ರಸ್ತೆ ಅಗಲೀಕರಣಕ್ಕೆ ಜಾಗ ನೀಡಿದವರಿಗೆ ಈಗಾಗಲೇ ಪರಿಹಾರ ಹಣ: ಉಪ ವಿಭಾಗಾಧಿಕಾರಿ ನಟೇಶ್

KannadaprabhaNewsNetwork |  
Published : Jun 19, 2026, 01:30 AM IST
ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ  ತರೀಕೆರೆ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಸ್ತೆ ವಿಸ್ತರಣೆ ವ್ಯಾಪ್ತಿಯ ಖಾತೆದಾರರ ಸಭೆ ನಡೆಯಿತು. | Kannada Prabha

ಸಾರಾಂಶ

ನರಸಿಂಹರಾಜಪುರಪಟ್ಟಣದ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ ಅಗಲೀಕರಣಕ್ಕೆ ಒಪ್ಪಿಗೆ ನೀಡಿ ಜಾಗ ನೋಂದಣಿ ಮಾಡಿಕೊಟ್ಟವರಿಗೆ ಪರಿಹಾರದ ಹಣವನ್ನು ಖಾತೆಗೆ ಪಾವತಿ ಮಾಡಲಾಗಿದೆ. ಮನೆ, ನಿವೇಶನ ತೆರವುಗೊಳಿಸಿಕೊಳ್ಳಲು ಸಾಕಷ್ಟು ಸಮಯ ನೀಡಲಾಗಿದೆ. ಶೀಘ್ರವೇ ನಿವೇಶನ ಬಿಟ್ಟುಕೊಡಬೇಕು ಎಂದು ತರೀಕೆರೆ ಉಪವಿಭಾಗಾಧಿಕಾರಿ ಹಾಗೂ ಭೂಸ್ವಾಧೀನ ಅಧಿಕಾರಿ ನಟೇಶ್ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ರಸ್ತೆ ವಿಸ್ತರಣೆ ವ್ಯಾಪ್ತಿಯ ಖಾತೆದಾರರ ಸಭೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪಟ್ಟಣದ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ ಅಗಲೀಕರಣಕ್ಕೆ ಒಪ್ಪಿಗೆ ನೀಡಿ ಜಾಗ ನೋಂದಣಿ ಮಾಡಿಕೊಟ್ಟವರಿಗೆ ಪರಿಹಾರದ ಹಣವನ್ನು ಖಾತೆಗೆ ಪಾವತಿ ಮಾಡಲಾಗಿದೆ. ಮನೆ, ನಿವೇಶನ ತೆರವುಗೊಳಿಸಿಕೊಳ್ಳಲು ಸಾಕಷ್ಟು ಸಮಯ ನೀಡಲಾಗಿದೆ. ಶೀಘ್ರವೇ ನಿವೇಶನ ಬಿಟ್ಟುಕೊಡಬೇಕು ಎಂದು ತರೀಕೆರೆ ಉಪವಿಭಾಗಾಧಿಕಾರಿ ಹಾಗೂ ಭೂಸ್ವಾಧೀನ ಅಧಿಕಾರಿ ನಟೇಶ್ ಹೇಳಿದರು.ಗುರುವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ರಸ್ತೆ ವಿಸ್ತರಣೆ ವ್ಯಾಪ್ತಿಯ ಖಾತೆದಾರರ ಸಭೆಯಲ್ಲಿ ಮಾತನಾಡಿದರು. ನೋಂದಣಿ ಮಾಡಿಕೊಟ್ಟ ಮೇಲೆ ನಿವೇಶನ ಸರ್ಕಾರಕ್ಕೆ ಸೇರಿದ್ದಾಗಿದೆ. ಹಣಪಾವತಿಯಾದವರಲ್ಲಿ ಕೇವಲ ಬೆರಳೆಣಿಕೆಯಷ್ಟು ಖಾತೆದಾರರು ಮಾತ್ರ ಮನೆ ತೆರವುಗೊಳಿಸಿದ್ದಾರೆ. ಉಳಿದವರು ಶೀಘ್ರವಾಗಿ ತೆರವು ಗೊಳಿಸದಿದ್ದರೆ ಗುತ್ತಿಗೆದಾರರು ಯಂತ್ರಗಳನ್ನು ಬಳಸಿ ತೆರವುಗೊಳಿಸುವ ಕಾರ್ಯ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ಖಾತೆದಾರರೇ ಜವಾಬ್ಧಾರರಾಗಬೇಕಾಗುತ್ತದೆ ಎಂದರು.

ರಸ್ತೆ ಅಗಲೀಕರಣ ವ್ಯಾಪ್ತಿಯಲ್ಲಿ 71 ಖಾತೆದಾರರರು ನೊಂದಣಿ ಮಾಡಿಕೊಟ್ಟಿದ್ದು ಪರಿಹಾರ ಖಾತೆಗೆ ಪಾವತಿಸಲಾಗಿದೆ. ಇನ್ನೂ 65 ಖಾತೆದಾರರು ನೊಂದಣಿ ಮಾಡಿಕೊಡಬೇಕಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಪ್ರತಿ ಚದರ ಅಡಿಗೆ ₹6.500 ಸಾವಿರ ಇದ್ದು ರಸ್ತೆ ಅಗಲೀಕರಣಕ್ಕೆ ನಿವೇಶನ ಬಿಟ್ಟುಕೊಟ್ಟವರಿಗೆ ಪ್ರತಿ ಚದರ ಅಡಿಗೆ ₹12 ಸಾವಿರದಂತೆ ಉತ್ತಮ ಪರಿಹಾರ ನೀಡಲಾಗುತ್ತಿದೆ. ಖಾತೆದಾರರು ತಾವಾಗಿಯೇ ಒಪ್ಪಿ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟು ಕೊಟ್ಟಲ್ಲಿ ದಾಖಲೆ ಸಲ್ಲಿಸಿದ ಕೂಡಲೇ ಪರಿಹಾರ ಶೀಘ್ರ ಖಾತೆಗೆ ಜಮೆಯಾಗುತ್ತದೆ. ಭೂ ಸ್ವಾಧೀನದ ಮೂಲಕ ನಿವೇಶನ ಸ್ವಾಧೀನ ಪಡಿಸಿ ಕೊಂಡರೆ ಇದಕ್ಕೆ ನಡೆಯುವ ಪ್ರಕ್ರಿಯೆ ಬೇರೆ ಸ್ವರೂಪದ್ದಾಗಿರುತ್ತದೆ. ಪರಿಹಾರ ಸಿಗುವುದು ವಿಳಂಬವಾಗುವ ಸಾಧ್ಯತೆಯಿದೆ. ರಸ್ತೆ ವಿಸ್ತರಣೆಗೆ ಜಾಗ ಬಿಡಲು ಒಪ್ಪಿಗೆ ನೀಡದವರ ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, ರಸ್ತೆ ಅಗಲೀಕರಣದಿಂದ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಹಿಂದೆ ನಡೆದ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ನೀಡಿದ ಭರವಸೆಯಂತೆ ಆಶ್ರಯ ನಿವೇಶನ ನೀಡ ಲಾಗುವುದು. ಪ್ರವಾಸಿಮಂದಿರ ಸಮೀಪ ಅನಧಿಕೃತವಾಗಿ 10 ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಇದರಲ್ಲಿ ರಸ್ತೆ ಅಗಲೀಕರಣವಾದರೆ 2-3 ಕುಟುಂಬಗಳು ಸಂಪೂರ್ಣ ಮನೆ ಕಳೆದುಕೊಳ್ಳಲಿವೆ. ಮಾನವೀಯ ನೆಲೆಗಟ್ಟಿನಲ್ಲಿ ಈ ಕುಟುಂಬಗಳಿಗೆ ಪರಿಹಾರ ನೀಡಲು ಕ್ರಮಕೈಗೊಳ್ಳ ಬೇಕೆಂದು ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಜುಬೇದ ಮಾತನಾಡಿ, ಅನಧಿಕೃತ ಮನೆ ನಿರ್ಮಿಸಿಕೊಂಡವರಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಅಧಿಕಾರಿ ತಹಸೀಲ್ದಾರ್ ನೂರುಲ್ ಹುದಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಲೋಕೋಪಯೋಗಿ ಎಂಜಿನಿಯರ್ ದಿನೇಶ್ ನಾಯ್ಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಯ್ಸಳರ ಪರಂಪರೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ ಲತಾಕುಮಾರಿ
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿರ್ಲಕ್ಷ್ಯ ಬೇಡ: ಜಿಲ್ಲಾಧಿಕಾರಿ ಲತಾಕುಮಾರಿ