ಕನ್ನಡಪ್ರಭ ವಾರ್ತೆ ಭಟ್ಕಳ
ಮೃತರ ಕುಟುಂಬದವರು ತೀರಾ ಬಡವರು ಮತ್ತು ಕೂಲಿ ಮಾಡಿ ಜೀವನ ಸಾಗಿಸುವವರು. ಕೆಲವರಿಗೆ ಸಣ್ಣಮಕ್ಕಳಿದ್ದಾರೆ. ಮತ್ತೊಂದು ಕುಟುಂಬದಲ್ಲಿ ತಂದೆ, ತಾಯಿ ಇಬ್ಬರೂ ಇಲ್ಲದೇ ಮಕ್ಕಳು ಅನಾಥರಾಗಿದ್ದಾರೆ. ಕೆಲವರ ಮನೆಯೂ ಸುಸ್ಥಿತಿಯಲ್ಲಿಲ್ಲ. ಒಂದೊಂದು ಕುಟುಂಬದ್ದು ಒಂದೊಂದು ಕಥೆ. ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಮನಗಂಡ ಮಾಜಿ ಸಚಿವ ಮಂಕಾಳ ವೈದ್ಯ ಅವರು ಸರ್ಕಾರದಿಂದ ₹5 ಲಕ್ಷ, ತಾವು ನಿಭಾಯಿಸುತ್ತಿದ್ದ ಮೀನುಗಾರಿಕೆ ಇಲಾಖೆಯಿಂದ ₹10 ಲಕ್ಷ, ವೈಯಕ್ತಿಕವಾಗಿ ₹1 ಲಕ್ಷ ಮತ್ತು ತಾವು ಅಧ್ಯಕ್ಷರಿರುವ ಜನತಾ ಸಹಕಾರಿ ಸಂಘದಿಂದ ₹50 ಸಾವಿರ ಸೇರಿದಂತೆ ತಲಾ ಒಂದು ಕುಟುಂಬಕ್ಕೆ ₹16.50 ಲಕ್ಷ ಪರಿಹಾರ ಕೊಡಿಸಿದ್ದಾರೆ. ಸಂಘ-ಸಂಸ್ಥೆಗಳು, ದಾನಿಗಳೂ ಮೃತರ ಕುಟುಂಬಕ್ಕೆ ಸಹಾಯ-ಸಹಕಾರ ಮಾಡುವಂತೆ ಮನವಿ ಮಾಡಿದ್ದಾರೆ. ಅದೂ ಅಲ್ಲದೇ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳದೇ, ಮೃತ ಲಕ್ಷ್ಮೀ ಶಿವರಾಮ ನಾಯ್ಕ ಕುಟುಂಬಕ್ಕೆ ₹5 ಲಕ್ಷ ವೈಯಕ್ತಿಕವಾಗಿ ಮನೆ ನಿರ್ಮಿಸಿಕೊಳ್ಳಲು ಕೊಡುವುದಾಗಿ ಹೇಳಿದ್ದಾರೆ. ಅಲ್ಲದೆ ಅದೇ ದಿನ ಮನೆಗೆ ಅಡಿಗಲ್ಲು ಹಾಕುವುದಾಗಿ ಹೇಳಿದ್ದಾರೆ.
ಮಂಕಾಳ ವೈದ್ಯ ಮೀನುಗಾರಿಕೆ ಸಚಿವರು ಇಲ್ಲದೇ ಇದ್ದರೆ ಇಷ್ಟೊಂದು ಮೊತ್ತದ ಪರಿಹಾರ ಸಿಗುವುದು ಕಷ್ಟಸಾಧ್ಯವಾಗಿತ್ತು. ಸರ್ಕಾರ ಕೊಟ್ಟಿದ್ದಲ್ಲದೇ, ಅವರು ತಮ್ಮ ಇಲಾಖೆಯಿಂದ ನೊಂದ ಕುಟುಂಬಕ್ಕೆ ಪರಿಹಾರ ಒದಗಿಸುವಲ್ಲಿ ಶತಪ್ರಯತ್ನ ಪಟ್ಟಿದ್ದಾರೆ. ಅದೂ ಅಲ್ಲದೇ ಸಂತ್ರಸ್ತರ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಮಕ್ಕಳು ಒಪ್ಪಿದರೆ ತಮ್ಮ ಶಿಕ್ಷಣ ಸಂಸ್ಥೆಯಲ್ಲೇ ಉಚಿತ ಶಿಕ್ಷಣ ನೀಡುವುದಾಗಿಯೂ ಹೇಳಿದ್ದಾರೆ. ಸಾಮಾನ್ಯವಾಗಿ ಸರ್ಕಾರದಿಂದ ಇಷ್ಟೊಂದು ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಡುವುದು ಸುಲಭವಲ್ಲ. ಅದೂ ಮೃತಪಟ್ಟ 5 ದಿನಗಳಲ್ಲಿ. ಮಂಕಾಳ ವೈದ್ಯ ಅವರ ಕಳಕಳಿ ಮತ್ತು ಸತತ ಪ್ರಯತ್ನವೇ ಇದಕ್ಕೆ ಕಾರಣವಾಗಿದೆ. ಮಂಕಾಳ ವೈದ್ಯ ಅವರು ಜಲದುರಂತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಾನವೀಯ ನೆಲೆಯಲ್ಲಿ ಮೃತರ ಕುಟುಂಬಕ್ಕೆ ಸಹಾಯ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.