂದ ನಾನು ಗ್ರಾಪಂ ಸದಸ್ಯನಾದೆ. ರೈತ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷನಾಗಿಯೂ ಸೇವೆ ಸಲ್ಲಿಸುತ್ತಿದ್ದೇನೆ. ಆದರೆ ಘೋಟ್ನೇಕರ ಅವರ ಪ್ರಭಾವಕ್ಕೊಳಗಾಗಿ 2021ರಿಂದ ಕಾಂಗ್ರೆಸ್‌ನಿದ ಅಂತರ ಕಾಯ್ದುಕೊಂಡಿದ್ದೇ ನನ್ನ ದೊಡ್ಡ ತಪ್ಪು ಎಂದು ಅರಿವಾಗುತ್ತದೆ ಎಂದು ಹೇಳಿದರು.
ಘೋಟ್ನೇಕರ ಅವರೊಂದಿಗೆ ಇದ್ದರೆ ಯಾವುದೇ ಅಭಿವೃದ್ಧಿ ಆಗಲ್ಲ ಎಂಬ ಸತ್ಯವನ್ನು ಮನಗಂಡು ನಾನು ನಮ್ಮ ಮಿತ್ರರೂ ಘೋಟ್ನೇಕರ ಅವರ ಸಖ್ಯವನ್ನು, ಜೆಡಿಎಸ್ ಪಕ್ಷವನ್ನು ಬಿಡಲು ನಿರ್ಧರಿಸಿದ್ದೇವೆ ಎಂದರು.ಎಲ್ಲ ಹುದ್ದೆ ನನಗಿರಲಿ:
ಎಲ್ಲ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ತನಗೇ ಬೇಕು. ಎಲ್ಲ ಯೋಜನೆಗಳು ತನ್ನ ಮೂಗಿನಡಿಯಲ್ಲಿಯೇ ನಡೆಯಬೇಕು, ಎಲ್ಲ ಹುದ್ದೆ, ನಿದೇರ್ಶಕ ಸ್ಥಾನ ಎಲ್ಲವೂ ತನಗೆ ಬೇಕು ಎನ್ನುವ ಅವರು ತಾನು, ತನ್ನ ಕುಟುಂಬ, ತನ್ನ ಮಗ ಇವರಷ್ಟೇ ಉದ್ಧಾರವಾಗಬೇಕೆಂಬ ಚಿಂತನೆ ಅವರದ್ದು. ನಾವು ಮಾತ್ರ ಅವರ ಪಲ್ಲಕ್ಕಿ ಹೊರಬೇಕು ಎಂಬ ಮನಸ್ಥಿತಿ ಇದ್ದು. ಇದನ್ನು ನೋಡಿಯೇ ನಾವು ಅವರ ಸಂಗವನ್ನೇ ಬಿಡುತ್ತಿದ್ದೇವೆ ಎಂದರು.
ಯಾರೂ ಮಿತ್ರರಲ್ಲ, ಶತ್ರುಗಳೂ ಅಲ್ಲ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಮಾತನಾಡಿ, ರಾಜಕೀಯದಲ್ಲಿ ಯಾರೂ ಮಿತ್ರರು ಅಲ್ಲ ಶತ್ರುಗಳು ಅಲ್ಲ. ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವರೆಲ್ಲರೂ ನಮ್ಮ ಪಕ್ಷದವರೇ. ಬ್ಯಾಂಕಿನಲ್ಲಿ, ಸೊಸೈಟಿಗಳಲ್ಲಿ ಪಡೆದ ಸಾಲ, ಇತರೇ ಆರ್ಥಿಕ ಕಾರಣಗಳಿಂದ ಅವರೆಲ್ಲರೂ ಘೋಟ್ನೇಕರ ಭಯದಿಂದ ಅವರ ಬಳಿಯಿದ್ದರಷ್ಟೇ. ಅವರೆಲ್ಲರೂ ಈಗ ಭಯಮುಕ್ತರಾಗಿ ಅಕ್ಟೋಬರ್ 28ರಂದು ದೇಶಪಾಂಡೆಯವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದರು.